ನಮ್ಮ ಧ್ಯಾನ ಜೀವನ ನಮ್ಮ ಬಾಹ್ಯ ಜೀವನವನ್ನು ಹೇಗೆ ಬಲಗೊಳಿಸುತ್ತದೆ ಹಾಗೂ ಬಾಹ್ಯ ಜೀವನ ನಾವು ಅಂತರ್ಮುಖರಾಗುವಂಥ ಸಾಧನೆಗಳನ್ನು ಚುರುಕಾಗಿಸುತ್ತದೆ ಎಂಬುದರ ಪರಿಶೀಲನೆ
ಸದ್ಗುರುಬೋಧಿನಾಥವೇಲನ್ಸ್ವಾಮಿ
ತಮ್ಮ ಆಂತರಿಕ ಹಾಗೂ ಬಾಹ್ಯ ಜೀವನವನ್ನು ಪರಸ್ಪರ ಹೊಂದಿಸಿಕೊಳ್ಳದ ವ್ಯಕ್ತಿಗಳು ನಮಗೆಲ್ಲ ಗೊತ್ತಿದ್ದಾರೆ. ಅವರು ಧ್ಯಾನಕ್ಕೆ ಕುಳಿತಾಗ ಅದಕ್ಕೆ ಅತ್ಯಂತ ಪ್ರಾಶಸ್ಯ ಕೊಟ್ಟು, ಅಂತರ್ಮುಖರಾಗಲು ಬಯಸುತ್ತಾರೆ. ಧ್ಯಾನದ ಹೊರಗೆ, ತಮ್ಮ ಕೆಲಸದಲ್ಲೋ, ಶಾಲೆಯಲ್ಲೋ ಇರುವಾಗ ಅದೇ ಮಟ್ಟದ ಮನೋಬಲವನ್ನಾಗಲಿ ಏಕಾಗ್ರತೆಯನ್ನಾಗಲಿ ತೋರುವುದಿಲ್ಲ. ಕೆಲವರಂತೂ ಸಾಮಾನ್ಯ ಜೀವನವನ್ನು ತೃಣೀಕರಿಸುತ್ತಾ “ಹೇಗೋ ಒಂದು” ಎಂಬ ಮನೋಭಾವನೆ ಹೊಂದಿದ್ದು, ’ಹೇಗಿದ್ದರೂ ಪರವಾಗಿಲ್ಲ, ಅದೇನೂ ಅಷ್ಟು ಮುಖ್ಯವಲ್ಲ’, ’ಆಂತರಿಕ ಜೀವನವಷ್ಟೇ ಮುಖ್ಯವಾದದ್ದು, ಹೊರ ಪ್ರಪಂಚ ಸುಮ್ಮನೆ ಸಹಿಸಿಕೊಳ್ಳಬೇಕಾದದ್ದು’ ಎಂದು ಭಾವಿಸುತ್ತಾರೆ ಅಂತಹ ಮನೋಭಾವನೆಯಲ್ಲಿ ತಪ್ಪೇನಿದೆ?
ತಪ್ಪು ಏನೆಂದರೆ ಆ ಬಾಹ್ಯ ಅಂತರಗಳೆರಡೂ ಒಂದೇ ವ್ಯಕ್ತಿ. ಎರಡು ವಿಭಿನ್ನ ವ್ಯಕ್ತಿಗಳಲ್ಲ. ಧ್ಯಾನ ಮಾಡುವ ನಾವು ಪ್ರತ್ಯೇಕವಲ್ಲ, ಕೆಲಸಕ್ಕೋ ಕಾಲೇಜಿಗೋ ಹೋಗುವ ನಾವು ಇನ್ನೊಬ್ಬ ವ್ಯಕ್ತಿ ಅಲ್ಲ. ಎರಡು ಕಡೆಯೂ ನಾವು ಅದೇ ವ್ಯಕ್ತಿ, ಅದೇ ಮನಸ್ಸು, ಅದೇ ಆತ್ಮ. ಧ್ಯಾನ ಮಾಡಲು ಅಂತರ್ಮುಖಿಯಾದಾಗ ಒಬ್ಬ ವ್ಯಕ್ತಿಯಾಗಿ, ಮತ್ತೆ ಬಾಹ್ಯ ಪ್ರಪಂಚದಲ್ಲಿ ನಮ್ಮ ಕರ್ತವ್ಯ, ಧರ್ಮ ನಿರ್ವಹಿಸುವಾಗ ಇನ್ನೊಬ್ಬ ವ್ಯಕ್ತಿಯಾಗುವುದಿಲ್ಲ. ಒಳಗೆ ಹಾಗೂ ಹೊರಗೆ ನಾವು ಅದೇ ವ್ಯಕ್ತಿ.
