ಸೂಕ್ಷ್ಮವಾದ ಒಂದು ವೈರಸ್ ಇಡೀ ವಿಶ್ವದಲ್ಲಿ ಎಲ್ಲರ ಜೀವನಶೈಲಿಯನ್ನೇ ಬದಲಾಯಿಸಿದೆ. ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಕುಟುಂಬಗಳು ಮತ್ತು ಮತ್ತು ಕುಟುಂಬದವರನ್ನು ನಿರ್ಧರಿಸುತ್ತದೆ.

ಸದ್ಗುರು ಬೋಧಿನಾಥ ವೇಲನ್ ಸ್ವಾಮಿ

English |
Tamil |
Kannada |
Hindi |
Portuguese |
Marathi |

ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಪ್ರಪಂಚದ ಅನೇಕ ಭಾಗಗಳಲ್ಲಿ, ಸರ್ಕಾರಗಳು ಜನರನ್ನು ಮನೆಗಳಲ್ಲಿಯೇ ಇರಬೇಕೆಂದು ನಿರ್ಬಂಧಪಡಿಸಬೇಕಾಗಿ ಬಂದಿತು. ಇದರಿಂದಾಗಿ ಅನೇಕ ಸಂಸ್ಥೆಗಳ ಒಡೆಯರು ಮತ್ತು ಶಿಕ್ಷಣತಜ್ಞರು ತಮ್ಮಲ್ಲಿ ಕೆಲಸಕ್ಕಿರುವ ನೌಕರರು ಮತ್ತು ವಿದ್ಯಾರ್ಥಿಗಳು ಮನೆಯಿಂದಲೇ ಫಲದಾಯಕವಾಗಿ ಕೆಲಸ ಮಾಡುವಂತೆ ತಮ್ಮ ಸಂಸ್ಥೆಗಳು ಮತ್ತು ಶಾಲೆಗಳಿಗೆ ಹೊಸ ರೂಪ ಕೊಡಬೇಕಾಯಿತು. ಅನಿರೀಕ್ಷಿತ ಪರಿಣಾಮಗಳು ಊಂಟಾಗುತ್ತವೆ ಎಂಬುದು ಸ್ಪಷ್ಟವಾಗುತ್ತಿರುವುದರಿಂದ, ಸಮಾಜದ ದೊಡ್ಡ ವಿಭಾಗಗಳಿಗೆ ತಾತ್ಕಾಲಿಕವಾಗಿ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಇನ್ನು ಮುಂದೆ ಎಂದೆಂದಿಗೂ ಮನೆಯಿಂದಲೇ ಕೆಲಸ ಮಾಡಬೇಕಾಗುವಂತೆ ರೂಪಾಂತರ ಹೊಂದಬಹುದು ಎಂಬ ನೈಜ ಸಾಧ್ಯತೆಯನ್ನು ಸೃಷ್ಟಿಸಿದೆ. ಈ ಪ್ರವೃತ್ತಿಯನ್ನು ವಿವರಿಸುವ ಎರಡು ಪ್ರಮುಖ ಉದಾಹರಣೆಗಳನ್ನು ನೋಡೋಣ.

ತನ್ನ ಮೇ 13, 2020 ರ ಲೇಖನದಲ್ಲಿ ಫೋರ್ಬ್ಸ್ ನಿಯತಕಾಲಿಕೆ ತನ್ನ ಲೇಖನದಲ್ಲಿ ಹೀಗೆಂದು ತಿಳಿಸಿತು: “ಟ್ವಿಟರ್ CEO ಜ್ಯಾಕ್ ಡಾರ್ಸಿ, COVID-19ರಿಂದ ಪ್ರೇರಿತರಾಗಿ, ತಮ್ಮ ಉದ್ಯೋಗಿಗಳಿಗೆ ‘ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಬಹುದು’ ಎಂದು ಸೂಚಿಸಿದರು. ಈ ಆಯ್ಕೆಯನ್ನು ಅರ್ಥಮಾಡಿಕೊಳ್ಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಕಚೇರಿಯ ಚೌಕಟ್ಟಿನಲ್ಲಿ ಕೆಲಸ ಮಾಡಬಯಸುವವರಿಗೆ ಡಾರ್ಸಿ ಅಡ್ಡಿ ಬರುವುದಿಲ್ಲ. ಮನೆಯಿಂದಲೇ ಅಥವಾ ಕಚೇರಿಗೆ ಬಂದು ಕೆಲಸ ಮಾಡುವ ನಿರ್ಧಾರವನ್ನು ಅವರು ತಮ್ಮ ಉದ್ಯೋಗಿಗಳಿಗೇ ಬಿಡುತ್ತಿದ್ದಾರೆ. ಕಚೇರಿ ಯಾವಾಗ ಪುನರಾರಂಭವಾಗುತ್ತದೆ ಎಂಬುದು ತಿಳಿಯದಿರುವಾಗ, ಮನೆಯಿಂದ ಕೆಲಸ ಮಾಡುವ ಅವಕಾಶ ನೀಡುವ ಈ ಹೊಸ ಯೋಜನೆಯಿಂದ ಬಹುಪಾಲು ಟ್ವಿಟರ್ ಉದ್ಯೋಗಿಗಳು ಭವಿಷ್ಯದಲ್ಲಿ ಅಥವಾ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುತ್ತಾರೆಂದು ಬಹುಮಟ್ಟಿಗೆ ಊಹಿಸಬಹುದು.”

