ಹಿಂದೂಧರ್ಮದಲ್ಲಿಸಾಕ್ಷಾತ್ಕಾರ

Realization in Hinduism

ಕಲನಶಾಸ್ತ್ರ (ಕ್ಯಾಲ್ಕುಲಸ್ )ದ  ಮೂಲಕ ಗಣಿತದ ಅಧ್ಯಯನವನ್ನು ಆರಂಭಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ದೈವ ಸಾಕ್ಷಾತ್ಕಾರದ ಮೂಲಕ ಆಧ್ಯಾತ್ಮಿಕ ಮಾರ್ಗವನ್ನು ಯಾರೂ ಆರಂಭಿಸಲು ಸಾಧ್ಯವಿಲ್ಲ.

ಸದ್ಗುರುಬೋದಿನಾಥ್ವೇಲನ್ಸ್ವಾಮಿ

ಭಕ್ತರೊಬ್ಬರು ಇತ್ತೀಚೆಗೆ ನಮ್ಮ ಸಾಪ್ತಾಹಿಕ ಆನ್‌ಲೈನ್ ಜೂಮ್ ಸತ್ಸಂಗಕ್ಕೆ ಎರಡು ಪ್ರಶ್ನೆಗಳನ್ನು ಕಳಿಸಿದ್ದರು ಈ ವಿಷಯವನ್ನು ಕುರಿತು ನಾನು ಕೊಟ್ಟ ಉತ್ತರ ಹಾಗೂ ಈ ವಿಷಯಗಳ ಕುರಿತು ಕೆಲವು ಹೆಚ್ಚಿನ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಮೊದಲನೇಪ್ರಶ್ನೆ 

“ಆಧುನಿಕ ಬಳಕೆಯಲ್ಲಿ ಆತ್ಮ ಸಾಕ್ಷಾತ್ಕಾರವನ್ನು ಸಾಮಾನ್ಯವಾಗಿ ವ್ಯಕ್ತಿಯ ಜೀವನದ ಗುರಿಯನ್ನು ಸಾಧಿಸುವುದು ಹಾಗೂ ಉಚ್ಚಾಕಾಂಕ್ಷೆಗಳನ್ನು ಪೂರೈಸುವುದು ಎಂದು ಅರ್ಥೈಸಲಾಗುತ್ತದೆ. ಆಧ್ಯಾತ್ಮಿಕತೆಯಲ್ಲಿ ಹೇಳುವ ಆತ್ಮ ಸಾಕ್ಷಾತ್ಕಾರವನ್ನು ಹೆಚ್ಚು ಸ್ಪಷ್ಟವಾಗಿ ಹೇಳಲು ಯಾವ ಪದವನ್ನು ಬಳಸಬಹುದು? ನಿಮ್ಮ ಸಲಹೆ ಏನು?