ಮನಸ್ಸನ್ನು ಒಂದೇ ವಸ್ತು ಅಥವಾ ಚಿಂತನೆಯ ಕಡೆಗೆ ಕೇಂದ್ರೀಕರಿಸಿ, ಬೇರೆಡೆ ಅಲೆದಾಡಲು ಬಿಡದೆ ಇರುವುದೇ ಏಕಾಗ್ರತೆ. ಒಂದು ವೇಳೆ ನಾವು ಧ್ಯಾನಮಗ್ನರಾಗಿ ಗಂಭೀರವಾಗಿ ಒಳಗಣ ಗುರಿಯತ್ತ ಕೇಂದ್ರೀಕರಿಸಿ, ಮತ್ತೆ ಹೊರಬಂದು ನಂತರ ಕೆಲಸದಲ್ಲೋ, ಕಾಲೇಜಿನಲ್ಲೋ ನಮ್ಮ ಆಲೋಚನೆಗಳನ್ನು ನಿಯಂತ್ರಿಸದಿದ್ದರೆ, ಅದು ನಿಷ್ಪಲ. ಅದು ಒಂದು ವಾರ ನಿರಂತರ ತೀವ್ರವಾಗಿ ದೈಹಿಕ ವ್ಯಾಯಾಮ ಮಾಡಿ, ನಂತರ ಮೂರು ವಾರಗಳ ಕಾಲ ಏನೂ ವ್ಯಾಯಾಮ ಮಾಡದೇ ಇದ್ದ ಹಾಗೆ. ಒಂದು ವಾರದ ವ್ಯಾಯಾಮದಿಂದ ಲಾಭವಿಲ್ಲವೇ? ಇರಬಹುದು ಆದರೆ ಅಷ್ಟೊಂದಿಲ್ಲ. ಒಂದು ವೇಳೆ ನಾವು ಅಂತರ್ಮುಖಿಗಳಾಗಿ, ಯಶಸ್ವಿಯಾಗಿ, ಏಕಾಗ್ರ ಚಿತ್ತದಿಂದ ಒಂದು ಗಂಟೆ ಧ್ಯಾನ ಮಾಡಿ ಆನಂತರ ಧ್ಯಾನದಿಂದ ಹೊರಬಂದು ಕೆಲಸಕ್ಕೋ, ಕಾಲೇಜಿಗೋ ಹೋಗಿ ಎಂಟು ಗಂಟೆಗಳ ಕಾಲ ಮನಸ್ಸನ್ನು ಹೇಗಂದರೆ ಹಾಗೆ ಅಲೆಯಲು ಬಿಟ್ಟು ಬಿಟ್ಟರೆ, ಆ ಒಂದು ಗಂಟೆಯ ಧ್ಯಾನ ನಮಗೆ ಒಳ್ಳೆಯದು ಮಾಡುವುದೇ? ಸ್ವಲ್ಪ ಮಟ್ಟಿಗೆ ಮಾಡಬಹುದು, ಆದರೆ ದೈಹಿಕ ವ್ಯಾಯಾಮದ ಉದಾಹರಣೆಯಂತೆ ಪೂರ್ಣ ಪರಿಣಾಮಕಾರಿ ಅಲ್ಲ.
ಆಧ್ಯಾತ್ಮಿಕ ಪ್ರಗತಿಗೆ ನಮಗೆ ಬಾಹ್ಯ ಹಾಗೂ ಆಂತರಿಕ ಜೀವನಗಳ ನಡುವೆ ನಿರಂತರ ಪ್ರಯತ್ನ ಅವಶ್ಯ-ಧ್ಯಾನದಲ್ಲಿ ಏನು ಮಾಡುತ್ತೇವೆ ಹಾಗೂ ಹೊರಪ್ರಪಂಚದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಾಗ ಏನು ಮಾಡುತ್ತೇವೆ ಎಂಬುದರ ನಡುವೆ ನಿರಂತರ ಪ್ರಯತ್ನ ಬೇಕು.ಹಾಗಲ್ಲದೇ, ಒಂದು ವೇಳೆ ನಾವು ಕೆಲಸದಲ್ಲೂ ಕಾಲೇಜಿನಲ್ಲೂ ಇಡೀ ದಿನ ಏಕಾಂಗಿಯಾಗಿ ಮನಸ್ಸನ್ನು ಸ್ವಚ್ಛಂದವಾಗಿ ಅಲೆಯಲು ಬಿಡದೆ ನಿಯಂತ್ರಣದಲ್ಲಿಸಿಕೊಂಡರೆ, ಅದು ನಮ್ಮ ಬಾಹ್ಯ ಚಟುವಟಿಕೆಗಳ ಪ್ರಗತಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಧ್ಯಾನ ಕ್ರಿಯೆಯ ಶಕ್ತಿಯನ್ನು ವೃದ್ಧಿಸುತ್ತದೆ.
ಉದಾಹರಣೆಗೆ ಡ್ರೈವಿಂಗ್ ತೆಗೆದುಕೊಳ್ಳಿ. ನಮಗೆ ಡ್ರೈವಿಂಗ್ ಗೊತ್ತು. ಡ್ರೈವ್ ಮಾಡುತ್ತಿರುವಾಗಲೇ ಏನೆಲ್ಲಾ ಯೋಚಿಸುತ್ತ ಇರಬಹುದು. ನಾವು ಪಾತ್ರೆ ತೊಳೆಯುತ್ತಿದ್ದೇವೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ, ಏನೇನೋ ಯೋಚಿಸುತ್ತಿರುವಾಗಲೇ ನಾವು ಪಾತ್ರೆ ತೊಳೆಯಬಹುದು. ಅದೇ ರೀತಿ ಮನಸ್ಸನ್ನು ಅಲೆಯಲು ಬಿಡದೇ, ಮಾಡುತ್ತಿರುವ ಕೆಲಸದಲ್ಲೇ ಏಕಾಗ್ರತೆ ತೋರಿಸಿದರೆ, ನಮ್ಮ ಅಂತರ್ಮುಖ ಪ್ರಯತ್ನಕ್ಕೆ ಹೆಚ್ಚು ಸಹಾಯವಾಗುತ್ತದೆ. ಅಲೆದಾಡುವ ಮನದ ನಿಯಂತ್ರಣಕ್ಕೆ ಹೆಚ್ಚು ಪ್ರಗತಿ ಆಗುತ್ತದೆ, ಬಾಹ್ಯಂತರ ಪ್ರಯತ್ನ ನಿರಂತರವಾಗುತ್ತದೆ. ಹೀಗೆ ನಾವು ಒಳಗೆ ಹಾಗೂ ಹೊರಗೆ ಎಂಬುದಾಗಿ ಗೆರೆ ಎಳೆಯದೆ ಇದ್ದರೆ, ಧ್ಯಾನದಲ್ಲಿ ಗಳಿಸಿದ ನಿಯಂತ್ರಣ ನಮ್ಮ ಭಾವನೆಗಳು ಹಾಗೂ ಬೌದ್ಧಿಕ ಶಕ್ತಿಗಳನ್ನು ಸ್ಥಿರಗೊಳಿಸುತ್ತದೆ. ಹಗಲಿನಲ್ಲಿ ಮನೋ ನಿಯಂತ್ರಣದಿಂದ ಗಳಿಸಿದ ಮನೋಬಲ ಧ್ಯಾನದ ಸಮಯದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಪೂರಕವಾಗುತ್ತದೆ.
