ಸದ್ಗುರು ಬೋಧಿನಾಥ ವೇಲನ್ ಸ್ವಾಮಿ

English |
Kannada |
Hindi |
Portuguese |

ಆಧ್ಯಾತ್ಮಿಕ ಅಭ್ಯಾಸಗಳನ್ನು ಆಚರಿಸಲು ನಿಮ್ಮದೇ ಸಮಯಕ್ಕಾಗಿ ಕಾಯುವ ಅಗತ್ಯವಿಲ್ಲ. ನೀವು ಆಂತರಿಕ ಯೋಗಗಳನ್ನು ಮಾಡಬಹುದು, ಕರ್ಮವನ್ನು ಪರಿಹರಿಸಬಹುದು ಮತ್ತು ನಿಮ್ಮ ಚಾರಿತ್ರ್ಯವನ್ನು ಯಾವಾಗ ಬೇಕಾದರೂ ನಿರ್ಮಿಸಬಹುದು.
ಕೆಲವು ವರ್ಷಗಳ ಹಿಂದೆ ನಾನು ದೂರದರ್ಶನದಲ್ಲಿ ವಿವಿಧ ಧರ್ಮಗಳ ನಾಯಕರನ್ನು ಸಂದರ್ಶಿಸಿ ವಿಶ್ವ ಧರ್ಮಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ ಸಾರ್ವಜನಿಕ ಕಾರ್ಯಕ್ರಮವೊಂದನ್ನು ವೀಕ್ಷಿಸಿದೆ. ಅನೇಕ ಧರ್ಮಗಳನ್ನು ಅನುಸರಿಸುವ ಜನರಿಗೆ, ವಾರದ ಒಂದು ದಿನ ಮಾತ್ರ ಪವಿತ್ರ ದಿನವಾಗಿದೆ ಮತ್ತು ಆ ದಿನದಂದು ಪೂಜಾ ಸ್ಥಳದಲ್ಲಿ ಹಾಜರಾಗುವುದು ಅವರ ಪಾಲಿಗೆ ಆದ್ಯ ಧಾರ್ಮಿಕ ಜವಾಬ್ದಾರಿಯಾಗಿದೆ ಎಂಬುದು ಸ್ಪಷ್ಟವಾಯಿತು. ನಾವು ಇದನ್ನು ವಾರಕ್ಕೊಮ್ಮೆ ನಡೆಸಲಾಗುವ ಏಕೈಕ-ಚಟುವಟಿಕೆ ವಿಧಾನ ಎಂದು ಕರೆಯಬಹುದು. ತಮ್ಮ ನಂಬಿಕೆಯ ಬಗ್ಗೆ ಸಂದರ್ಶನ ನೀಡಿದ ಸ್ಥಳೀಯ ಅಮೆರಿಕನ್ ಇಂಡಿಯನ್ ಮುಖಂಡರೊಬ್ಬರು ತಮ್ಮ ಬುಡಕಟ್ಟು ಜನಾಂಗದಲ್ಲಿ ಧರ್ಮಕ್ಕೆ ಯಾವುದೇ ಪದಗಳಿಲ್ಲ, ಏಕೆಂದರೆ ಅದು ಅವರ ಬದುಕಿನ ವಿಧಾನವೇ ಆಗಿದೆ ಎಂದು ತಿಳಿಸಿದರು. ಅಂದರೆ ಆ ಜನರು ದಿನವಿಡೀ ತಮ್ಮ ಕಾರ್ಯಗಳನ್ನು ನಿರ್ವಹಿಸುವ ರೀತಿ ಅವರ ಧಾರ್ಮಿಕ ತತ್ವಗಳು ಮತ್ತು ಸಂಪ್ರದಾಯಗಳಿಂದ ಪ್ರಭಾವಿತವಾಗಿರುತ್ತದೆ. ನಂಬಿಕೆಯಲ್ಲಿ ಈ ಬಗೆಯ ತಾದಾತ್ಮ್ಯ ವರ್ಣಪಟಲದ ಮತ್ತೊಂದು ತುದಿಯನ್ನು ವಿಶದೀಕರಿಸುತ್ತದೆ. ನಾವು ಇದನ್ನು ವಾರದ ಎಲ್ಲ ಏಳು ದಿನಗಳ ಸಮಸ್ತ ಚಟುವಟಿಕೆಗಳ ವಿಧಾನ ಎಂದು ಕರೆಯಬಹುದು. ಅನುಸರಿಸುವುದರ ಮೂಲಕ ಅಥವಾ ನಡುವೆ ಎಲ್ಲಾದರೂ ಮಾರ್ಗವನ್ನು ಯೋಜಿಸಿಕೊಳ್ಳುವ ಮೂಲಕ ಹಿಂದೂ ಧರ್ಮವನ್ನು ಅಭ್ಯಾಸ ಮಾಡಬಹುದು ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ. ಈ ಪ್ರಕಾಶನದ ಸಂಪಾದನಾ ವಿಭಾಗ ಏಳು ದಿನಗಳೂ, ತಾದಾತ್ಮ್ಯ ವಿಧಾನದಲ್ಲಿ ಸನಾತನ ಧರ್ಮವನ್ನು ಅಭ್ಯಾಸ ಮಾಡುವುದು ಹೇಗೆ ಎಂಬುದರ ಬಗ್ಗೆ ಸಲಹೆಗಳನ್ನು ನೀಡುತ್ತದೆ. ನಮ್ಮ ದೈನಂದಿನ ಕಾರ್ಯಗಳಲ್ಲಿ ಹಿಂದೂ ಧರ್ಮವನ್ನು ಸಮಾವೇಶಗೊಳಿಸುವುದು ಹೇಗೆ ಎಂಬುದರ ಬಗ್ಗೆ ಹಲವು ಸಾಧ್ಯತೆಗಳನ್ನು ಎತ್ತಿ ತೋರಿಸುತ್ತದೆ.
ಉನ್ನತ ಪ್ರಜ್ಞೆಯ ಹಾದಿಯಲ್ಲಿ ನಾವು ಎಷ್ಟರಮಟ್ಟಿಗೆ ಅಭ್ಯಾಸ ಮಾಡುತ್ತೇವೋ, ಅಷ್ಟರಮಟ್ಟಿಗೆ ಹೆಚ್ಚಿನ ಆಧ್ಯಾತ್ಮಿಕ ಪ್ರಗತಿಯನ್ನು ಪಡೆಯುತ್ತೇವೆ. ಅಂತಿಮವಾಗಿ ಅದು ಸಾಕ್ಷಾತ್ಕಾರ ಮತ್ತು ಮುಕ್ತಿಯನ್ನು ದಯಪಾಲಿಸುತ್ತದೆ ಎಂಬುದು ನಮಗೆ ತಿಳಿದಿದೆ. ತಾದಾತ್ಮ್ಯಭಾವದಿಂದ ನಾವು ನಮ್ಮ ವಾರದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಅಭ್ಯಾಸಗಳನ್ನು ಸೇರಿಸಿಕೊಳ್ಳಬಹುದು ಎನ್ನುವುದು ಸ್ಪಷ್ಟವಾಗಿದೆ. ನಡೆದಾಡುವ ಹೋಲಿಕೆ ಈ ಕಲ್ಪನೆಯನ್ನು ವಿಶದಪಡಿಸುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯಬೇಕು ಎನ್ನುವುದು ಒಂದು ಸಾಮಾನ್ಯ ಸಲಹೆ. ಇದನ್ನು ಕೆಲಸಕ್ಕೆ ಅಥವಾ ಶಾಲೆಗೆ ಹೋಗುವ ಮೊದಲು ಅಥವಾ ಅನಂತರ ಪ್ರತ್ಯೇಕ ಚಟುವಟಿಕೆಯಾಗಿ ಮಾಡಿದರೆ, ಅದಕ್ಕೆ ಸಾಕಷ್ಟು ಸಮಯ ದೊರೆಯಲಾರದು. ಈ ಸವಾಲನ್ನು ಗೆಲ್ಲಲು ವೈದ್ಯರು ಕೆಲಸ ಮಾಡುವಾಗ ಇಲ್ಲವೇ ಶಾಲೆಯ ಸಮಯದಲ್ಲಿಯೇ ನಡೆದಾಡುವಂತೆ ಶಿಫಾರಸು ಮಾಡುತ್ತಾರೆ. ಉದಾಹರಣೆಗೆ ಎಲಿವೇಟರ್ ಅಥವಾ ಎಸ್ಕಲೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬಹುದು, ಗಮ್ಯಸ್ಥಾನದಿಂದ ಅರ್ಧ ಮೈಲಿ ದೂರದಲ್ಲೇ ನಿಮ್ಮ ವಾಹನವನ್ನು ನಿಲ್ಲಿಸಿ, ಅಷ್ಟು ದೂರ ನಡೆಯಬಹುದು. ನಮ್ಮ ಕೆಲಸಕ್ಕೆ ಅಥವಾ ಶಾಲೆಗೆ ಹೋಗುವ ದಿನಗಳಲ್ಲಿ ಯಾವ ಆಧ್ಯಾತ್ಮಿಕ ಅಭ್ಯಾಸಗಳನ್ನು ಮಿಳಿತಗೊಳಿಸಿಕೊಳ್ಳಬಹುದು? ಕರ್ಮ ಯೋಗ, ಭಕ್ತಿ ಯೋಗ ಮತ್ತು ರಾಜ ಯೋಗವನ್ನು ದೈನಂದಿನ ಕಾರ್ಯಗಳಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಮೊದಲು ನೋಡೋಣ.