ಆಧುನಿಕ ಜಾತ್ಯತೀತ ಸಂದರ್ಭದಲ್ಲಿ ಆತ್ಮ ಸಾಕ್ಷಾತ್ಕಾರವೆಂಬ ಪರಿಕಲ್ಪನೆ ಹಿಂದೂ ಚಿಂತನೆಗಿಂತ ವಿಭಿನ್ನ ಅರ್ಥ ಪಡೆದುಕೊಂಡಿದೆ ಎಂದು ನೀವು ಹೇಳಿದ್ದು ಸರಿ. ಇಂದು ಅದನ್ನು ಸಾಮಾನ್ಯವಾಗಿ ಪ್ರತಿ ವ್ಯಕ್ತಿ ತನ್ನ ಪೂರ್ಣ ಸಾಮರ್ಥ್ಯವನ್ನು ಸಾಧಿಸುವುದು ಅಥವಾ ಜೀವನದಲ್ಲಿ ಯಶಸ್ಸು ಪಡೆಯುವುದು ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ರಚನಾತ್ಮಕ ತರಬೇತಿಯ ಮೂಲಕ ಆಶ್ರಿತರು  “ಆಕಾಂಕ್ಷೆಗಳನ್ನು ವಾಸ್ತವಕ್ಕೆ ತಿರುಗಿಸುವ” ಬಗ್ಗೆ ವಿವರಿಸಲು ಜೀವನ ತರಬೇತುದಾರ (ಲೈಫ್ ಕೋಚ್) ಸ್ವಯಂ- ಸಾಕ್ಷಾತ್ಕಾರವನ್ನು ಬಳಸಬಹುದು. ಈ ಆಧುನಿಕ ಬಳಕೆ ಮನೋವಿಜ್ಞಾನದಿಂದ ಬಲವಾಗಿ ಪ್ರಭಾವಿತವಾಗಿದೆ. ಅಬ್ರಹಾಂ ಮಾಸ್ಲೋ “ಸ್ವಯಂ ಸಾಕ್ಷಾತ್ಕಾರ” ವನ್ನು ವೈಯಕ್ತಿಕ ಅಭಿವೃದ್ಧಿಯ ಅತ್ಯುನ್ನತ ಹಂತವೆಂದು ವಿವರಿಸಿದ್ದಾನೆ ಕಾಲಕ್ರಮೇಣ ಆತ್ಮ ಸಾಕ್ಷಾತ್ಕಾರ ಎಂಬ ಪದವನ್ನು   ಬರವಣಿಗೆಗಳಲ್ಲಿ ಹಾಗೂ ಪ್ರೇರಣಾತ್ಮಕ ಸಾಹಿತ್ಯದಲ್ಲಿ ಪರ್ಯಾಯವಾಗಿ ಬಳಸಲಾಗಿದೆ.

ಆದರೆ ಯೌಗಿಕ ಸಂಪ್ರದಾಯದಲ್ಲಿ ಆತ್ಮ ಸಾಕ್ಷಾತ್ಕಾರ ಇನ್ನೂ ಅತ್ಯಂತ ಗ್ರಹಣವಾದ ವಿಷಯವನ್ನು ಸೂಚಿಸುತ್ತದೆ. ಇದು ಬಾಹ್ಯ ಸಾಧನೆಗಳಿಗೆ ಸಂಬಂಧಿಸಿಲ್ಲ, ಬದಲಾಗಿ ಆಂತರಿಕ ಆಧ್ಯಾತ್ಮಿಕ ಸತ್ಯಗಳಿಗೆ ಸಂಬಂಧಿಸಿದೆ,  ವಾಸ್ತವಿಕವಾಗಿ ಆ ವಿವರಿಸಲಾದ ಸತ್ಯವನ್ನು ಅನುಭವಿಸುವುದಾಗಿದೆ. ಉದಾಹರಣೆಗೆ ವ್ಯಕ್ತಿಯ ಆತ್ಮಪ್ರಕೃತಿಯನ್ನು ಪ್ರಖರ ಆಂತರಿಕ ಬೆಳಕೆಂದು ಅಥವಾ ಆತ್ಮ ಜ್ಯೋತಿ ಎಂದು ಅನುಭವಿಸಬಹುದು. ಬೌದ್ಧಿಕವಾಗಿ ಹೀಗೆ ಆತ್ಮವನ್ನು ಅನುಭವಿಸಬಹುದು ಎಂದು ಗ್ರಹಿಸುವುದು ಸಾಕ್ಷಾತ್ಕಾರವಲ್ಲ. ವಾಸ್ತವಿಕವಾಗಿ ಅಂತರಂಗದಲ್ಲಿ ಆತ್ಮಜ್ಯೋತಿಯನ್ನು ಕಾಣುವುದೇ. ಸಾಕ್ಷಾತ್ಕಾರ.

ಆಧುನಿಕ ಜಾತ್ಯತೀತ ಪದ ಬಳಕೆಯಿಂದ ಆಗುವ ಈ ದ್ವಂದ್ವವನ್ನು ನಿವಾರಿಸಲು ಒಂದು ಪರಿಹಾರವೆಂದರೆ ಇಂಗ್ಲೀಷ್ ಪದದ ಬದಲಾಗಿ ಸಂಸ್ಕೃತ ಪದವನ್ನು ಬಳಸುವುದು. ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಸದ್ಗುರು ಶಿವಾಯ ಸುಬ್ರಮುನಿಯ ಸ್ವಾಮಿಯವರು ತಮ್ಮ ಬರವಣಿಗೆಗಳಲ್ಲಿ ದರ್ಶನ ಎಂಬ ಪದವನ್ನು ಬಳಸುತ್ತಾರೆ. ಉದಾಹರಣೆಗೆ ಡ್ಯಾನ್ಸಿಂಗ್ ವಿತ್ ಶಿವ ಮಂಡಲ ಒನ್

