ವಾಸ್ತವತೆಯಆಭಾಸವನ್ನುಂಟುಮಾಡುವಚಿತ್ರಣ ಮತ್ತುದೇವಾಲಯದಅತೀಂದ್ರಿಯವಾದ

ಸಾಂಪ್ರದಾಯಿಕಹಿಂದೂಆಂತರಿಕಅನುಭವಹಾಗೂವಿಕಸನಗೊಳ್ಳುತ್ತಿರುವಡಿಜಿಟಲ್ಪ್ರಪಂಚಮತ್ತುಬ್ರಹ್ಮಾಂಡವನ್ನುಮೀರಿಸುವಂಥಪ್ರಪಂಚಗಳತುಲನೆ

ಸದ್ಗುರುಬೋಧಿನಾಥವೇಲನ್ಸ್ವಾಮಿ

ಕಳೆದ ತಲೆಮಾರಿನ ಜನರಿಗೆ ಹೋಲಿಸಿದರೆ ಇಂದಿನ ಯುವ ಪೀಳಿಗೆ ಎಲ್ಲಾ ಡಿಜಿಟಲ್ ವಿಷಯಗಳಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದೆ ಎಂಬುದು ರಹಸ್ಯವಾದ ಸಂಗತಿಯೇನೂ ಅಲ್ಲ. ಡಿಜಿಟಲ್ ಅನುಭವ ಹೆಚ್ಚು ವಾಸ್ತವಿಕವಾಗಿ ಮತ್ತು ತೀವ್ರವಾಗಿ ಆಸಕ್ತಿ ಕೆರಳಿಸುವ ವಿಷಯವಾಗಿ ತ್ವರಿತವಾಗಿ ಬೆಳೆಯುವುದರಿಂದ, ಅದರ ಸರಿಯಾದ ಬಳಕೆಯಿಂದ ಹಿಂದೂ ಧರ್ಮದ ದೇವ ದೇವತೆಯರ ಮತ್ತು ಆಂತರಿಕ ಪ್ರಪಂಚಗಳ ಬಗ್ಗೆ ಯುವ ಪೀಳಿಗೆಯ ಆಸಕ್ತಿಯನ್ನು ಹೆಚ್ಚಿಸುವುದು ಸಾಧ್ಯವಾಗಬಹುದು. “ಅಭೌತಿಕವಾದ ಡಿಜಿಟಲ್ ಪ್ರಪಂಚದ ಅನುಭವ ಯುವ ಪೀಳಿಗೆಗೆ ಅಭೌತಿಕವಾದ ಆಧ್ಯಾತ್ಮಿಕ ಪ್ರಪಂಚಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಪ್ರಭಾವವನ್ನು ಗ್ರಹಿಸಲು ಸಹಾಯ ಮಾಡುತ್ತದೆಯೇ?” ಎನ್ನುವುದು ನನ್ನ ಪ್ರಶ್ನೆ.  ಇದನ್ನು ಅನ್ವೇಷಿಸಲು, ನಾವು ಪ್ರಮುಖ ಡಿಜಿಟಲ್ ಪ್ರವೃತ್ತಿಗಳನ್ನು ಅವಲೋಕಿಸಬೇಕು.

ಬಹು ಮುಂಚೆ ಕಂಪ್ಯೂಟರ್-ಮೂಡಿಸಿದ ವಾಸ್ತವಿಕ ಪ್ರಪಂಚಗಳು ಮತ್ತು ಚಿತ್ರಗಳನ್ನು ಕ್ರಮವಾಗಿ ಕಂಪ್ಯೂಟರ್-ರಚಿತ ಚಿತ್ರಣ (CGI) ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಅನಿಮೇಷನ್ (CGA) ಎಂದು ಕರೆಯಲಾಗುತ್ತದೆ. ಕಳೆದ ಕೆಲವು ದಶಕಗಳಲ್ಲಿ, ಕಂಪ್ಯೂಟರ್ ನೆರವಿನಿಂದ ಭ್ರಾಂತಿಯನ್ನು ಉಂಟುಮಾಡುವುದರ ಗುಣಮಟ್ಟ ಗಮನಾರ್ಹವಾಗಿ ಹೆಚ್ಚಾಗಿದೆ. 2021ರ ಅಕಾಡೆಮಿ-ಪ್ರಶಸ್ತಿ ವಿಜೇತ ಕಂಪ್ಯೂಟರ್-ಅನಿಮೇಟೆಡ್ ಸಂಗೀತ ಮತ್ತು ಹಾಸ್ಯದ ಕಲ್ಪನಾಚಿತ್ರ ಎನ್ಕಾಂಟೊ (Encanto) ತೆಗೆದುಕೊಳ್ಳಿ. ಅಥವಾ ಗಮನವನ್ನು ತೀವ್ರವಾಗಿ ಕೆರಳಿಸುವ ಅನುಭವವನ್ನು ಉಂಟುಮಾಡುವ  ಹೊಸ ಅವತಾರ್ (Avatar ) ಚಿತ್ರವನ್ನು ತೆಗೆದುಕೊಳ್ಳಿ. ಈ ಚಲನಚಿತ್ರಗಳ ವೀಕ್ಷಕರು ಬಹುಬೇಗ ಅದರ ಪಾತ್ರಗಳು ಜೀವಂತ ಪಾತ್ರಗಳಲ್ಲ ಎಂಬುದನ್ನು ಮರೆತು ನಿಜವಾದ ನಟರಂತೆ ಅವರೊಡನೆ  ಸಂಬಂಧ ಕಲ್ಪಿಸಲು ಪ್ರಾರಂಭಿಸುತ್ತಾರೆ. ಆದರೆ ಇಂಥ ಅನುಭವಗಳಲ್ಲಿ, ವೀಕ್ಷಕ ಕಥೆಯೊಡನೆ ಸಂವಹನ ನಡೆಸಲು ಸಾಧ್ಯವಾಗದೆ ನಿಷ್ಕ್ರಿಯನಾಗಿರುತ್ತಾನೆ.