ಕರ್ಮಯೋಗ
ಹಿಂದೂ ಧರ್ಮದಲ್ಲಿ ಸೇವೆ, ನಿಸ್ವಾರ್ಥ ಸೇವೆ ಅಥವಾ ಕರ್ಮ ಯೋಗವನ್ನು ಮಾಡಲು ಸಾರ್ವತ್ರಿಕವಾಗಿ ಪ್ರೇರಣೆ ನೀಡಲಾಗುತ್ತದೆ. ನನ್ನ ಗುರು, ಶಿವಾಯ ಸುಬ್ರಮುನಿಯಸ್ವಾಮಿ, ಕರ್ಮಯೋಗ ನಮ್ಮನ್ನು ಹೇಗೆ ಪರಿಶುದ್ಧಗೊಳಿಸುತ್ತದೆ ಎಂದು ತಿಳಿಸುತ್ತಾರೆ: “ನೀವು ಇತರರಿಗೆ ದಯೆ ತೋರಿಸಿ. ನಿಮಗೇ ಕಷ್ಟವಾದರೂ ಔದಾರ್ಯ ತೋರಿಸಿ. ಪರೋಪಕಾರಿಗಳಾಗಿ. ಪ್ರಯಾಸವಾದರೂ ಎಲ್ಲ ಸಮಯದಲ್ಲೂ ಸೇವೆ ಮಾಡಲು ಸಿದ್ಧರಾಗಿರಿ. ಬೇರೆಯವರ ಮುಖದಲ್ಲಿ ಮಂದಹಾಸ ಮೂಡಿಸಿ. ಇತರರನ್ನು ಸಂತೋಷಪಡಿಸುವ ಮೂಲಕ ಸಂತೋಷ ಮತ್ತು ಸಗುಣಾತ್ಮಕ ಮನಃಸ್ಥಿತಿಯನ್ನು ಪಡೆಯಿರಿ. ” ಸಾಮಾನ್ಯವಾಗಿ ದೇವಾಲಯ ಅಥವಾ ಆಶ್ರಮದಲ್ಲಿ ಸಾಂಪ್ರದಾಯಿಕವಾಗಿ ಕರ್ಮ ಯೋಗವನ್ನು ಆಚರಿಸಲಾಗುತ್ತದೆ. ಆಹಾರವನ್ನು ತಯಾರು ಮಾಡುವುದು ಮತ್ತು ಬಡಿಸುವುದು, ಆವರಣವನ್ನು ಸ್ವಚ್ಛಗೊಳಿಸುವುದು, ಹೂಮಾಲೆಗಳನ್ನು ಕಟ್ಟುವುದು ಮೊದಲಾದುವು ಸಾಮಾನ್ಯ ಸೇವಾಕಾರ್ಯಗಳು. ಆಧುನಿಕ ಜೀವನದಲ್ಲಿ, ಈ ರೀತಿಯ ಸೇವೆಯನ್ನು ಮಾಡಲು ಸಮಯ ದೊರೆಯುವುದು ಕಷ್ಟ, ಆದ್ದರಿಂದ ಅನೇಕ ಪ್ರಸಂಗಗಳಲ್ಲಿ ಕನಿಷ್ಠ ಸೇವೆಯನ್ನು ನಡೆಸಲಾಗುತ್ತದೆ. ಸೇವೆಯನ್ನು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ನಡೆದಾಡುವ ಉದಾಹರಣೆಗೆ ಹೋಲಿಸಬಹುದು. ಇದನ್ನು ಪ್ರತ್ಯೇಕ ಚಟುವಟಿಕೆಯೆಂದು ಪರಿಗಣಿಸುವ ಬದಲು, ಅದನ್ನು ನಿಮ್ಮ ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಧುನಿಕ ಜೀವನದಲ್ಲಿ ನಿಮ್ಮಿಂದ ಏನನ್ನೂ ನಿರೀಕ್ಷೆ ಮಾಡದ ಮತ್ತೊಬ್ಬರಿಗೆ ಸಹಾಯ ಮಾಡುವುದೇ ಸೇವೆಯಾಗುತ್ತದೆ. ಇದು ಸ್ವಯಂಪ್ರೇರಿತ ಕ್ರಿಯೆಯಾಗಿರಲಿ. ಉದ್ಯೋಗದಾತ, ಉದ್ಯೋಗಿ ಅಥವಾ ವಿದ್ಯಾರ್ಥಿಯಾಗಿ ನೀವು ಆ ಕೆಲಸ ಮಾಡುವುದನ್ನು ಯಾರೂ ನಿರೀಕ್ಷಿಸುವುದಿಲ್ಲ. ಉದಾಹರಣೆಗೆ, ಕೆಲಸಕ್ಕೆ ಅಥವಾ ಶಾಲೆಗೆ ಹೊಸದಾಗಿ ಬಂದವರನ್ನು ಸ್ವಾಗತಿಸಿ, ಅವರು ನೂತನ ಪರಿಸರಕ್ಕೆ ಒಗ್ಗಿಕೊಳ್ಳಲು ಸಹಾಯ ಮಾಡಿ. ಅಥವಾ, ಬೋಧಕರಿಗೆ ಕೆಲವು ಯೋಜನೆಗಳಿಗೆ ಹೆಚ್ಚುವರಿ ಸಹಾಯ ಅಗತ್ಯವಾದಾಗ, ಸಂತೋಷದಿಂದ ನೆರವು ನೀಡಲು ಮುಂದಾಗಿ.
ಭಕ್ತಿ ಯೋಗ
ಭಕ್ತಿಯ ಅಭ್ಯಾಸವನ್ನು ಭಕ್ತಿಯೋಗ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಗುರುದೇವರು ಈ ಸೂಕ್ಷ್ಮ ವಿವರಣೆ ನೀಡುತ್ತಾರೆ: “ಭಕ್ತಿ ಯೋಗದ ಮೂಲಕ, ಆತ್ಮದ ಪ್ರಜ್ಞೆಯಲ್ಲಿ ಲೀನವಾಗಿ, ಸರ್ವವ್ಯಾಪಿ ಭಗವಂತನಲ್ಲಿ ಮುಳುಗಿದ ಮನಸ್ಸಿನ ಆಂದೋಳನ ಅಳಿಸಿಹೋಗುತ್ತದೆ. ” ಭಕ್ತಿ ಯೋಗವನ್ನು ಸಾಂಪ್ರದಾಯಿಕವಾಗಿ ದೇವಾಲಯ ಅಥವಾ ಆಶ್ರಮದಲ್ಲಿ- ಅಥವಾ ಮನೆಯ ಪೂಜಾಗೃಹದಲ್ಲಿ ಆರಾಧನೆ, ಭಕ್ತಿಗೀತೆಗಳನ್ನು ಹಾಡುವುದು, ಭಜನೆ ಮಾಡುವುದರ ಮೂಲಕ ನಡೆಸಲಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ಅಥವಾ ತರಗತಿಯಲ್ಲಿ ಭಕ್ತಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಅದನ್ನು ಹೆಚ್ಚಾಗಿ ಆಚರಿಸುವುದು ಸಾಧ್ಯವಾಗುತ್ತದೆ . ಉದ್ಯೋಗದ ಸ್ಥಳದಲ್ಲಿ ನಿಮ್ಮ ಮೇಜಿನ ಮೇಲೆ ದೇವರ ಚಿತ್ರವನ್ನು ಇರಿಸಿಕೊಳ್ಳಬಹುದು. ಹಾಗೆ ಮಾಡಲು ಅನುಮತಿ ಇಲ್ಲವಾದರೆ, ದೇವರನ್ನು ನೆನಪಿಸುವ ಅಮೂರ್ತ ಚಿಹ್ನೆಯನ್ನು ಬಳಸಿ. ಆ ಚಿತ್ರ ಅಥವಾ ಚಿಹ್ನೆಗೆ ದಿನವಿಡೀ ಮಾನಸಿಕವಾಗಿ ಪ್ರಾರ್ಥನೆ ಸಲ್ಲಿಸಿ. ಶಾಲೆಯಲ್ಲಿ, ಒಂದು ಪ್ರಮುಖ ಪರೀಕ್ಷೆಯಲ್ಲಿ ಉತ್ತರಿಸಲು ಆರಂಭಿಸುವ ಮುನ್ನ ನಿಮ್ಮ ಕೈಲಾದಷ್ಟು ಚೆನ್ನಾಗಿ ಮಾಡಲು ನೆರವಾಗುವಂತೆ ಗಣೇಶನನ್ನು ಮನಸ್ಸಿನಲ್ಲೇ ಪ್ರಾರ್ಥಿಸಿ. ಪ್ರತಿಬಾರಿಯೂ ಊಟಮಾಡುವ ಮೊದಲು ಸರಳ ಶ್ಲೋಕವೊಂದನ್ನು ಹೇಳಿ.