ನ್ಯೂಯಾರ್ಕ್ ಟೈಮ್ಸ್ ಮೇ 21, 2020 ರಂದು ಹೀಗೆ ಬರೆದಿದೆ: “ಫೇಸ್ ಬುಕ್ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್ಬರ್ಗ್ ಫೇಸ್ ಬುಕ್ ಮೂಲಕ ನೇರ ಪ್ರಸಾರ ಮಾಡಲಾದ ಸಿಬ್ಬಂದಿ ಸಭೆಯಲ್ಲಿ ಉದ್ಯೋಗಿಗಳಿಗೆ, ’ಒಂದು ದಶಕದೊಳಗೆ ಕಂಪನಿಯ 48,000 ಕ್ಕಿಂತಲೂ ಹೆಚ್ಚು ನೌಕರರು ಮನೆಯಿಂದ ಕೆಲಸ ಮಾಡುತ್ತಾರೆ. ಕೋವಿಡ್ ನಮ್ಮ ಜೀವನವನ್ನು ಸಾಕಷ್ಟು ಬದಲಾಯಿಸಿದೆ ಎಂಬುದು ಸ್ಪಷ್ಟವಾಗಿದೆ. ಅದು ನಮ್ಮಲ್ಲಿ ಹೆಚ್ಚಿನವರು ಕೆಲಸ ಮಾಡುವ ವಿಧಾನವನ್ನು ಒಳಗೊಂಡಿರುವುದರಲ್ಲಿ ಸಂದೇಹವೇ ಇಲ್ಲ’ ಎಂದು ಹೇಳಿದರು. ’ಈ ಅವಧಿಯಿಂದ ಹೊರಬಂದಾಗ, ದೂರದಿಂದ ಕೆಲಸ ಮಾಡುವ ಪ್ರವೃತ್ತಿಯೂ ಬೆಳೆಯುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ’ ಎಂದು ಶ್ರೀ ಜುಕರ್ಬರ್ಗ್ ತಿಳಿಸಿದರು.

COVID-19 ತ್ವರಿತವಾಗಿ ಮುನ್ನಡೆಯುವಂತೆ ಮಾಡಿರುವ ಮತ್ತೊಂದು ಪ್ರವೃತ್ತಿ ಎಂದರೆ ಟೆಲಿಮೆಡಿಸಿನ್. COVID-19 ಬಿಕ್ಕಟ್ಟಿನಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು, ವೈದ್ಯರು ಟೆಲಿಮೆಡಿಸಿನ್ ಬಳಕೆಯನ್ನು ಅಗತ್ಯವಾಗಿ ಹೆಚ್ಚಿಸಬೇಕಾಯಿತು. ಟೆಲಿಮೆಡಿಸಿನ್ ಬಳಕೆ ಶೀಘ್ರವಾಗಿ ಬೆಳೆಯುತ್ತದೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಮೇ 19, 2020ರಂದು Tech Republic, “2024 ರ ವೇಳೆಗೆ ವೈಯಕ್ತಿಕ ಭೇಟಿಗಳಿಗಿಂತ ದಿನಕ್ಕೆ ಹೆಚ್ಚು ವರ್ಚುವಲ್ (ವಾಸ್ತವಪ್ರಾಯವಾದ) ಭೇಟಿಗಳು ಇರುತ್ತವೆ ಎಂದು ನಾವು ಹಲವಾರು ವರ್ಷಗಳಿಂದ ವೈದ್ಯರಿಗೆ ಹೇಳುತ್ತ ಬಂದಿದ್ದೇವೆ. COVID ಆ ದಿನಾಂಕವನ್ನು ಎರಡು ಮೂರು ವರ್ಷಗಳಷ್ಟು ಶೀಘ್ರವಾಗುವಂತೆ ಮಾಡಿದೆ.” ಈಗಾಗಲೇ ತಮ್ಮ ಮನೆಗಳಿಂದ ಟೆಲಿಮೆಡಿಸಿನ್ ಅಭ್ಯಾಸ ಮಾಡುತ್ತಿರುವ ಕೆಲವು ವೈದ್ಯರ ಪರಿಚಯ ನಮಗಿದೆ.