ಹೊರ ಪ್ರಪಂಚದಲ್ಲಿ ನಮ್ಮ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಸಾಧಿಸಿ, ಧ್ಯಾನಕ್ಕೆ ಕುಳಿತಾಗ ಏನಾಗುತ್ತದೆ? ಈ ಪ್ರಗತಿ ಒಂದಕ್ಕೊಂದು ಪೂರಕವಾಗಿ ಸೇರಿಕೊಳ್ಳುತ್ತಾ ಹೋಗುತ್ತದೆ. ಧ್ಯಾನದಲ್ಲಿ ಮನಸ್ಸು ನಿಯಂತ್ರಿಸಿದೆವು ಹಾಗೂ ಕೆಲಸದಲ್ಲೋ ಕಾಲೇಜಿನಲ್ಲೋ ಮನಸ್ಸನ್ನು ನಿಯಂತ್ರಿಸಿದೆವು. ಪ್ರತಿದಿನದ ವ್ಯಾಯಾಮದಿಂದ ಸ್ನಾಯುಗಳು ಬಲಗೊಳ್ಳುವಂತೆ ಪ್ರತಿದಿನದ ಪ್ರಯತ್ನದಿಂದ ಏಕಾಗ್ರತೆಯೂ ಹೆಚ್ಚುತ್ತಾ ಹೋಗುತ್ತದೆ. ಧ್ಯಾನಕ್ಕೆ ಕುಳಿತಾಗ ನಮ್ಮ ಆಲೋಚನೆಗಳ ಮೇಲೆ ನಿಯಂತ್ರಣ ಸಾಧಿಸಿದರೆ, ವ್ಯಾಯಾಮದಿಂದ ದೇಹದ ಸ್ನಾಯುಗಳು ಬಲಗೊಳ್ಳುವಂತೆಯೇ ಮನಸ್ಸಿನ ಏಕಾಗ್ರತೆಯೂ ವೃದ್ಧಿಯಾಗುತ್ತಾ ಹೋಗುತ್ತದೆ.
ಈಗ ನಾವು ಮನೋ ಬಲದ ಕಡೆ ಗಮನಹರಿಸೋಣ. ಮನೋಬಲವೆಂದರೆ ಒಂದು ನಿರ್ದಿಷ್ಟ ಸಮಯದವರೆಗೆ ನಮ್ಮೆಲ್ಲ ಶಕ್ತಿಯನ್ನು ಏಕತ್ರ ಕೇಂದ್ರೀಕರಿಸುವುದು. ಮನೋಬಲದ ಅಭಾವಕ್ಕೆ ಉದಾಹರಣೆ ಕೊಡುವುದಾದರೆ, ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಓದಲೆಂದು ಬೆಳಿಗ್ಗೆ ಬೇಗ ಏಳಬೇಕೆಂದುಕೊಂಡರೂ, ಹೇಗೋ ನಿದ್ದೆ ಮಾಡಿ ಬಿಡುತ್ತಾನೆ. ಆಸೆ ಇದೆ ಆದರೆ ಮನೋಬಲ ಸಾಕಷ್ಟು ಬಲಯುತವಾಗಿಲ್ಲ.