ಆದರೆ ಡಿಜಿಟಲ್ ಗೇಮಿಂಗ್ ಆರಂಭಿಕ ಸ್ವರೂಪವಾದ ಪಾಂಗ್ (Pong) ಮತ್ತು ಟೆಟ್ರಿಸ್ (Tetris)ಗಳಿಂದ ಬೃಹತ್ ಹಲವರು ಒಟ್ಟಿಗೆ ಆಡಬಹುದಾದ ಆನ್ಲೈನ್ ಆಟಗಳಾಗಿ (MMOs) ವಿಕಸನ ಹೊಂದಿದೆ. ಸಾವಿರಾರು, ಲಕ್ಷಾಂತರ ಆಟಗಾರರು ಒಟ್ಟಿಗೆ ಇದರಲ್ಲಿ ತಲ್ಲೀನರಾಗಬಹುದು. ಸುಧಾರಿತ ಆಟಗಳು ಚಲನಚಿತ್ರದ ವ್ಯಂಗ್ಯಚಿತ್ರಗಳಿಗಿಂತ ಹೆಚ್ಚು ನೈಜವಾದ ಚಿತ್ರಗಳನ್ನು (ಗ್ರಾಫಿಕ್ಸ್) ಹೊಂದಬಹುದು ಮತ್ತು ವಿಶಾಲವಾದ ಮತ್ತು ಸಂಚರಿಸಬಹುದಾದ ಪ್ರಪಂಚಗಳನ್ನು ಪಡೆದಿರುವ ಹೆಗ್ಗಳಿಕೆಯನ್ನು ಹೊಂದಬಹುದು; ಪ್ರಸ್ತುತ ಅತಿದೊಡ್ಡ ಡಿಜಿಟಲ್ ಭೌಗೋಳಿಕತೆ 62,000 ಚದರ ಮೈಲುಗಳ ಪ್ರದೇಶವನ್ನು ಒಳಗೊಂಡಿದೆ. ಇದು ಒಟ್ಟಳತೆ ಹೆಚ್ಚೂ ಕಡಿಮೆ ಗ್ರೇಟ್ ಬ್ರಿಟನ್ ಗೆ ಸಮಾನವಾದುದಾಗಿದೆ.