ಈಗ ನಾವು ಮನೆಯಿಂದ ಕೆಲಸ ಮಾಡುವ ಪ್ರವೃತ್ತಿಯ ಬಗ್ಗೆ ಹಿಂದೂಗಳ ದೃಷ್ಟಿಕೋನವನ್ನು ನೋಡೋಣ. ಪ್ರಯಾಣದ ಅಗತ್ಯವಿಲ್ಲದ ಕಾರಣ ಮನೆಯಿಂದ ಕೆಲಸ ಮಾಡುವುದರಿಂದ ಹೆಚ್ಚಿನ ಸಮಯ ಉಳಿಯುತ್ತದೆ. ಅನೇಕರು ತಮ್ಮ ಕಚೇರಿ ಅಥವಾ ಶಾಲೆಯಿಂದ ದೂರ ವಾಸಿಸುತ್ತಾರೆ ಮತ್ತು ಪ್ರತಿದಿನ ಕೆಲಸಕ್ಕೆ ಹೋಗಿಬರಲು ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಈ ಹೆಚ್ಚುವರಿ ಗಂಟೆಗಳ ಉಳಿತಾಯದಿಂದ ಜೀವನವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನಾವು ಈ ಕೆಳಗಿನ ನಾಲ್ಕು ಉದಾಹರಣೆಗಳಿಂದ ನೋಡಬಹುದು.

ಮನೆಯ ದೇವರಮನೆಯನ್ನು ಸಜ್ಜುಗೊಳಿಸುವುದು

ಮೊದಲನೆಯದಾಗಿ ಮನೆಯ ದೇವರಮನೆಯನ್ನು ಸಜ್ಜುಗೊಳಿಸುವುದಕ್ಕಿಂತ ಆ ಸಮಯವನ್ನು ಸಫಲವಾಗಿ ಕಳೆಯಲು ಉತ್ತಮವಾದ ಮಾರ್ಗ ಯಾವುದು? ಸಾಂಪ್ರದಾಯಿಕವಾಗಿ ಹಿಂದೂಗಳು ಪೂಜೆ ಮಾಡಲು, ಧರ್ಮಗ್ರಂಥಗಳನ್ನು ಓದಲು, ಸಾಧನೆ ಮಾಡಲು, ಭಜನೆಗಳನ್ನು ಹಾಡಲು ಹಾಗೂ ಜಪ ಮಾಡಲು ಮಂದಿರದಂಥ ವಾತಾವರಣವನ್ನು ಕಲ್ಪಿಸಿ, ಪಾಲಿಸಿಕೊಂಡು ಬರುತ್ತಾರೆ. ನನ್ನ ಗುರುಗಳಾದ ಶಿವಾಯ ಸುಬ್ರಮುನಿಯಸ್ವಾಮಿ, ತಮ್ಮ ಅನೇಕ ಉಪನ್ಯಾಸಗಳಲ್ಲಿ ದೇವರಮನೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಅದು ಜನರನ್ನು ಹೇಗೆ ಆಧ್ಯಾತ್ಮಿಕವಾಗಿ ಉನ್ನತಿಗೆ ಏರಿಸುತ್ತದೆ ಮತ್ತು ಸ್ಫೂರ್ತಿ ತುಂಬುತ್ತದೆ ಎಂದು ಅವರಿಗೆ ತಿಳಿದಿತ್ತು. ಅವರ ಬರಹಗಳ ಉದ್ಧೃತವಾದ ಭಾಗ ಇಲ್ಲಿದೆ: “ಎಲ್ಲಾ ಹಿಂದೂಗಳು ಅಂತರ್ಲೋಕ ನಿವಾಸಿಗಳಾಗಿ ಮಾರ್ಗದರ್ಶನ ನೀಡುತ್ತ, ಸಂರಕ್ಷಣೆ ಮಾಡುತ್ತಾ ತಮ್ಮನ್ನು ಕಾಪಾಡುತ್ತಿರುವ ರಕ್ಷಕ ದೇವರನ್ನು ಹೊಂದಿದ್ದಾರೆ. ಭಕ್ತರು ಆಗಾಗ್ಗೆ ಭೇಟಿ ಕೊಡುವ ದೇವಾಲಯದಲ್ಲಿನ ಭಗವಂತ ಭಕ್ತರೊಂದಿಗೆ ವಾಸಿಸಲು ತನ್ನ ದೇವ ರಾಯಭಾರಿಗಳನ್ನು ಅವರ ಮನೆಗಳಿಗೆ ಕಳುಹಿಸುತ್ತಾನೆ.”