ರಾಜ ಯೋಗ
ರಾಜ ಯೋಗದ ಹಂತಗಳಾದ ಏಕಾಗ್ರತೆ ಮತ್ತು ಧ್ಯಾನಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಗುರುದೇವರು ಈ ಬಗ್ಗೆ ತಮ್ಮ ಒಳನೋಟವನ್ನು ಈ ರೀತಿ ಹಂಚಿಕೊಳ್ಳುತ್ತಾರೆ: “ಏಕಾಗ್ರತೆಯನ್ನು ಸಾಧಿಸಿದನಂತರ ಆ ಕಲೆ ಸಹಜವಾಗಿ ನಮ್ಮನ್ನು ಧ್ಯಾನ, ಚಿಂತನೆ ಮತ್ತು ಸಮಾಧಿಯತ್ತ ಒಯ್ಯುತ್ತದೆ.” ಏಕಾಗ್ರತೆ ಮತ್ತು ಧ್ಯಾನವನ್ನು ಸಾಮಾನ್ಯವಾಗಿ ಧ್ಯಾನ ಕೇಂದ್ರವೊಂದರಲ್ಲಿ ಹಲವು ಜನರು ಸೇರಿಕೊಂಡು ಒಟ್ಟಾಗಿ ನಡೆಸುತ್ತಾರೆ ಅಥವಾ ದೇವಾಲಯದಲ್ಲಿ ಇಲ್ಲವೇ ಮನೆಯಲ್ಲಿ ಪ್ರತ್ಯೇಕವಾಗಿ ನಡೆಸುತ್ತಾರೆ. ಆದರೆ ಅವುಗಳನ್ನು ಕೂಡ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಬಹುದು. ತದೇಕ ಲಕ್ಷ್ಯದ ಸಾಂಪ್ರದಾಯಿಕ ಹಿಂದೂ ಪರಿಕಲ್ಪನೆ ಎಲ್ಲ ಚಟುವಟಿಕೆಗಳಲ್ಲಿ ಮನಸ್ಸಿನ ಚಾಂಚಲ್ಯವನ್ನು ತಡೆಯಲು ಪ್ರಸ್ತುತ ಕ್ಷಣದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯೋಚಿಸದೆ ಅಥವಾ ಬೇರೆ ಯಾವುದರಿಂದಲೂ ವಿಚಲಿತರಾಗದೆ ಏಕಾಗ್ರತೆಯ ಅಭ್ಯಾಸವನ್ನು ನಡೆಸಬೇಕೆಂದು ವಿವರಿಸುತ್ತದೆ. ಉದಾಹರಣೆಗೆ, ಕೆಲಸ ಮಾಡುವಾಗ ನಾವು ಪ್ರತಿಯೊಂದು ಕಾರ್ಯದ ಮೇಲೂ ಸಂಪೂರ್ಣ ಗಮನವಿರಿಸಿ ಕೆಲಸ ಮಾಡುತ್ತೇವೆ . ಆಗ ಮನಸ್ಸು ಹಳೆಯ ನೆನಪುಗಳು ಅಥವಾ ಭವಿಷ್ಯದ ಯೋಜನೆಗಳತ್ತ ತಿರುಗುವುದಿಲ್ಲ. ಶಾಲೆಯಲ್ಲಿ ಉಪನ್ಯಾಸವನ್ನು ಕೇಳುವಾಗ, ಉಪನ್ಯಾಸಕರ ಸಂದೇಶವನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಕೊಳ್ಳಲು ನಾವು ಲಕ್ಷ್ಯಗೊಟ್ಟು ಆಲಿಸುತ್ತೇವೆ. ಈ ತದೇಕ ಲಕ್ಷ್ಯ ನಮ್ಮ ಕೆಲಸದ ಅಥವಾ ಅಧ್ಯಯನದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ . ನಾವು ದಿನವಿಡೀ ತದೇಕ ಲಕ್ಷ್ಯ ಕೊಟ್ಟರೆ, ಧ್ಯಾನದ ಸಮಯದಲ್ಲಿ ಮನಸ್ಸನ್ನು ಶಾಂತಗೊಳಿಸುವುದು ಸುಲಭ.