ಇತ್ತೀಚಿನ ತಂತ್ರಜ್ಞಾನಗಳು ಅವುಗಳ ಬಳಕೆದಾರರು ಅದೇ ಜಾಗವನ್ನು ಹಂಚಿಕೊಳ್ಳುವ ಇತರರೊಂದಿಗೆ ವಾಸ್ತವವಾಗಿ ಭೌತಿಕ ಅಸ್ತಿತ್ವದಲ್ಲಿ ಇಲ್ಲದಿರುವ ಆದರೆ ಅಸ್ತಿತ್ವದಲ್ಲಿ ಇರುವಂತೆ ತೋರುವ (ವರ್ಚುವಲ್) ಪರಿಸರವನ್ನು ಕ್ರಿಯಾಶೀಲವಾಗಿ ಅನ್ವೇಷಿಸಲು ಅನುವು ಮಾಡಿಕೊಟ್ಟು, ಚಲನಚಿತ್ರಗಳು ಅಥವಾ ಗೇಮಿಂಗ್ (gaming)ಗಳನ್ನು ಮೀರಿಸುವ ಡಿಜಿಟಲ್ ಅನುಭವವನ್ನು ಉಂಟುಮಾಡುತ್ತವೆ. ಆಗ್ಮೆಂಟೆಡ್ ರಿಯಾಲಿಟಿ (AR) ಕಂಪ್ಯೂಟರ್-ರಚಿಸಿದ ಚಿತ್ರವನ್ನು ನೈಜ ಪ್ರಪಂಚದ ಬಳಕೆದಾರರ ನೋಟಕ್ಕೆ ಅಧ್ಯಾರೋಪಿಸಿ, ಸಂಯೋಜಿತ ಅನುಭವವನ್ನು ಮೂಡಿಸುತ್ತದೆ. ಉದಾಹರಣೆಗೆ, ಈ ತಂತ್ರಜ್ಞಾನವನ್ನು ಬಳಸಿಕೊಂಡು ಒಂದು ಮೇಜಿನ ಮೇಲೆ ಗಣೇಶನ ಡಿಜಿಟಲ್ ಶಿಲ್ಪವನ್ನು ಇರಿಸಬಹುದು, ಅದಕ್ಕೆ ಪ್ರದಕ್ಷಿಣೆ ಬರಬಹುದು ಅಥವಾ ಅದು ವಾಸ್ತವವಾಗಿ ಕೋಣೆಯಲ್ಲಿಯೇ ಇದೆಯೋ ಎನ್ನುವಂತೆ ಅದನ್ನು ಎತ್ತಬಹುದು.ವರ್ಚುವಲ್ ರಿಯಾಲಿಟಿ (VR) ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಅತ್ಯಾಧುನಿಕ ಕನ್ನಡಕಗಳನ್ನು ಬಳಸಿಕೊಂಡು ನಿಜವಲ್ಲದ, ಆದರೆ ನಿಜವೆಂದು ತೋರುವ, ಅನೇಕ ಬಳಕೆದಾರರಿಂದ ಕೂಡಿರುವ ಸಂಪೂರ್ಣ ಕಂಪ್ಯೂಟರ್-ಸೃಷ್ಟಿಸಿದ ಪರಿಸರವನ್ನು ರಚಿಸಬಹುದು. ಅದರ AR/VR ವೇದಿಕೆಗಾಗಿ ಫೇಸ್ ಬುಕ್ ಜನಪ್ರಿಯಗೊಳಿಸಿದ “ಮೆಟಾವರ್ಸ್” ಎಂಬ ಪದ ಈ ತಂತ್ರಜ್ಞಾನಗಳನ್ನು MMO ಗಳಲ್ಲಿ ಬಳಸಿದಂತೆ ಸುಧಾರಿತ ವರ್ಚುವಲ್ ಪ್ರಪಂಚಗಳೊಂದಿಗೆ ಸಂಯೋಜಿಸುತ್ತದೆ. ಒಬ್ಬ ಬಳಕೆದಾರ ಮೆಟಾವರ್ಸ್ ನ ಬಳಕೆಯನ್ನು ಕೊನೆಗೊಳಿಸಿದರೂ (ಲಾಗ್ ಆಫ್ ಆಗಿದ್ದರೂ) ಈ ಪ್ರಪಂಚಗಳು ಸಕ್ರಿಯವಾಗಿರುತ್ತವೆ ಮತ್ತು “ಜೀವಂತವಾಗಿ” ಉಳಿಯುತ್ತವೆ. ಇಂಥ ವರ್ಚುವಲ್ ದೃಶ್ಯಗಳನ್ನು ಆಟಕ್ಕಾಗಿ ಮಾತ್ರವಲ್ಲ, ಕೆಲಸದಲ್ಲಿ, ಸೃಜನಶೀಲತೆಯಲ್ಲಿ ಅಥವಾ ಸಾಮಾಜಿಕವಾಗಿಯೂ ಬಳಸಬಹುದು.

ಯುವ ಪೀಳಿಗೆ ಈ ತಂತ್ರಜ್ಞಾನಗಳೊಂದಿಗೆ ತುಂಬಾ ಆಳವಾದ ಸಂಬಂಧ ಹೊಂದಿರುವುದು ಅಚ್ಚರಿಯ ಸಂಗತಿಯಲ್ಲ. ಏಕೆಂದರೆ ಅವರು ನೈಜ ಜಗತ್ತನ್ನು ಕಲ್ಪನೆಯೊಂದಿಗೆ ಸಮ್ಮಿಶ್ರಣಗೊಳಿಸುತ್ತಾರೆ,  ಅಕ್ಷರಶಃ ಈ ಪ್ರಪಂಚಕ್ಕೆ ಸಂಬಂಧಿಸದ, ಅನಂತ ಸಾಧ್ಯತೆಗಳನ್ನು ಹೊಂದಿರುವ ಸಾಹಸಗಾಥೆಗಳನ್ನು ಮೂಡಿಸುತ್ತಾರೆ. ಇದು ಸ್ಟೀರಾಯ್ಡ್ ಬಳಸಿ ಗ್ರಿಮ್ಸ್ ಬರೆದ ಕಾಲ್ಪನಿಕ ಕಥೆಗಳು ಎನ್ನಬಹುದು.