ಮನೋಬಲ ಎಂಬುದು ಒಂದು ಆಸಕ್ತಿಕರ ವಿದ್ಯಮಾನ. ಸಾಮಾನ್ಯವಾಗಿ ಯಾವುದನ್ನಾದರೂ ನೀವು ಹೆಚ್ಚು ಬಳಸಿದರೆ ಅದು ಕಡಿಮೆಯಾಗುತ್ತಾ ಹೋಗುತ್ತದೆ. ನೀವು ಹಣ ಖರ್ಚು ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಕಡಿಮೆಯಾಗುತ್ತದೆ. ಅಡುಗೆ ಮನೆಗೆ ಹೋಗಿ ಆಹಾರ ಪದಾರ್ಥ ತೆಗೆದುಕೊಂಡು, ಅಡುಗೆ ಮಾಡಿ ತಿಂದರೆ ಅಡುಗೆ ಮನೆಯಲ್ಲಿದ್ದ ಆಹಾರ ಪದಾರ್ಥ ಕಡಿಮೆಯಾಗುತ್ತದೆ. ಆದರೆ ಮನೋಬಲ ಹಾಗಲ್ಲ. ಹೆಚ್ಚು ಹೆಚ್ಚು ಬಳಸಿದಷ್ಟೂ, ನಿಮ್ಮ ಮನೋಬಲ ಹೆಚ್ಚುತ್ತಾ ಹೋಗುತ್ತದೆ. ಹೇಗೆಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ 3000 ಡಾಲರ್ ಗಳಲ್ಲಿ ನೀವು 2000 ಡಾಲರ್ ಖರ್ಚು ಮಾಡಿದ ಮೇಲೆ ಬ್ಯಾಂಕ್ ಖಾತೆಯಲ್ಲಿ 5000 ಡಾಲರ್ ಗಳಾಗಿ ಹೆಚ್ಚಾದ ಹಾಗೆ. ಅದು ಹೇಗೆ ಸಾಧ್ಯ? ಮನೋಬಲ ದೇಹದ ಸ್ನಾಯು ಇದ್ದ ಹಾಗೆ. ಉಪಯೋಗಿಸಿದಷ್ಟೂ, ಅದರ ಶಕ್ತಿ ಹೆಚ್ಚುತ್ತಾ ಹೋಗುತ್ತದೆ.
ಮನೋಬಲದ ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಆಸಕ್ತಿ. ನನ್ನ ಗುರು ಶಿವಾಯ ಸುಬ್ರಮುನಿಯಸ್ವಾಮಿ ಹೇಳುವಂತೆ ಅರಿವು, ಶಕ್ತಿ ಹಾಗೂ ಮನೋಬಲ ಎಲ್ಲಾ ಒಂದೇ. ನಮಗೆ ಇಷ್ಟವಿಲ್ಲದೇನನ್ನೋ ಮಾಡುವಾಗ ಐದು ನಿಮಿಷ ಒಂದು ಗಂಟೆಯಂತೆ ಅನಿಸುತ್ತದೆ. ಅದೇ ನಮಗೆ ಇಷ್ಟವಾದುದನ್ನು ಮಾಡುತ್ತಿರುವಾಗ ಒಂದು ಗಂಟೆ ಕಳೆದರೂ ಕೇವಲ ಐದೇ ನಿಮಿಷ ಎನಿಸುತ್ತದೆ. ಅದೇ ಅರಿವು, ಶಕ್ತಿ ಹಾಗೂ ಮನೋಬಲ ಒಂದೇ ಆಗಿರುವಿಕೆ. ಒಂದು ವಿಷಯದಲ್ಲಿ ನಮಗೆ ಹೆಚ್ಚು ಆಸಕ್ತಿ ಇದ್ದರೆ, ಹೆಚ್ಚು ಶಕ್ತಿಯನ್ನು ಆ ಕಡೆಗೆ ಹರಿಸುತ್ತೇವೆ. ಹಾಗೆ ಅದು ಅತಿ ಸುಲಭವೆನಿಸುತ್ತದೆ. ಆಸಕ್ತಿ ಕಡಿಮೆ ಇದ್ದಷ್ಟೂ ಕೆಲಸ ಮಾಡಲು ಹೆಚ್ಚು ಕಷ್ಟವಾಗುತ್ತದೆ. ಒಂದು ವೇಳೆ ನಾವೇನು ಮಾಡುತ್ತಿದ್ದೇವೋ ಅದರಲ್ಲೇ ಮಗ್ನರಾಗಿ ಸಂತೋಷಪಡುವುದನ್ನು ಕಲಿತರೆ ಆ ಕೆಲಸದಲ್ಲಿ ಸಂತೋಷ ಹೆಚ್ಚಾಗಿ, ಗಮನ ಕೊಡುವಂತೆ ಆಗುತ್ತದೆ. ಬೇಸರವಾದರೆ, ಆ ಕೆಲಸ ಎಷ್ಟು ಹೊತ್ತಾದರೂ ಮುಗಿಯುತ್ತಿಲ್ಲ ಎನಿಸಿ, ಮನಸ್ಸು ಚಂಚಲಗೊಳ್ಳುತ್ತದೆ. ನಾವು ಬಯಸಿದಂತೆಲ್ಲ ಶಕ್ತಿ ಹೆಚ್ಚಾಗಿ ಹರಿಯುತ್ತದೆ, ಆಸಕ್ತಿ ವಹಿಸಿದರೆ ಶಕ್ತಿ ಹೆಚ್ಚುತ್ತದೆ.