ಕರ್ಮಗಳನ್ನು ಅಂಗೀಕರಿಸಿ, ಪ್ರತಿಕ್ರಿಯೆ ತೋರಬೇಡಿ
ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ನಮ್ಮ ಚಟುವಟಿಕೆಗಳ ಮೂಲಕ ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಬೇಕಾದ ಎರಡು ಸಾಮಾನ್ಯ ಅಭ್ಯಾಸಗಳನ್ನು ಗಮನಿಸೋಣ. ಮೊದಲನೆಯದು ನಕಾರಾತ್ಮಕ ಕರ್ಮಗಳನ್ನು ಸ್ವಾಭಾವಿಕವಾಗಿ ಉದ್ಭವಿಸುವ ನಾನಾ ಸನ್ನಿವೇಶಗಳಲ್ಲಿ ಹೇಗೆ ಕಾರ್ಯನಿರತರಾಗಿ ಪರಿಹರಿಸಬೇಕು. ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಅನೇಕ ಜನರೊಂದಿಗೆ ಬೆರೆತು ದುಡಿಯುವುದರಿಂದ ಉಂಟಾಗುವ ಆಧ್ಯಾತ್ಮಿಕ ಅನುಕೂಲವೆಂದರೆ, ಅದು ನಮ್ಮ ನಕಾರಾತ್ಮಕ ಕರ್ಮಗಳು ನಮ್ಮ ಬಳಿಗೆ ಮರಳಲು ಅವಕಾಶ ಉಂಟುಮಾಡುತ್ತದೆ. ಉದಾಹರಣೆಗೆ, ನಾವು ಇತರರಿಂದ ದೌರ್ಜನ್ಯಕ್ಕೊಳಗಾದಾಗ, ಪ್ರತೀಕಾರ ಭಾವನೆಯನ್ನು ವ್ಯಕ್ತಪಡಿಸದೆ ಇರಬಹುದು; ಕಠಿಣ ಭಾವನೆಗಳನ್ನು ಕೂಡ ಹೊಂದುವುದು ಬೇಡ. ಇದನ್ನು ಸಾಧಿಸಲು ನಮಗೆ ಸಾಧ್ಯವಾದರೆ, ನಾವು ಆ ಕರ್ಮದಿಂದ ವಿಮುಕ್ತಿ ಹೊಂದುತ್ತೇವೆ – ಅದು ಪರಿಹಾರವಾಗುತ್ತದೆ. ಅಂತಹ ಉನ್ನತ ಮನಸ್ಸಿನ ಪ್ರತಿಕ್ರಿಯೆಗಳನ್ನು ನಾವು ತೋರುವುದು ಹೇಗೆ? ಆ ಅನುಭವವನ್ನು ನಾವು ಹಾದುಹೋಗಲೇ ಬೇಕಾಗಿರುವುದು ನಮ್ಮ ವಿಧಿ, ಮತ್ತು ಈ ವ್ಯಕ್ತಿ ಕೇವಲ ಅದರ ವಿತರಣೆಯ ಸಾಧನವಾಗಿದ್ದಾರೆ. ಅವರು ನಮ್ಮ ಮೇಲೆ ಈ ಬಗೆಯ ದೌರ್ಜನ್ಯ ಎಸಗದಿದ್ದರೆ, ಭವಿಷ್ಯದಲ್ಲಿ ಬೇರೊಬ್ಬರು ಹಾಗೆ ಮಾಡುತ್ತಿದ್ದರು ಎಂದು ಭಾವಿಸಿಕೊಳ್ಳುವುದು ಪ್ರಥಮ ಮುಖ್ಯಾಂಶ.