ಐಹಿಕ, ಭೌತಿಕ, ಮತ್ತು ಅಭೌತಿಕವಾದ ಕಲ್ಪನೆಯನ್ನು ತ್ರಿಲೋಕಗಳ ಪ್ರಾಚೀನ ಹಿಂದೂ ಪರಿಕಲ್ಪನೆಯಲ್ಲಿ ಕಾಣಬಹುದು, ಇವು ಬ್ರಹ್ಮಾಂಡದ ಪ್ರಧಾನ ವಿಭಾಗಗಳಾಗಿವೆ. ಬೃಹದಾರಣ್ಯಕ ಉಪನಿಷತ್ತಿನ ಪ್ರಕಾರ: “ಮೂರು ಲೋಕಗಳಿರುವುದು ಸತ್ಯ: ಮನುಷ್ಯರ ಜಗತ್ತು, ಪಿತೃಗಳ ಜಗತ್ತು ಮತ್ತು ದೇವರ ಜಗತ್ತು. ಎಲ್ಲ ಪ್ರಪಂಚಗಳಲ್ಲಿ ದೇವರ ಪ್ರಪಂಚ ನಿಜವಾಗಿ ಅತ್ಯುತ್ತಮವಾದುದಾಗಿದೆ.” ನಮ್ಮ ಹಿಮಾಲಯನ್ ಅಕಾಡೆಮಿಯ ನಿಘಂಟು ಈ ವಿವರಣೆಯನ್ನು ನೀಡುತ್ತದೆ: 1) ಭೂಲೋಕ: “ಭೂಮಿಯ ಪ್ರಪಂಚ,” ಭೌತಿಕ ಸ್ತರ; 2) ಅಂತರ್ ಲೋಕ: “ಒಳಗಿನ” ಅಥವಾ “ಜಗತ್ತಿನ ನಡುವಿನ, ” ಸೂಕ್ಷ್ಮ ಸ್ತರ ಅಥವಾ ಆಸ್ಟ್ರಲ್ ಪ್ಲೇನ್  (astral plane); 3) ಶಿವಲೋಕ: “ಶಿವಲೋಕ” ಮತ್ತು ದೇವದೇವತೆಯರ ಮತ್ತು ಮೋಕ್ಷ ಪಡೆದ ಆತ್ಮಗಳ ಸ್ತರ – ಕಾರಣಲೋಕ (causal plane).

ಜನರು ಡಿಜಿಟಲ್ ಸಾಧನಗಳ ಮೂಲಕ ಅನುಭವಿಸಬಹುದಾದ ವರ್ಚುವಲ್ ಪ್ರಪಂಚಗಳನ್ನು ರಚಿಸಲು ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ. ಅದೇ ರೀತಿಯಲ್ಲಿ ಹಿಂದೂ ದೇವಾಲಯ ಆಸ್ಟ್ರಲ್ ಸ್ತರ ಮತ್ತು ಕಾರಣ ಸ್ತರ – ಈ ಎರಡು ನೈಜವಾದ  ಭೌತಿಕವಲ್ಲದ ಪ್ರಪಂಚಗಳನ್ನು- ಅನುಭವಿಸಲು ಒಂದು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಕಾರಣ ಸ್ತರದ ಅನುಭವವನ್ನು ನಿರ್ದಿಷ್ಟವಾಗಿ ಪಡೆಯುವುದು ಕಷ್ಟ.  ದೇವಾಲಯದಲ್ಲಿ ಆರಾಧನೆಯ ಮೂಲಕ ಇದನ್ನು ಸುಲಭವಾಗಿ ಸಮೀಪಿಸಬಹುದು. ನನ್ನ ಗುರುಗಳಾದ ಶಿವಾಯ ಸುಬ್ರಮುನಿಯಸ್ವಾಮಿ: “ಎಲ್ಲ ಶೈವರು  ತ್ರಿಲೋಕಗಳು ಸಾಮರಸ್ಯದಿಂದ ಕೆಲಸ ಮಾಡುವುದೇ ಧರ್ಮ. ಈ ಸಾಮರಸ್ಯವನ್ನು ದೇವಾಲಯದ ಆರಾಧನೆಯ ಮೂಲಕ ಮೂಡಿಸಬಹುದು, ಅಲ್ಲಿ ತ್ರಿಲೋಕಗಳ ಜೀವಿಗಳು ಪರಸ್ಪರ ಸಂಪರ್ಕ ಹೊಂದಬಹುದು ಎಂದು ನಂಬುತ್ತಾರೆ” ಎಂದು ಸಾರಿದ್ದಾರೆ.