ಕಣ್ಣಿಗೆ ಕಾಣಿಸದ ಈ ಶಾಶ್ವತ ಅತಿಥಿಗಳಿಗಾಗಿ ಒಂದು ಕೋಣೆಯನ್ನು ನಿಗದಿಪಡಿಸಲಾಗುತ್ತದೆ. ಇಡೀ ಕುಟುಂಬದವರು ಪ್ರವೇಶಿಸಿ ಕುಳಿತುಕೊಳ್ಳಲು ಮತ್ತು ಆ ಕುಟುಂಬದವರು ಮತ್ತು ಅವರ ಪೀಳಿಗೆಯವರನ್ನು ರಕ್ಷಿಸಲು ಮೀಸಲಾಗಿರುವ ಈ ಸಂಸ್ಕಾರವಂತ ಜೀವಿಗಳೊಂದಿಗೆ ಆಂತರಿಕವಾಗಿ ಸಂವಹನ ನಡೆಸಲು ಆ ಕೋಣೆಯನ್ನು ನಿಗದಿಪಡಿಸಲಾಗುತ್ತದೆ. ಅವರಲ್ಲಿ ಕೆಲವರು ಅವರ ಪೂರ್ವಜರೇ ಆಗಿರುತ್ತಾರೆ. ಈ ದೈವೀ ಶಕ್ತಿಗಳನ್ನು ಆಕರ್ಷಿಸಲು ಮಲಗುವ ಕೋಣೆ ಅಥವಾ ಕಪಾಟು ಅಥವಾ ಅಡುಗೆಮನೆಯಲ್ಲಿರುವ ನೆಪಮಾತ್ರದ ಒಂದು ಮಾಡ ಸಾಕಾಗುವುದಿಲ್ಲ. ಒಬ್ಬ ಗೌರವಾನ್ವಿತ ಅತಿಥಿ ಆಗಮಿಸಿದಾಗ, ಅವರಿಗೆ ಉಳಿದುಕೊಳ್ಳಲು ಕಪಾಟಿನಲ್ಲಿ ಸ್ಥಳ ನೀಡಿ ಅಥವಾ ಅಡುಗೆಮನೆಯಲ್ಲಿ ಮಲಗುವಂತೆ ಹೇಳಿ ಆ ಅತಿಥಿ ಅದರಿಂದ ಸಂತೋಷ ಪಡಬಹುದೆಂದು ಅಥವಾ ನಾವು ಅವರ ಮೆಚ್ಚುಗೆಗೆ ಪಾತ್ರರಾಗಬಹುದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲಾ ಹಿಂದೂಗಳಿಗೆ ಬಾಲ್ಯದಿಂದಲೇ ಅತಿಥಿ ದೇವರು ಎಂದು ಹೇಳಿಕೊಡಲಾಗುತ್ತದೆ ಮತ್ತು ಅವರು ಭೇಟಿ ನೀಡುವ ಯಾವುದೇ ಅತಿಥಿಗೆ ರಾಜೋಚಿತ ಸತ್ಕಾರ ನೀಡುತ್ತಾರೆ. ಹಿಂದೂಗಳು ದೇವರನ್ನು ಭಗವಂತನೆಂದು ಭಾವಿಸಿ, ಮನೆಯಲ್ಲಿ ಶಾಶ್ವತವಾಗಿ ನೆಲೆಸಲು ಬರುವ ದೈವೀ ಶಕ್ತಿಗಳನ್ನು ಪೂಜ್ಯತೆಯಿಂದ ಆದರಿಸುತ್ತಾರೆ. ತಮ್ಮ ಮನೆಯನ್ನು ಸನಿಹದ ದೇವಾಲಯದ ವಿಸ್ತರಣೆ ಎಂದೇ ಅವರು ಪರಿಗಣಿಸುವುದರಿಂದ, ತಾಯಂದಿರು, ಹೆಣ್ಣುಮಕ್ಕಳು, ಚಿಕ್ಕಮ್ಮ, ದೊಡ್ಡಮ್ಮ, ತಂದೆ, ಪುತ್ರರು, ಚಿಕ್ಕಪ್ಪ, ದೊಡ್ಡಪ್ಪ-ಹೀಗೆ ಎಲ್ಲರೂ ಮನೆಯೊಳಗೇ ಪೂಜೆಯನ್ನು ಮಾಡಬಹುದು. ಸ್ಥಳೀಯ ದೇವಸ್ಥಾನಕ್ಕೆ ನಿಯಮಿತವಾಗಿ ಹೋಗುವುದರಿಂದ ನಿಮ್ಮ ಮನೆಯ ದೇವರಮನೆಯಲ್ಲಿನ ಅಲೌಕಿಕ ಪ್ರಭಾವವನ್ನು ಹೆಚ್ಚಿಸಬಹುದು. ನೀವು ದೇವಾಲಯದಿಂದ ಮನೆಗೆ ಬಂದಾಗ, ನಿಮ್ಮ ದೇವರಮನೆಯಲ್ಲಿ ಎಣ್ಣೆ ದೀಪವನ್ನು ಬೆಳಗಿಸಿ. ಇದರಿಂದ ದೇವಾಲಯದಲ್ಲಿದ್ದ ದೇವರುಗಳನ್ನು ಅತೀಂದ್ರಿಯವಾಗಿ ಮನೆಯ ದೇಗುಲಕ್ಕೆ ಕರೆತಂದಂತೆ ಆಗಿ, ನಿಮ್ಮ ಮನೆಯಲ್ಲಿ ದೇವಾಲಯದ ಧಾರ್ಮಿಕ ವಾತಾವರಣ ಉಂಟಾಗುತ್ತದೆ. ಅವರು ಆಂತರಿಕ ಜಗತ್ತಿನಿಂದ, ಕುಟುಂಬದ ಸದಸ್ಯರನ್ನು ಆಶೀರ್ವದಿಸಲು ಮತ್ತು ಸೂಕ್ತ ಮಾರ್ಗದರ್ಶನ ನೀಡಲು ಮತ್ತು ಮನೆಯ ಧಾರ್ಮಿಕ ಕ್ಷೇತ್ರವನ್ನು ಬಲಪಡಿಸಲು ಸಮರ್ಥರಾಗಿದ್ದಾರೆ.