ಎರಡನೆಯದಾಗಿ ಭಾವೋದ್ವೇಗಕ್ಕೆ ಒಳಗಾಗುವ ಸಂದರ್ಭಗಳಲ್ಲಿ ಗಮನವನ್ನು ಕೇಂದ್ರೀಕರಿಸಿ ಕೆಲಸ ಮಾಡಲು ಪ್ರತಿನಿತ್ಯ ಅಭ್ಯಾಸ ಮಾಡಬೇಕು. ನನ್ನ ಗುರುಗಳು ಹೇಳುವಂತೆ, ಶಾಂತಿಯುತ ವಾತಾವರಣದಲ್ಲಿ ಶಾಂತಿಯಿಂದ ಇರುವುದು ಸುಲಭ. ನಿಜವಾದ ಪ್ರಗತಿ ಸಾಧಿಸಲು, ಅಶಾಂತಿ ತುಂಬಿರುವ ಸಂದರ್ಭಗಳಲ್ಲಿ ಶಾಂತಿಯಿಂದ ಇರುವುದನ್ನು ಕಲಿಯಬೇಕು. ಈ ಅಭ್ಯಾಸ ನಮ್ಮ ಭಾವೋದ್ವೇಗವನ್ನು ಹತ್ತಿಕ್ಕಲು ನೆರವಾಗುತ್ತದೆ ಮತ್ತು ನಮ್ಮ ಸುತ್ತಮುತ್ತಲೂ ಇರುವವರ ಜೀವನವನ್ನು ಸುಧಾರಿಸುತ್ತದೆ.
ನಮ್ಮ ಚಾರಿತ್ರ್ಯವನ್ನು ಸುಧಾರಿಸುವುದು
ನಮ್ಮ ಚಾರಿತ್ರ್ಯವನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುವುದು ನಮ್ಮ ಅಂತಿಮ ಸಮಗ್ರ ಅಭ್ಯಾಸ. ಎಲ್ಲ ಆಧ್ಯಾತ್ಮಿಕ ಬೆಳವಣಿಗೆ ಈ ತಳಹದಿಯ ಮೇಲೆಯೇ ನಿಂತಿದೆ. ವ್ಯಕ್ತಿಗೆ ವಿಶಿಷ್ಟವಾದ ಮಾನಸಿಕ ಮತ್ತು ನೈತಿಕ ಗುಣಗಳ ಒಟ್ಟು ಮೊತ್ತವೇ ಚಾರಿತ್ರ್ಯ ಎಂದು ವ್ಯಾಖ್ಯಾನಿಸಲಾಗಿದೆ. ಗುರುದೇವರು ಅದರ ಮಹತ್ವವನ್ನು ಹೀಗೆ ವಿವರಿಸಿದ್ದಾರೆ: “ಇದು ಅಡಿಪಾಯ; ಈ ಅಡಿಪಾಯವಿಲ್ಲದೆ ಯಾವುದೇ ಆಧ್ಯಾತ್ಮಿಕ ಬೆಳವಣಿಗೆ ಇಲ್ಲ, ಫಲವೂ ಇಲ್ಲ. ಈ ಅಡಿಪಾಯವನ್ನು ಹಾಕುವ ಮೊದಲು ಅತ್ಯುನ್ನತವಾದ ಸಾಕ್ಷಾತ್ಕಾರವನ್ನು ಅರಿತುಕೊಳ್ಳಲು ಪ್ರಯತ್ನಿಸುವುದು ಬೇರುಗಳನ್ನುಕತ್ತರಿಸಿ ಹಾಕಲಾದ ನಿಂಬೆಗಿಡವನ್ನು ಒಂದು ಕುಂಡದಲ್ಲಿ ಹಾಕಿ ಫಲವನ್ನು ನಿರೀಕ್ಷಿಸುವಂತೆ ಆಗುತ್ತದೆ. ಅದು ಖಂಡಿತ ಸಾಧ್ಯವಿಲ್ಲ.”