ದೇವಾಲಯದ ಆರಾಧನೆಯ ಸಮಯದಲ್ಲಿ, ಭಗವಂತ ಸೂಕ್ಷ್ಮ ರೂಪ ತಳೆದು ಮೂರ್ತಿಯ ಬಳಿ ಸುಳಿದಾಡುತ್ತಾನೆ. ಶೈವ ಅಜಿತ ಆಗಮದ ಒಂದು ಶ್ಲೋಕವು ಹೀಗೆ ಹೇಳುತ್ತದೆ: “ಲಿಂಗದಲ್ಲಿ ಸದಾಶಿವನ ಉಪಸ್ಥಿತಿಯನ್ನು ಆವಾಹನೆ ಮಾಡುವ ಉದ್ದೇಶದಿಂದ ಶಿವಲಿಂಗವನ್ನು ಪೂಜಿಸುತ್ತೇವೆ.” ವೈಷ್ಣವ ಸಾತ್ವತ ಸಂಹಿತೆಯಲ್ಲಿ ಈ ಪರಿಕಲ್ಪನೆಯನ್ನು ಹೀಗೆ ವಿವರಿಸಲಾಗಿದೆ: “ಸಂಪೂರ್ಣವಾಗಿ ವಿನ್ಯಾಸಗೊಳಿಸಲಾದ ಮೂರ್ತಿಯನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿದಾಗ, ಭಗವಂತ ಆ ಪವಿತ್ರ ಮೂರ್ತಿಯಲ್ಲಿ ನೆಲಸುತ್ತಾನೆ. ಕೃಪೆತೋರಿ ಆ ಮೂರ್ತಿಯಲ್ಲಿ ನೆಲಸುವುದರಿಂದ, ಅವನು ತನ್ನ ಎಲ್ಲಾ ಅತೀಂದ್ರಿಯವಾದ ಮತ್ತು ದುರ್ಗ್ರಾಹ್ಯವಾದ ಗುಣಗಳಿಗೆ ಇಂದ್ರಿಯಗೋಚರ ಅಭಿವ್ಯಕ್ತಿ ನೀಡುತ್ತಾನೆ.” ಇದು ಆಗ್ಮೆಂಟೆಡ್ ರಿಯಾಲಿಟಿ (AR) ತಂತ್ರಜ್ಞಾನವನ್ನು ಹೋಲುತ್ತದೆ, ಇದರಲ್ಲಿ ಯುವ ಪೀಳಿಗೆಯವರು ಭೌತಿಕ ಹಾಗೂ ಅಭೌತಿಕ ಪ್ರಪಂಚಗಳ ನಡುವೆ ಸಂಪರ್ಕ ಏರ್ಪಡಿಸುವುದನ್ನು ಅನ್ವೇಷಿಸುತ್ತಿದ್ದಾರೆ, ಎರಡನ್ನೂ ಅರ್ಥಮಾಡಿಕೊಳ್ಳಲು ತಮ್ಮ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ.  

ಹೆಚ್ಚಿನ ವಾಸ್ತವತೆಯನ್ನು (augmented reality) ಅನುಭವಿಸಲು, ಶಕ್ತಿಶಾಲಿ ಮೈಕ್ರೊಪ್ರೊಸೆಸರ್, ಸುಧಾರಿತ ಕ್ಯಾಮೆರಾ ಮತ್ತು ನೈಜ-ಸಮಯದ ದೃಶ್ಯವಸ್ತುವನ್ನು ಗುರುತಿಸುವ ಡಿಜಿಟಲ್ ಸಾಧನದ ಅಗತ್ಯವಿದೆ. ಕ್ಯಾಮೆರಾಗಳು ಸುತ್ತಮುತ್ತಲಿನ ನೈಜ ಪ್ರಪಂಚದಿಂದ ಮಾಹಿತಿಯನ್ನು ಸೆರೆಹಿಡಿಯುತ್ತವೆ, ಅನಂತರ ದೃಶ್ಯವಸ್ತುಗಳನ್ನು ಪತ್ತೆಹಚ್ಚಿ ಕಂಪ್ಯೂಟರ್ ನ ಪ್ರಾಪಂಚಿಕ ತಿಳುವಳಿಕೆಗೆ ಹೊಂದಿಸಲಾಗುತ್ತದೆ. ಇದರಲ್ಲಿ ವಾಸ್ತವತೆಯ ಆಭಾಸವನ್ನುಂಟುಮಾಡುವ  ವಿವರಣೆಗಳನ್ನು ಸೇರಿಸಬಹುದು. ಸಂವೇದಕಗಳು (Sensors) ನೈಜ ಜಗತ್ತಿನಲ್ಲಿ ನಿಮ್ಮ ಗುರಿ ಎತ್ತ ಇದೆ ಎಂಬುದನ್ನು ಪತ್ತೆ ಮಾಡಿ, ವರ್ಚುವಲ್ ಪ್ರಪಂಚದಲ್ಲಿ ನಿಮ್ಮ ದೃಷ್ಟಿಕೋನವನ್ನು ನಿರೂಪಿಸುತ್ತದೆ.   

ಆರಾಧನೆಯ ಸಮಯದಲ್ಲಿ ಮೂರ್ತಿಯ ಸುತ್ತ ಸುಳಿದಾಡುತ್ತಿರುವ ಸೂಕ್ಷ್ಮ ಪ್ರಪಂಚದ ದೇವರನ್ನು ಗ್ರಹಿಸಲು ಏನು ಬೇಕು? ನಮ್ಮ ಆತ್ಮದ ಅಂತರ್ಗತ ಸಾಮರ್ಥ್ಯಗಳು ಬೇಕು. ಪ್ರತಿ ತಾಂತ್ರಿಕ ಪ್ರಗತಿಯೊಂದಿಗೆ ವರ್ಚುವಲ್ ಅನುಭವದ ಶ್ರದ್ಧೆ ಅಭಿವೃದ್ಧಿ ಹೊಂದುವಂತೆ, ದೇವರ ಮೇಲಿನ ನಮ್ಮ ಭಕ್ತಿಯು ಗಾಢವಾಗುತ್ತಿದ್ದಂತೆ, ಕಾಣದುದನ್ನು ಕಾಣುವ ಅನುಭವದ ಸಾಮರ್ಥ್ಯಗಳು ಹೆಚ್ಚಾಗುತ್ತವೆ.