– ಶಿವಮಂಡಲ ಒಂದರ ಜೊತೆ ನರ್ತಿಸುವುದು, “ಆತ್ಮ ಸಾಕ್ಷಾತ್ಕಾರ- ಪರಮಾತ್ಮನ ದರ್ಶನ” ಎಂದು ಹೆಸರಿಸಲಾಗಿದೆ. ದರ್ಶನವೆಂದರೆ ದೃಷ್ಟಿ ನೋಟ ಎಂಬ ಅರ್ಥವಿದೆ. ಪರಮಾತ್ಮ ದರ್ಶನವನ್ನು ಇಂಗ್ಲಿಷಿನಲ್ಲಿ “ಆತ್ಮನ ಅತೀಂದ್ರಿಯ ದೃಷ್ಟಿ“ ಎನ್ನಬಹುದು. 

ಎರಡನೇಪ್ರಶ್ನೆ 

“ಹಿಂದೂ ಧರ್ಮದಲ್ಲಿ ದೈವ ಸಾಕ್ಷಾತ್ಕಾರ ಹಾಗೂ ಆತ್ಮ ಸಾಕ್ಷಾತ್ಕಾರ ಎಂದರೆ ಏನು ಅರ್ಥ?” ದೈವ ಸಾಕ್ಷಾತ್ಕಾರ ಅಥವಾ ಆತ್ಮ ಸಾಕ್ಷಾತ್ಕಾರ ಎಂಬುದಕ್ಕೆ ಹಿಂದೂ ಧರ್ಮದ ವಿವಿಧ ಶಾಖೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಭಕ್ತಿ ಪ್ರಧಾನವಾದ ಹಿಂದೂ ಧರ್ಮದ ಶಾಖೆಯಲ್ಲಿ ಆತ್ಮ ಸಾಕ್ಷಾತ್ಕಾರ ಎಂಬ ಪದವನ್ನು ಕೆಲವೊಮ್ಮೆ ದೇಹದಿಂದ ಭಿನ್ನವಾದ ಆತ್ಮವಾಗಿ, ಒಬ್ಬರ ನಿಜವಾದ ಸ್ವರೂಪವನ್ನು ಅರಿತುಕೊಳ್ಳುವುದನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಆದರೆ ದೈವ ಸಾಕ್ಷಾತ್ಕಾರವನ್ನು ಆ ಪರಮಾತ್ಮನ ನೇರ ಅನುಭವವೆಂದು ಹೇಳುತ್ತಾರೆ. ಅದ್ವೈತ ಸಂಪ್ರದಾಯಗಳಲ್ಲಿ ಆಳವಾದ ಆತ್ಮ ಪಾರಮಾರ್ಥಿಕ ಸತ್ಯವೇ ಆಗಿದೆ. ಹಾಗಾಗಿ ಆತ್ಮ ಸಾಕ್ಷಾತ್ಕಾರ ಹಾಗೂ ದೈವ ಸಾಕ್ಷಾತ್ಕಾರ ಎರಡು ಅಂತಿಮವಾಗಿ ಒಂದೇ ಗುರಿ ತಲುಪುವಿಕೆ ಎಂದು ಅರ್ಥೈಸಲಾಗುತ್ತದೆ. 

ಛಾಂದೋಗ್ಯ ಉಪನಿಷತ್ತಿನ ಈ ಶ್ಲೋಕ “ತತ್ ತ್ವಂ ಅಸಿ” ಎಂಬ ವಾಕ್ಯವನ್ನು ಹೊಂದಿದೆ. ಇದು ಅದ್ವೈತ ದೃಷ್ಠಿಯಲ್ಲಿ ಆತ್ಮ ಸಾಕ್ಷಾತ್ಕಾರವನ್ನು ವರ್ಣಿಸುವ ನಾಲ್ಕು ಶಾಸ್ತ್ರೀಯ ಮಹಾ ವಾಕ್ಯಗಳಲ್ಲಿ ಒಂದು. ಈ ಶ್ಲೋಕವನ್ನು “ಅದು ನೀನೇ ಆಗಿರುವೆ“ ಎಂದು ಅನುವಾದಿಸಬಹುದು. ಇದು ವ್ಯಕ್ತಿಯ ಆತ್ಮ ‘ನೀನು’ ಹಾಗೂ ಆತ್ಯಂತಿಕ ಸತ್ಯ ಬ್ರಹ್ಮ -‘ಅದು’ ಗಳಿಗೆ ಇರುವ ಅಭೇದವನ್ನು, ಅದ್ವೈತವನ್ನು ಸೂಚಿಸುತ್ತದೆ.

ಈ ರೀತಿಯಲ್ಲಿ ಅದ್ವೈತದ ದೃಷ್ಟಿಯನ್ನು ಪ್ರಸ್ತುತಪಡಿಸಿದರೆ ಇದು ತಲುಪಲು ಅಸಾಧ್ಯವಾದ ಗುರಿಯಾಗಿ, ಕೇವಲ ಸನ್ಯಾಸಿಗಳು ಗಮನಿಸಬಹುದಾದ ವಿಷಯ ಎನಿಸಬಹುದು. ನನ್ನ ಗುರು ಶಿವಾಯ ಸುಬ್ರಮುನಿಯ ಸ್ವಾಮಿಗಳು ಇದಕ್ಕೆ ಸುಲಭ ಸಾಧ್ಯವಾದ ವಿವರಣೆ ನೀಡುತ್ತಾರೆ. ಆತ್ಮ ಸಾಕ್ಷಾತ್ಕಾರ ಹಲವು ಹಂತಗಳಲ್ಲಿ ಇರುತ್ತದೆ. ಪ್ರತಿಯೊಬ್ಬರೂ ಮನಸ್ಸು, ಬೌದ್ಧಿಕ ಮತ್ತು ಭಾವನಾತ್ಮಕವಾಗಿ  ತಾವು ಆತ್ಮ ಜೀವ ಅಥವಾ ಜೀವಾತ್ಮ ಎಂದು ಅರಿತರೆ ತೃಪ್ತಿ ಭದ್ರತೆ ಮೂಡುತ್ತದೆ. ಇದೇ ಒಂದು ಆರಂಭಿಕ ಹಂತವಾಗಿದೆ. ಸಚ್ಚಿದಾನಂದ (ಸದ್ಗುಣ ಬ್ರಹ್ಮ)ವೇ ಆತ್ಮದ ಸಾಕ್ಷಾತ್ಕಾರ ತೃಪ್ತಿಯನ್ನು ನೀಡುತ್ತದೆ, ಬಾಹ್ಯ ಪ್ರಪಂಚದ ಎಲ್ಲಾ ಭಾವನೆಗಳು ಮತ್ತು ಆಲೋಚನೆಗಳಿಂದ ಬಿಡುಗಡೆಯನ್ನು ನೀಡುತ್ತದೆ ಮತ್ತು ನರಮಂಡಲವು ವಿಶುದ್ಧ ಮತ್ತು ಅನಾಹತ ಚಕ್ರಗಳ ಮೂಲಕ ಹರಿಯುವ ಶಕ್ತಿಗಳಿಗೆ ಪ್ರತಿಕ್ರಿಯಿಸುತ್ತದೆ.

ಕಾಲ ಹಾಗೂ ರೂಪ ಮತ್ತು ಸ್ಥಳವನ್ನು ಮೀರಿದ ಆತ್ಮವನ್ನು ಅರಿತುಕೊಳ್ಳುವುದು, ಪರಶಿವ (ನಿರ್ಗುಣ ಬ್ರಹ್ಮ), ಎಲ್ಲಾ ಬಂಧಗಳನ್ನು ಕತ್ತರಿಸಿ, ಆತ್ಮವನ್ನು ನೋಡುವ ಬದಲು ಆತ್ಮದಿಂದ ಹೊರಗೆ ನೋಡುವಂತಹ ವೈಯಕ್ತಿಕ ಅರಿವನ್ನು ಹಿಮ್ಮೆಟ್ಟಿಸುತ್ತದೆ.” ಈ ಕೊನೆಯ ಹಂತವು ಉಪನಿಷತ್ತುಗಳ “ನೀನೇ ಅದು”. 