ನಮ್ಮ ಮನೋಬಲವನ್ನು ವೃದ್ಧಿಗೊಳಿಸುವುದು ಹೇಗೆ? ಮೊದಲಿಗೆ ಬಾಹ್ಯ ವಿಷಯಗಳನ್ನು ಬೆಳೆಸಿಕೊಳ್ಳುವುದು ಸುಲಭ. ಜೀವನವನ್ನು ಬಾಹ್ಯ ಹಾಗೂ ಆಂತರಿಕ ಎಂದು ಬೇರ್ಪಡಿಸದೇ, ಆಂತರಿಕವಾದುದನ್ನು ಅತ್ಯಂತ ನಿಖರವಾಗಿ ಗಮನಿಸಿ, ಬಾಹ್ಯವಾದುದನ್ನು ಬೇಕಾಬಿಟ್ಟಿ ಅಶಿಸ್ತಿನಿಂದ ಗಮನಿಸುವುದರಿಂದ ಉಂಟಾಗುವ ಲಾಭ. ಒಂದು ಗಂಟೆ ನಿಶ್ಚಲವಾಗಿ ಧ್ಯಾನದಲ್ಲಿ ಕುಳಿತು ಏಕಾಗ್ರತೆಯಿಂದ ಚಿತ್ತವೃತ್ತಿ ನಿರೋಧ ಮಾಡುವುದು ಕಠಿಣ ಏಕೆಂದರೆ ಅದು ಅಮೂರ್ತ ರೂಪ, ಗ್ರಹಿಸಲು ಕಷ್ಟ. ಅದೇ ಒಂದು ಭೌತಿಕವಾದ ಕೆಲಸ ಮಾಡುವುದು ಸುಲಭ. ಒಂದು ವಿಷಯವನ್ನು ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವುದು ಅತಿ ಸುಲಭ, ಏಕೆಂದರೆ ಅದು ಅಮೂರ್ತವಲ್ಲ, ಅದು ಮೂರ್ತ, ವಾಸ್ತವ. ಹಾಗಾಗಿ ಇದು ನಮ್ಮ ಮನೋಬಲವನ್ನು ಹೆಚ್ಚಿಸಿ ಒಂದು ಗುರಿಯಡೆ ಗಮನವನ್ನು ಕೇಂದ್ರೀಕರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಿಂದಲೇ ಹೊರಗಿನ ಕೆಲಸಗಳು ಬಹು ಮುಖ್ಯ, ಅವುಗಳನ್ನು ಧ್ಯಾನಾಸಕ್ತರು ಕಡೆಗಣಿಸಬಾರದು. ನಮ್ಮ ಏಕಾಗ್ರತೆ, ಮನೋಬಲವನ್ನು ಹೆಚ್ಚಿಸುತ್ತಾ ಹೋದಂತೆ ನಾವು ಒಂದೆಡೆ ಕುಳಿತು ಮನಸ್ಸನ್ನು ಶಾಂತಗೊಳಿಸಲು ನೆರವಾಗುತ್ತದೆ.