ನನ್ನ ಗುರುಗಳು ಈ ಪ್ರಕ್ರಿಯೆಯನ್ನು ಹೀಗೆ ವಿವರಿಸಿದ್ದಾರೆ: “ಹಿಂದೂ ಪುರೋಹಿತರು ದೇವಸ್ಥಾನದ ಗರ್ಭಗುಡಿಯೊಳಗೆ ಕೆಲವು ನಿಮಿಷಗಳ ಕಾಲ ಬಂದು ಕಾಣಿಸಿಕೊಳ್ಳಲು ದೇವರನ್ನು ಆಹ್ವಾನಿಸುತ್ತಾರೆ. ದೇವತೆಗಳು ಪ್ರಭಾಮಯವಾದ ತಮ್ಮ ಸೂಕ್ಷ್ಮ ಶರೀರಗಳಲ್ಲಿ ಆಗಮಿಸುತ್ತಾರೆ. ಅವರು ಕಲ್ಲಿನ ಪ್ರತಿಮೆಯ ಸುತ್ತಲೂ ಸುಳಿದಾಡಿ ನೆರೆದಿರುವ ಜನರನ್ನು ಆಶೀರ್ವದಿಸುತ್ತಾರೆ. ನಿಮ್ಮಲ್ಲಿ ಅತೀಂದ್ರಿಯ ಶಕ್ತಿ ಇದ್ದು, ನಿಮ್ಮ ಮೂರನೇ ಕಣ್ಣು ತೆರೆದಿದ್ದರೆ, ನೀವು ಅಲ್ಲಿ ದೇವರನ್ನು ಕಾಣಬಹುದು ಮತ್ತು ಭಗವಂತನ ವೈಯಕ್ತಿಕ ದರ್ಶನವನ್ನು ಪಡೆಯಬಹುದು.

ಗುರುದೇವರು 1969 ರಿಂದ ತಮ್ಮ ಭಕ್ತರಿಗಾಗಿ ಗುಂಪು ತೀರ್ಥಯಾತ್ರೆಗಳನ್ನು ಆರಂಭಿಸಿದರು, ನಾನು ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ. ಇತ್ತೀಚಿನ ತೀರ್ಥಯಾತ್ರೆ 2019 ರಲ್ಲಿ ನಡೆಯಿತು.   ಭಾರತ ಮತ್ತು ಶ್ರೀಲಂಕಾಕ್ಕೆ ಹೋದ ಅನೇಕ ಭಕ್ತರಿಗೆ ಅಲ್ಲಿನ ಪ್ರಾಚೀನ ದೇವಾಲಯಗಳ ಭವ್ಯವಾದ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ದೊರಕಿತು. ದೇವಾಲಯಗಳು. ತೀರ್ಥಯಾತ್ರೆಯ ಮತ್ತು ಆಂತರಿಕ ಪ್ರಯತ್ನದ ಭಾವೋತ್ಕಟತೆಯಿಂದ ಅನೇಕ ಭಕ್ತರು ದೇವತೆಗಳ ದರ್ಶನ ಪಡೆದರು, ಅದರಲ್ಲಿ ಕಲ್ಲು ಅಥವಾ ಕಂಚಿನ ಮೂರ್ತಿಯ ರೂಪವು ಚಲಿಸುವುದನ್ನು ಅಥವಾ ತಮ್ಮನ್ನು ನೋಡಿ ಆ ಮೂರ್ತಿ ಮುಗುಳ್ನಗುವುದನ್ನು ಅನುಭವಿಸಿದರು. ಕೆಲವೊಮ್ಮೆ ಈ ಅನುಭವವು ದೃಷ್ಟಿಗೋಚರವಾಗುವ ಬದಲಾಗಿ, ದೇವತೆ ತಮ್ಮೊಂದಿಗೆ ಮಾತನಾಡುವುದನ್ನು ಕೇಳಿದರು. ಇಂಥ ಸಮಾಗಮಗಳು ಸಾಮಾನ್ಯವಾಗಿ ಪೂಜೆಯ ಕೊನೆಯಲ್ಲಿ ಪರದೆಯನ್ನು ತೆರೆದು ಸಂಪೂರ್ಣವಾಗಿ ಅಲಂಕರಿಸಲ್ಪಟ್ಟ ದೇವರಿಗೆ ವಿವಿಧ ದೀಪಗಳ ಆರತಿ ಎತ್ತುವಾಗ ಉಂಟಾಗುತ್ತವೆ. ಹವಾಯಿಯಲ್ಲಿರುವ ನಮ್ಮ ದೇವಾಲಯದಲ್ಲಿ ಹಲವಾರು ಭಕ್ತರು ಅಂತಹ ದರ್ಶನಗಳನ್ನು ಪಡೆದಿದ್ದಾರೆ. 