ಕುಟುಂಬದ ಬೆಸುಗೆ

ಎರಡನೆಯದಾಗಿ, ಮನೆಯಿಂದ ಕೆಲಸ ಮಾಡುವುದರಿಂದ ನಿಮ್ಮ ಮಕ್ಕಳೊಂದಿಗೆ ಹೆಚ್ಚು ಗುಣಮಟ್ಟದ ಸಮಯವನ್ನು ಕಳೆಯಬಹುದು. ಅಲ್ಲದೆ, ಮನೆಯಿಂದ ಕೆಲಸ ಮಾಡುವಾಗ ನಿಮ್ಮ ವೇಳಾಪಟ್ಟಿಯನ್ನು ಸಂದರ್ಭಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಮಕ್ಕಳು ಶಾಲೆಯಲ್ಲಿದ್ದಾಗ ನಿಮ್ಮ ವೃತ್ತಿಜೀವನದತ್ತ ಗಮನಹರಿಸಬಹುದು ಮತ್ತು ಅವರು ಮನೆಯಲ್ಲಿದ್ದಾಗ ಕೆಲಸ ಮುಗಿಸಿ ಅವರೊಡನೆ ಸಮಯ ಕಳೆಯಬಹುದು. ಗುರುದೇವರು ಕೌಟುಂಬಿಕ ಕೂಟಗಳಿಗೆ ಹೆಚ್ಚಿನ ಒತ್ತು ನೀಡಿದರು ಮತ್ತು ವಾರಕ್ಕೊಮ್ಮೆ “ಸೋಮವಾರ ಸಂಜೆ ಮನೆ”ಯಲ್ಲಿ ಎಲ್ಲರೊಡನೆ ಕಳೆಯುವಂತೆ ಸೂಚಿಸಿದರು. ಅವರ ನೀಡಿದ ವಿವರಣೆ ಹೀಗಿದೆ: “ಹಿಂದೂಗಳು ಸೇರಿದಂತೆ ಅನೇಕ ಧರ್ಮಗಳ ಜನರು ಸೋಮವಾರ ಸಂಜೆಯನ್ನು ಮನೆಯಲ್ಲಿ ಎಲ್ಲರೊಡನೆ ಕಳೆಯುತ್ತಾರೆ. ಶಿವನ ದಿನವಾದ ಸೋಮವಾರ ಸಂಜೆ, ಕುಟುಂಬ ಸದಸ್ಯರು ಒಗ್ಗೂಡಿ, ವಿಶೇಷ ಅಡುಗೆಯನ್ನು ತಯಾರಿಸುತ್ತಾರೆ, ಒಟ್ಟಿಗೆ ಆಟಗಳನ್ನು ಆಡುತ್ತಾರೆ ಮತ್ತು ಪರಸ್ಪರರ ಉತ್ತಮ ಗುಣಗಳನ್ನು ಮುಕ್ತವಾಗಿ ಪ್ರಶಂಸಿಸುತ್ತಾರೆ. ದೂರದರ್ಶನವನ್ನು ನೋಡುತ್ತ ಕುಳಿತುಕೊಳ್ಳುವುದಿಲ್ಲ. [ಇಂದಿನ ದಿನಗಳಲ್ಲಿ ಯಾವುದೇ ಸಾಮಾಜಿಕ ಮಾಧ್ಯಮವನ್ನು ಬಳಸದಿರುವುದನ್ನು ಒಳಗೊಂಡಿರುತ್ತದೆ]. ಆ ಸಮಯದಲ್ಲಿ ಯಾವ ಸಮಸ್ಯೆಗಳ ಕಡೆಗೂ ಗಮನ ಹರಿಸದೆ, ಎಲ್ಲರೂ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಬಹುದು ಮತ್ತು ಚಿಕ್ಕ ಮಗುವಿನಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರೂ ತಮಗೆ ತೋಚಿದ್ದನ್ನು ಹೇಳಬಹುದು. ಇದು ಕುಟುಂಬದವರೆಲ್ಲರೂ ಒಗ್ಗೂಡಿ ಬಾಳುವ ದಿನ. ವಾರದಲ್ಲಿ ಒಂದು ದಿನ ಮಕ್ಕಳೆಲ್ಲರೂ ತಮ್ಮ ತಾಯಿತಂದೆಯರೊಡನೆ ಮನೆಯಲ್ಲಿ ಕಾಲಕಳೆಯುವ ಪ್ರತೀಕ್ಷೆ ಮಾಡುತ್ತಾರೆ. ಸೋಮವಾರ ತಪ್ಪಿದರೆ ಮಂಗಳವಾರ ಅಥವಾ ಇನ್ನಾವುದೇ ದಿನ ಒಟ್ಟಿಗೆ ಕಳೆಯಬಹುದು ಎಂದು ಇದರ ಅರ್ಥವಲ್ಲ. ಸೋಮವಾರ ಸಂಜೆ ಮನೆ ಯಾವಾಗಲೂ ಸೋಮವಾರದಂದೇ ನಡೆಯುತ್ತದೆ ಮತ್ತು ಪ್ರತಿಯೊಬ್ಬರ ಜೀವನವೂ ಅದಕ್ಕೆ ಹೊಂದಿಕೊಳ್ಳಬೇಕು. ”

ಈ ಬಗೆಯ ಚಟುವಟಿಕೆಯೇ ನಿಜವಾದ ಸಂಪತ್ತು ಎಂದು ಗುರುದೇವರು ತಿಳಿಸುತ್ತಾರೆ. “ವೃತ್ತಿಜೀವನದ ಕಾರಣದಿಂದಾಗಿ ಅನೇಕರು ತಮ್ಮ ಕುಟುಂಬಗಳಲ್ಲಿ ಇದು ಕೂಡ ಅಸಾಧ್ಯವೆಂದು ಭಾವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ಸೌಕರ್ಯದ ಜೀವನ ನಡೆಸಲು ಎರಡು, ಮೂರು ಆದಾಯಗಳನ್ನು ಹೊಂದಿರಬೇಕು ಎಂದು ತಿಳಿಯುತ್ತಾರೆ. ಹಣವನ್ನು ಗಳಿಸುತ್ತಾರೆ ಮತ್ತು ಕೆಲವೊಮ್ಮೆ ಬಹುಬೇಗನೆ ಕಳೆದೂ ಬಿಡುತ್ತಾರೆ. ಆದರೆ ಸಂಪತ್ತು ಎಂದರೇನು? ಸಂಪತ್ತು ಅನೇಕ ಮುಖಗಳನ್ನು ಹೊಂದಿರುವ ವಜ್ರವಾಗಿದೆ. ಹಣ ಎನ್ನುವುದು ಸಂಪತ್ತಿನ ಒಂದು ಮುಖ, ಆದರೆ ಅದು ಮಾತ್ರವಲ್ಲ. ಪರಸ್ಪರರೊಡನೆ ಆನಂದದಿಂದ ವಾಸಿಸುವ ಸಂತೋಷ ತುಂಬಿದ ಕುಟುಂಬ-ಅದೇ ದೊಡ್ಡ ಸಂಪತ್ತು. ಒಟ್ಟಿಗೆ ಕೆಲಸ ಮಾಡುವುದು ಮತ್ತು ಒಟ್ಟಿಗೆ ಕೆಲಸ ಮಾಡುವುದರಿಂದ ಆನಂದ ಪಡುವುದು ಮತ್ತೊಂದು ದೊಡ್ಡ ಸಂಪತ್ತು. ”

ಬದುಕಿನಲ್ಲಿ ಸಮತೋಲನವನ್ನು ಉಂಟುಮಾಡಿ

ಮೂರನೆಯದಾಗಿ, ಬದುಕಿನಲ್ಲಿ ಹೆಚ್ಚು ತೃಪ್ತಿ ಮತ್ತು ಸಮತೋಲನವನ್ನು ಉಂಟುಮಾಡಬೇಕು. ಮನೆಯಿಂದ ಕೆಲಸ ಮಾಡುವುದರಿಂದ ಉಳಿಯುವ ಸಮಯದಲ್ಲಿ ಪ್ರತಿನಿತ್ಯ ಅರ್ಧ ಘಂಟೆಯನ್ನು ದೈಹಿಕ ವ್ಯಾಯಾಮದಂತಹ ಪ್ರಮುಖ ಚಟುವಟಿಕೆಗಳಿಗೆ ಮೀಸಲಿರಿಸಿ. ವ್ಯಾಯಾಮದಿಂದ ಮತ್ತು ಮನೆಯಲ್ಲಿ ನಿಯಮಿತವಾಗಿ ಹಠ ಯೋಗಗಳನ್ನು ಅಭ್ಯಾಸ ಮಾಡುವುದರಿಂದ ಆಧುನಿಕ ಜೀವನ ಉಂಟುಮಾಡುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ಇದು ಹೆಚ್ಚಿನ ಕಚೇರಿಗಳಲ್ಲಿ ಅಸಾಧ್ಯ. ಸರಳ ಧ್ಯಾನ ತಂತ್ರಗಳನ್ನು ಅನುಸರಿಸುವುದರಿಂದಲೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ಹೆಚ್ಚಿನ ಸಮಯವನ್ನು ಆರೋಗ್ಯಕರ ಅಡುಗೆ ಮಾಡಲು, ಮತ್ತು ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ವಿಹಾರಗಳಲ್ಲಿ ಭಾಗವಹಿಸಲು, ಹೊಸದಾಗಿ ಏನನ್ನಾದರೂ ಕಲಿತುಕೊಳ್ಳಲು ಬಳಸಿಕೊಳ್ಳಬೇಕು.