ಆಧ್ಯಾತ್ಮಿಕ ಹಾದಿಯಲ್ಲಿ ನಮ್ಮ ಚಾರಿತ್ರ್ಯವನ್ನು ಬೆಳೆಸುವುದು, ಸುಧಾರಿಸುವುದು ಮತ್ತು ಪರಿವರ್ತಿಸುವುದು ಮೊದಲ ಹಂತದ ಪ್ರಯತ್ನವಾಗಿದೆ. ಈ ಪ್ರಯತ್ನವನ್ನು ಸುಲಭಗೊಳಿಸಲು, ನಾವು ಚಾರಿತ್ರ್ಯ ಬೆಳವಣಿಗೆಯ ಬಗ್ಗೆ ಕಿರು ಹೊತ್ತಗೆಯೊಂದನ್ನು ಪ್ರಕಟಿಸಿದ್ದೇವೆ (bit.ly/characterbuild1). ಚಾರಿತ್ರ್ಯ ಸುಧಾರಣೆಗೆ ನಾವೆಲ್ಲರೂ ಬಳಸಬಹುದಾದ ಅರವತ್ತನಾಲ್ಕು ಗುಣಗಳನ್ನು ಅದು ಸೂಚಿಸುತ್ತದೆ. ಉದಾಹರಣೆಗೆ, ನಡೆ-ನುಡಿಗಳಲ್ಲಿ ಸಂಯಮ, ಅಂಗೀಕಾರ ಮನೋಭಾವ, ಸೌಹಾರ್ದಪೂರ್ಣ ನಡತೆ, ಗುಣಗ್ರಾಹಿತ್ವ, ಸೌಜನ್ಯ, ಅಗತ್ಯವಾದ ಸಮಯದಲ್ಲಿ ಲಭ್ಯವಿರುವುದು, ಶಾಂತಿಯಿಂದ ಇರುವುದು, ಮುಂಜಾಗರೂಕತೆ, ಅವ್ಯಭಿಚಾರಿ ಗುಣ ಮತ್ತು ನಿರ್ಮಲವಾಗಿರುವುದು ಮೊದಲ ಹತ್ತು ಗುಣಗಳಾಗಿವೆ. ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ನಮ್ಮ ಚಟುವಟಿಕೆಗಳು ಈ ಗುಣಗಳನ್ನು, ವಿಶೇಷವಾಗಿ ನಮ್ಮಲ್ಲಿ ಯಾವ ಗುಣಗಳು ದುರ್ಬಲವಾಗಿವೆಯೋ, ಆ ಗುಣಗಳನ್ನು ವರ್ಧಿಸಲು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ.
ಅಭ್ಯಾಸ ಮಾಡಲು ಸೂಚನೆ
ಪ್ರತಿ ವಾರ ನೀವು ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಮಾಡಿ ಮುಗಿಸಬೇಕಾಗಿರುವ ಚಟುವಟಿಕೆಗಳನ್ನು ಯೋಜಿಸುವಾಗ, ಮುಂಬರುವ ಏಳು ದಿನಗಳಿಗೆ ನೀವು ಗಮನ ಹರಿಸಬೇಕಾದ ಸಮಗ್ರ ಹಿಂದೂ ಪದ್ಧತಿಗಳ ಪಟ್ಟಿಯನ್ನೂ ಮಾಡಿಕೊಳ್ಳಿ. ಆಧ್ಯಾತ್ಮಿಕ ಹಾದಿಯಲ್ಲಿ ನೀವು ವೇಗವಾಗಿ ಪ್ರಗತಿ ಸಾಧಿಸಲು ದಿನದ ಪ್ರತಿಯೊಂದು ನಿಮಿಷದ ಲಾಭವನ್ನು ಪಡೆಯಲು ಈ ಅಭ್ಯಾಸ ನಿಮಗೆ ನೆನಪುಂಟುಮಾಡುತ್ತದೆ.