ಭಕ್ತನು ದೇವಾಲಯದಲ್ಲಿ ಇಲ್ಲದಿರುವಾಗಲೂ, ಧ್ಯಾನ ಅಥವಾ ಆಳವಾದ ನಿದ್ರೆಯಲ್ಲಿ ದೇವರ ದರ್ಶನವನ್ನು ಪಡೆಯಬಹುದು. ಇಂಥ ಸಮಯದಲ್ಲಿ ದೇವತೆಗಳು ಮತ್ತು ಸಂಪೂರ್ಣ ಮುಕ್ತರಾದ ಅಥವಾ ಮೋಕ್ಷ ಪಡೆದ ಆತ್ಮಗಳು ವಾಸಿಸುವ ತೃತೀಯ ಪ್ರಪಂಚ ಅಥವಾ ಕಾರಣಲೋಕವನ್ನು ಭಕ್ತ ವೀಕ್ಷಿಸುತ್ತನೆ. ಇದನ್ನು ವರ್ಚುವಲ್ ರಿಯಾಲಿಟಿಯ ಅನುಭವಕ್ಕೆ ಹೋಲಿಸಬಹುದು, ಆಗ ಅವನಿಗೆ ತನ್ನ ಭೌತಿಕ ಪರಿಸರದ ಬಗ್ಗೆ ಕೊಂಚವೂ ಪ್ರಜ್ಞೆ ಇರುವುದಿಲ್ಲ; ಅಭೌತಿಕ ಜಗತ್ತಿನಲ್ಲಿ ಅವನು ಸಂಪೂರ್ಣವಾಗಿ ಮುಳುಗಿರುತ್ತಾನೆ. ನೀವು ಪ್ರಾಜ್ಞರಾದ ಶಿವಾಚಾರ್ಯರೊಂದಿಗೆ ಮಾತನಾಡಿದರೆ, ದೇವಾಲಯವನ್ನು ಹಾರ್ಡ್ ವೇರ್ (ಕಗ್ಗಲ್ಲು) ಮತ್ತು ಸಾಫ್ಟ್ ವೇರ್ (ಸಂಸ್ಕೃತ ಮಂತ್ರಗಳು)ಗಳನ್ನು ಒಳಗೊಂಡ ಒಂದು ಕೃತಕ ಬುದ್ಧಿಮತ್ತೆಯ ಸಾಧನದಂತೆ (artificial intelligence device), ಭಾಗವಹಿಸಿದವನನ್ನು ಶಿವನ ಮತ್ತು ಪ್ರಭೆಯಿಂದ ಆವರಿಸಲ್ಪಟ್ಟ ಮಹಾಪುರುಷರ ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯಲು ವಿನ್ಯಾಸಗೊಳಿಸಲಾಗಿದೆ ಎನ್ನುವುದು ಅರಿವಾಗುತ್ತದೆ.  

ಆನ್ಲೈನ್ ಗೇಮಿಂಗ್ ನ ಮೆಟಾವರ್ಸ್ ನಲ್ಲಿ, ನೀವು ಅದರಲ್ಲಿ ಭಾಗವಹಿಸದಿರುವಾಗಲೂ ವರ್ಚುವಲ್ ಪ್ರಪಂಚವು ಅಸ್ತಿತ್ವದಲ್ಲಿರುತ್ತದೆ. ಅಂತೆಯೇ, ದೇವಾಲಯದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ದೈನಂದಿನ ಆರಾಧನೆಗಳನ್ನು ನಡೆಸುವ ಕಾರಣ, ಕೆಲವು ದೇವದೇವತೆಗಳು ಅಲ್ಲಿ ಯಾವಾಗಲೂ ಇರುತ್ತಾರೆ. ಇದು ಮೆಟಾವರ್ಸ್ ಯಾವಾಗಲೂ ಅಸ್ತಿತ್ವದಲ್ಲಿರುವುದಕ್ಕೆ ಸಮಾನವಾಗಿದೆ. ವ್ರತಾಚರಣೆಗಳಲ್ಲಿ, ಭೌತಿಕ ಜಗತ್ತಿನ ಭಕ್ತರು ಮತ್ತು ಅಂತರ್ ಲೋಕದ ದೇವತೆಗಳು ಒಟ್ಟಿಗೆ ಸೇರುತ್ತಾರೆ. ಆರಾಧನೆ ಗರಿಷ್ಠಮಟ್ಟವನ್ನು ತಲುಪಿದಾಗ, ಕಾರಣಲೋಕದ ಭಗವಂತ ಅಲ್ಲಿ ಅಲ್ಪಾವಧಿಗಾಗಿ ಕಾಣಿಸಿಕೊಳ್ಳುತ್ತಾನೆ. ಪ್ರತಿಯೊಂದು ದೇವಾಲಯ ತನ್ನದೇ ಆದ ಪ್ರತ್ಯೇಕವಾದ ಆಂತರಿಕ ಪ್ರಪಂಚವನ್ನು ಹೊಂದಿದೆ.  ಆದ್ದರಿಂದ ವಿವಿಧ ಡಿಜಿಟಲ್ ಮೆಟಾವರ್ಸ್ ಗಳಂತೆ ಅನೇಕ ದೇವಾಲಯಗಳ ಆಂತರಿಕ ಪ್ರಪಂಚಗಳು ಒಂದೇ ಸಮಯದಲ್ಲಿ ಅಸ್ತಿತ್ವದಲ್ಲಿರುತ್ತವೆ. 