ಸಮುದಾಯ ಸೇವೆ

ನಾಲ್ಕನೆಯದಾಗಿ ನಿಮಗೆ ದೊರೆತಿರುವ ಈ ಸಮಯದ ಕಿಂಚಿತ್ ಭಾಗವನ್ನು ಸಮುದಾಯಕ್ಕೆ ಹಿಂದಿರುಗಿಸಿ. ಕುಟುಂಬದ ಎಲ್ಲ ಸದಸ್ಯರೂ ಭಾಗವಹಿಸುವ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಿ. ಯುವಕರು ಸೇವೆ ಸಲ್ಲಿಸಿದಾಗ ಅವರ ಮನಸ್ಸಿನ ಮೇಲೆ ಸೇವೆಯ ಪ್ರಾಮುಖ್ಯತೆ, ನಿಸ್ವಾರ್ಥ ಸೇವೆ ಉತ್ತಮ ಪ್ರಭಾವ ಬೀರುತ್ತವೆ. ಸೇವೆ ಸಲ್ಲಿಸಿದಾಗ ಉಂಟಾಗುವ ಒಂದು ದೊಡ್ಡ ಪ್ರಯೋಜನವೆಂದರೆ ಅದು ತಮ್ಮ ಕುಟುಂಬಕ್ಕೆ ಸಂಪತ್ತನ್ನು ಶೇಖರಿಸುವ ಏಕೈಕ ಉದ್ದೇಶದಿಂದ ಕೆಲಸ ಮಾಡುವ, ಚೇತನವನ್ನು ಕುಗ್ಗಿಸುವ ಪ್ರಾಪಂಚಿಕತೆಗೆ ಹೆಚ್ಚು ಒತ್ತು ಕೊಡುವುದನ್ನು ತಡೆಯುತ್ತದೆ. ನೀವು ವಾಸಿಸುವ ಸ್ಥಳದಲ್ಲಿ ವಿಧಿಬದ್ಧ ಹಿಂದೂ ಸೇವಾ ಯೋಜನೆಗಳಿಲ್ಲದಿದ್ದರೆ, ಪರಿಸರವನ್ನು ಸುಧಾರಿಸುವುದು, ವಿಪತ್ತು ಪರಿಹಾರ, ಅಥವಾ ಅಗತ್ಯವಿರುವವರಿಗೆ ಬಟ್ಟೆ, ಆಹಾರ ಮತ್ತು ಆರೈಕೆಯನ್ನು ಒದಗಿಸುವ ಸಾಮಾನ್ಯ ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸಿ. 2001 ರ ಗುಜರಾತ್ ಭೂಕಂಪದನಂತರ, BAPS ನ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ತಮ್ಮ ಅನುಯಾಯಿಗಳಿಗೆ, “ಜನರು ಅಪಾರ ಕಷ್ಟನಷ್ಟಗಳನ್ನು ಮತ್ತು ದುಃಖವನ್ನು ಎದುರಿಸುತ್ತಿರುವಾಗ, ನಮ್ಮ ಭಾರತೀಯ ಸಂಪ್ರದಾಯ ಅವರಿಗೆ ಸಾಂತ್ವನ ನೀಡುತ್ತದೆ. ಜನರಿಗೆ ಸೇವೆ ಸಲ್ಲಿಸುವ ಮೂಲಕ ಜನಾರ್ದನನಿಗೇ ಸೇವೆ ಸಲ್ಲಿಸುತ್ತಿದ್ದೇವೆ ಎಂದು ನಾವು ಭಾವಿಸುತ್ತೇವೆ” ಎಂದು ಸಲಹೆ ಹೇಳಿದರು.

ಮನೆಯಿಂದ ಕೆಲಸ ಮಾಡುವುದರಿಂದ ಇನ್ನೂ ಅನೇಕ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು. ಈ ನಾಲ್ಕು ಉದಾಹರಣೆಗಳು ಮನೆಯ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು, ನಿಮ್ಮ ಯೋಗಕ್ಷೇಮವನ್ನು ವೃದ್ಧಿಗೊಳಿಸಲು ಮತ್ತು ಕೌಟುಂಬಿಕ ಬೆಸುಗೆಯನ್ನು ಬಲಪಡಿಸುತ್ತ ಸಮುದಾಯಕ್ಕೆ ಉದಾರ ಸೇವೆ ಸಲ್ಲಿಸುವ ಹೊಸ ಸಾಧ್ಯತೆಗಳ ಬಗ್ಗೆ ನಿಮ್ಮ ಸೃಜನಶೀಲ ಚಿಂತನೆಯನ್ನು ಪ್ರೇರಿಸುತ್ತದೆ ಎಂದು ನಾವು ಭಾವಿಸುತ್ತೇವೆ.