ಗುರುದೇವರು ಮನೋಬಲವನ್ನು ವೃದ್ಧಿಪಡಿಸಲು ಒಂದು ಸುಲಭ ಉಪಾಯವನ್ನು ಸೂಚಿಸುತ್ತಾರೆ, “ನೀವು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ” ಎಂದು ಉಪದೇಶಿಸುತ್ತಾರೆ ಸುಲಭ ಎನಿಸುತ್ತಿದೆಯೇ? ಆದರೆ ನಾವು ಹೀಗೆ ಯಾವಾಗಲೂ ಮಾಡುವುದಿಲ್ಲ. ನಾವೆಲ್ಲ ಜೀವನದಲ್ಲಿ ಪ್ರಾರಂಭಿಸಿದ ಅನೇಕ ಕಾರ್ಯಗಳನ್ನು ಅರ್ಥದಲ್ಲೇ ಬಿಟ್ಟುಬಿಡುತ್ತೇವೆ. ಏಕೆಂದರೆ ಕಾರ್ಯ ಆರಂಭಿಸುವಾಗ ದೀರ್ಘವಾಗಿ ಆಲೋಚಿಸದೆ ಹಠಾತ್ತನೆ ಪ್ರಾರಂಭಿಸುತ್ತೇವೆ. ನಮ್ಮ ಸ್ನೇಹಿತರು ಯಾರೋ ಮಾಡುತ್ತಿದ್ದಾರೆ ಅಥವಾ ನೆರೆಹೊರೆಯವರಾರೋ ಮಾಡುತ್ತಿದ್ದಾರೆ ಎಂದು ನಾವು ಮಾಡಲು ಆರಂಭಿಸಿದರೆ ಹಿಡಿದ ಕಾರ್ಯ ಪೂರ್ಣಗೊಳಿಸಲು ಇದ್ಯಾವುದೂ ಪ್ರೇರಣೆ ಆಗುವುದಿಲ್ಲ. ಅವರು ಅದನ್ನು ನಿಲ್ಲಿಸಿದಾಗ, ನೀವೂ ಅದನ್ನು ನಿಲ್ಲಿಸಿ ಬಿಡುವ ಸಾಧ್ಯತೆ ಹೆಚ್ಚು.
ಈ ರೀತಿ ಹಠಾತ್ತನೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಾರದು, ಹಾಗೆ ಮಾಡಿದಾಗಲೇ ನಾವು ಅದನ್ನು ಅರ್ಧದಲ್ಲೇ ಕೈಬಿಡುವುದು, ಮತ್ತೆ ಅದರಿಂದ ಮನಸ್ಸಿನಲ್ಲಿ ನಿಷೇಧಾತ್ಮಕ ಪ್ರವೃತ್ತಿ ಉಂಟಾಗುತ್ತದೆ. ಇದನ್ನು ತಪ್ಪಿಸಲು ಯಾವುದೇ ಕಾರ್ಯಪ್ರವೃತ್ತರಾಗುವ ಮುನ್ನ ಆ ವಿಷಯದಲ್ಲಿ ಎಲ್ಲಾ ದಿಕ್ಕಿನಿಂದ ಆಲೋಚಿಸಿದರೆ ಆ ಕಾರ್ಯ ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚುತ್ತದೆ. ಪ್ರತಿಬಾರಿ ಒಂದೊಂದು ಕಾರ್ಯವನ್ನು ಪೂರ್ಣಗೊಳಿಸಿದ ಹಾಗೂ ಮುಂದುಮುಂದಿನ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಅಂತಹ ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಳ್ಳುವುದು ಉತ್ತಮ. ಗುರುದೇವರು ಮನೋಬಲ ಹೆಚ್ಚಿಸಿಕೊಳ್ಳಲು ಹೇಳುವ ಎರಡನೇ ಮಾತು ಈ ಭಾವನೆಗೆ ಎಡೆ ಮಾಡಿಕೊಡುತ್ತದೆ. ಮಾಡುವ ಕೆಲಸವನ್ನು ಚೆನ್ನಾಗಿ ಮಾಡಿ, ಅಷ್ಟೇ ಅಲ್ಲ ನೀವು ಪ್ರಾರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಇನ್ನೂ ಚೆನ್ನಾಗಿ ಮಾಡಿ. ಆಗ ನೀವು ಸಾಮಾನ್ಯವಾಗಿ ಬಳಸುವುದಕ್ಕಿಂತ ಹೆಚ್ಚಿನ ಮನೋಬಲ ಬಳಸಬೇಕಾಗುತ್ತದೆ, ಆ ರೀತಿ ನಿಮ್ಮ ಮನೋಬಲ ಇನ್ನಷ್ಟು ವೃದ್ಧಿಸುತ್ತಾ ಹೋಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ನಿಮ್ಮ ಬಾಹ್ಯ ಮತ್ತು ಆಂತರಿಕಗಳ ನಡುವಣ ಭೇದವನ್ನು ಅಳಿಸಿ ಹಾಕಿ. ಅತಿಹೆಚ್ಚಿನ ಆಧ್ಯಾತ್ಮಿಕ ಸಾಧನೆಯ ಪ್ರಗತಿ ಬಾಹ್ಯ ಪ್ರಪಂಚದಲ್ಲೇ ಆಗುವುದು ಎಂಬುದನ್ನು ಮನಗಾಣಬೇಕು. ಆ ಬಾಹ್ಯ ಉತ್ಪಾದಿತ ಪ್ರಪಂಚದಲ್ಲೇ ನಾವು ಏಕಾಗ್ರತೆ ಮತ್ತು ಮನೋಬಲವನ್ನು ಬಳಸುವುದು. ಆ ಶಕ್ತಿಗಳೇ ನಾವು ಧ್ಯಾನಕ್ಕೆ ಕುಳಿತಾಗ ಯೋಚನೆಗಳನ್ನು ನಿಯಂತ್ರಿಸಲು ಬೇಕಾಗುತ್ತವೆ ಮತ್ತು ಧ್ಯಾನದಲ್ಲಿ ನಮ್ಮಲ್ಲೇ ಆಳವಾಗಿ ಇಳಿಯಲು ಯಶಸ್ಸು ದೊರೆಯುತ್ತದೆ.
ನಾವು ಕಣ್ತೆರೆದೊಡನೆ ಧ್ಯಾನವನ್ನು ನಿಲ್ಲಿಸುವುದಿಲ್ಲ, ಪೂಜೆ ಮುಗಿದ ಕ್ಷಣ ನಮ್ಮ ಆರಾಧನೆ ನಿಲ್ಲುವುದಿಲ್ಲ. ಅತ್ಯಂತ ಪ್ರಗತಿಪರ ಸಾಧನೆಯೆಂದರೆ, ದಿನವಿಡೀ ನಮ್ಮ ಪ್ರಜ್ಞೆಯನ್ನು ನಿಯಂತ್ರಿಸುವುದು, ನಿಶ್ಶಬ್ದವಾಗಿ ಕುಳಿತಾಗ ಮಾತ್ರ ಅಲ್ಲ; ಆ ನಿರಂತರತೆ ನಮಗೆ ಬೇಕು. ಗುರುದೇವರು ಮನಸ್ಸಿನ ಚಾಂಚಲ್ಯದ ನಿಯಂತ್ರಣ ನಮ್ಮ ಕನಸಿನಲ್ಲೂ ಮುಂದುವರೆಯಬೇಕು ಎಂದು ಹೇಳುತ್ತಾ ರಾತ್ರಿಯಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಬೇಕೆನ್ನುತ್ತಾರೆ. ಹೋಗಬಾರದ ಕಡೆಗೆ ನಾವು ಚಿಂತನೆಯ ತರಂಗದಲ್ಲೂ ಹೋಗಲೇಬಾರದು. ಈ ಅತ್ಯುನ್ನತ ಸ್ಥಿತಿ ನಮ್ಮ ಸಾಧನೆಯ ಗುರಿಯಾಗಬೇಕು. ಏತನ್ಮಧ್ಯೆ ಪ್ರತಿ ಕ್ಷಣವನ್ನೂ ಆ ಗುರಿಯನ್ನು ಸಾಧಿಸಲು ಬೇಕಾದ ಅಭ್ಯಾಸ, ಮನೋಬಲ ಪಡೆಯಲು ಉಪಯೋಗಿಸಬೇಕು.