ದೇವಾಲಯದ ಆರಾಧನೆಯ ಜೊತೆ ಡಿಜಿಟಲ್ ತಂತ್ರಜ್ಞಾನವನ್ನು ಸಂಬಂಧವನ್ನು ಕಲ್ಪಿಸಿ, ನಾವು ಯುವ ಪೀಳಿಗೆಗೆ ಸೇತುವೆಯನ್ನು ರಚಿಸಬಹುದು. ಡಿಜಿಟಲ್ ಸಾಧನದೊಂದಿಗೆ ಮೆಟಾವರ್ಸ್ ಅನ್ನು ಅನುಭವಿಸುತ್ತಿರುವ ಹದಿಹರೆಯದವರು ಮತ್ತು ದೇವಸ್ಥಾನದಲ್ಲಿ ಆರಾಧನೆ ನಡೆಸುವ ಪೋಷಕರು ಇಬ್ಬರೂ ಭೌತಿಕವಲ್ಲದ ಕ್ಷೇತ್ರಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಒಂದು ಕಂಪ್ಯೂಟರ್ ಗಳ ಮೂಲಕ  ಪ್ರವೇಶಿಸಬಹುದಾದ ಡಿಜಿಟಲ್ ಜಗತ್ತು ಮತ್ತು ಇನ್ನೊಂದು ದೇವಾಲಯದ ದೇವತಾರಾಧನೆಯಿಂದ ಪ್ರವೇಶಿಸಬಹುದಾದ ಸೂಕ್ಷ್ಮವಾದ ಯಥಾರ್ಥತೆ.

ಬ್ರಾಹ್ಮಣನೊಬ್ಬ ತನ್ನ ಕಣ್ಣುಗಳನ್ನು ಮುಚ್ಚಿ ಲಂಡನ್ ಗೆ ಹೋಗಲು ಬಹಳ ಸಮಯ ಹಿಡಿಯುವ ವಿಮಾನದಲ್ಲಿ ಕುಳಿತೇ ಮಾನಸ (ಮಾನಸಿಕವಾಗಿ) ಪೂಜೆಯನ್ನು ಮಾಡುವಂತೆ ಭವಿಷ್ಯದ ಯುವಜನರು ಈ ತಂತ್ರಜ್ಞಾನವನ್ನು ಡಿಜಿಟಲ್ ದೇವಾಲಯವನ್ನು ನಿರ್ಮಿಸಿ, ಪೂಜಿಸಲು ಬಳಸುವುದಿಲ್ಲವೇ? ಈ ಪುಟದಲ್ಲಿನ ಕೇಂದ್ರ ಚಿತ್ರಣ ಕಲಾವಿದನಿಂದ ರಚಿಸಲಾಗಿಲ್ಲ, ಆದರೆ AI, Midjourney ಇದನ್ನು ರಚಿಸಿದೆ! ಇಂದು ಅನೇಕ ದೇವಾಲಯಗಳು ಅಲ್ಲಿನ ಪೂಜೆಗಳನ್ನು ಲೈವ್-ಸ್ಟ್ರೀಮ್ ಮಾಡುತ್ತಿವೆ. ಇದು ದೇವರ ಆಶೀರ್ವಾದ ಮತ್ತು ಶಕ್ತಿಯನ್ನು ಭೌತಿಕ ದೇವಾಲಯದ ಅತೀಂದ್ರಿಯ ಶಕ್ತಿ ಕ್ಷೇತ್ರದ ಹೊರಗೆ ಡಿಜಿಟಲ್ ಸಾಧನಗಳ ಮೂಲಕ ದೂರದಿಂದಲೇ ಅನುಭವಿಸಬಹುದೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಲೈವ್-ಸ್ಟ್ರೀಮ್ ಮಾಡಲಾದ ನಮ್ಮ Kauai ಪೂಜೆಗಳನ್ನು ನೋಡಿದವರು ಸ್ವಲ್ಪಮಟ್ಟಿಗೆ ಹೌದು ಎಂದೇ ಹೇಳಿದ್ದಾರೆ.

ಭೌತಿಕ, ಡಿಜಿಟಲ್ ಹಾಗೂ ಸೂಕ್ಷ್ಮ ಪ್ರಪಂಚಗಳಲ್ಲಿ, ಎಲ್ಲಾ ಅನುಭವವೂ ಗ್ರಹಿಸುವವನ ಮನಸ್ಸಿನಲ್ಲಿಯೇ ಉಂಟಾಗುತ್ತದೆ ಅಲ್ಲವೇ? 

Leave a Comment

Your name, email and comment may be published in Hinduism Today's "Letters" page in print and online. Required fields are marked *

This site uses Akismet to reduce spam. Learn how your comment data is processed.

Scroll to Top