ಗುರುದೇವ ಆಧ್ಯಾತ್ಮಿಕ ಸಾಕ್ಷಾತ್ಕಾರ ಮೂರು ಹಂತದಲ್ಲಿ ತೆರೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ. ಮೊದಲನೆಯದು ತನ್ನನ್ನು ತಾನು ಆತ್ಮ, ಜೀವ ಎಂದು ಅರಿತುಕೊಳ್ಳುವುದು. ಎರಡನೆಯದು ಸಚ್ಚಿದಾನಂದ ಎಂದು ಕರೆಯಲ್ಪಡುವ ದೈವಿಕ, ಸರ್ವವ್ಯಾಪಿ ಪ್ರಜ್ಞೆಯನ್ನು ಅನುಭವಿಸುವುದು. ಮೂರನೆಯದು ಸಮಯ, ರೂಪ ಮತ್ತು ಸ್ಥಳವನ್ನು ಮೀರಿದ ಪರಶಿವನ ಸಾಕ್ಷಾತ್ಕಾರ – ಇದು ನಿಜವಾದ ಆತ್ಮ-ಸಾಕ್ಷಾತ್ಕಾರ. ಹಿಂದೂ ಧರ್ಮದ ಅದ್ವೈತ ಶಾಲೆಗಳಲ್ಲಿ ಆಧ್ಯಾತ್ಮಿಕ ಸಾಧನೆಯ ಪ್ರಗತಿಪರ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಈ ಮೂರು ಹಂತಗಳು ಸಹಾಯಕವಾದ ಹಂದರವನ್ನು ಒದಗಿಸುತ್ತವೆ.

ಗಣಿತದಹೋಲಿಕೆ 

ಆತ್ಮ ಸಾಕ್ಷಾತ್ಕಾರದೆಡೆಗೆ ತಲುಪುವ ಉತ್ತಮ ಮಾರ್ಗವನ್ನು ಅರ್ಥಮಾಡಿಕೊಳ್ಳಲು ಗಣಿತ ಅಧ್ಯಯನದ ಹೋಲಿಕೆ ಸಹಾಯಕವಾಗಿದೆ. ಸಾಮಾನ್ಯವಾಗಿ ಗಣಿತದ ವಿವಿಧ ವಿಷಯಗಳನ್ನು ಸರಿಸುಮಾರು ಹದಿನೈದು ವರ್ಷಗಳ ಕಾಲ ಅತಿ ಸರಳದಿಂದ ಅತ್ಯಂತ ಸಂಕೀರ್ಣ ವಿಷಯಗಳವರೆಗೆ ಅಧ್ಯಯನ ಮಾಡಲಾಗುತ್ತದೆ. ಮುಖ್ಯ ವಿಷಯಗಳೆಂದರೆ (1) ಎಣಿಕೆ, ಮೂಲ ಅಂಕಗಣಿತ, ಭಿನ್ನರಾಶಿ, ದಶಾಂಶಗಳು (2) ಬೀಜಗಣಿತ, ದ್ಯಾಮಿತಿ, ತ್ರಿಕೋನಮಿತಿ, ಕಲನ ಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಸಂಭವನೀಯತೆ.

ಗಣಿತದಲ್ಲಿ ಅಂಕಗಣಿತ ಮತ್ತು ಬೀಜಗಣಿತಗಳಲ್ಲಿ ಪರಿಣತಿ ಪಡೆಯದೆ ಯಾರೂ ಕಲನ ಶಾಸ್ತ್ರವನ್ನು ಪ್ರಾರಂಭಿಸುವುದಿಲ್ಲ. ಅದೇ ರೀತಿ ಹಂತ ಹಂತವಾಗಿ ಮೂರು ಪ್ರಗತಿಪರ ಆಧ್ಯಾತ್ಮಿಕ ಸೂಕ್ಷ್ಮ ಹಂತಗಳನ್ನು ಅರ್ಥಮಾಡಿಕೊಳ್ಳುತ್ತಾ ಹೋದರೆ, ಆತ್ಮ ಸಾಕ್ಷಾತ್ಕಾರ ತೆರೆದುಕೊಳ್ಳುತ್ತದೆ. ಆತ್ಮ ಸಾಕ್ಷಾತ್ಕಾರದ ಮೊದಲ ಹಂತ – ತನ್ನನ್ನು ತಾನೇ ಆತ್ಮವೆಂದು ಅನುಭವಿಸುವುದು. ಇದು ಗಣಿತದ ಪ್ರಾಥಮಿಕ ಹಂತದ ಹಾಗೆ. ಸಚ್ಚಿದಾನಂದ ಅನುಭವವನ್ನು ಮದ್ಯಮ ಹಂತದಲ್ಲಿ ಬೀಜಗಣಿತ ಜಾಮಿತಿಗಳನ್ನು ಕಲಿತ ಹಾಗೆ. ಪರಿಪೂರ್ಣ ಪರಶಿವ ಸಾಕ್ಷಾತ್ಕಾರವನ್ನು ಅರಿಯುವುದು ಅತ್ಯುನ್ನತ ಹಂತದ ಗಣಿತದ ಹಾಗೆ.

ನಾನುಯಾರು?

ಪರಮ ಗುರು ಯೋಗ ಸ್ವಾಮಿಗಳು ತಮ್ಮ ಪ್ರಕಟಿತ ಪತ್ರಗಳಲ್ಲಿ ನಮ್ಮನ್ನು ನಾವೇ ಪ್ರತ್ಯೇಕ ಆತ್ಮ ಅಥವಾ ಜೀವ ಎಂದು ಅನುಭವಿಸುವ ಭಾವನೆಯನ್ನು ಹೀಗೆ ಪ್ರಸ್ತುತಪಡಿಸುತ್ತಾರೆ.  “ನೀನು ದೇಹವಲ್ಲ, ನೀನು ಮನಸ್ಸು ಅಲ್ಲ, ಬುದ್ಧಿಯೂ ಅಲ್ಲ, ಸಂಕಲ್ಪವೂ ಅಲ್ಲ. ನೀನು ಆತ್ಮ. ಆತ್ಮ ಶಾಶ್ವತ. ಮಹಾತ್ಮರು ತಮ್ಮ ಅನುಭವದಿಂದ ತಲುಪಿದ ನಿರ್ಣಯ ಇದು. ಈ ಸತ್ಯ ನಿಮ್ಮ ಮನಸ್ಸಿನಲ್ಲಿ ಗಾಢವಾಗಿ ಉಳಿಯಲಿ. ಆದರೆ ನೀವು ಗಮನಿಸಬೇಕಾದ ಒಂದು ವಿಷಯವಿದೆ. ಧರ್ಮ ಮಾರ್ಗದಿಂದ ಎಂದಿಗೂ ವಿಮುಖರಾಗಬೇಡಿ. ಪ್ರತಿ ಜೀವಜಂತುವನ್ನು ಪರಮಾತ್ಮನ ಸನ್ನಿಧಿಯೆಂದು ಗೌರವಿಸುವ ಅಭ್ಯಾಸವಿರಲಿ. ಆ ಭಗವಂತ ಒಳಗೆ ಹೊರಗೆ ಎರಡೂ ಕಡೆ ಇದ್ದಾನೆ. ನಾನು ಉಳಿಯುತ್ತೇನೆ, ‘ನಾನೇ ಅವನು.’ ”

ದೇಹ ಮನಸ್ಸು ಬುದ್ಧಿ ಸಂಕಲ್ಪಗಳಿಂದ ಬೇರೆಯಾಗಿ ನಮ್ಮನ್ನು ಕಂಡುಕೊಳ್ಳಲು, ಅವೆಲ್ಲವನ್ನು ಮೀರಿದ ಬೇರೇನನ್ನಾದರೂ ಗುರುತಿಸಿಕೊಳ್ಳುವ ಅವಶ್ಯಕತೆ ಇದೆ. ಆ ಬೇರೇನೋ ಸಾಕ್ಷಿಯಾಗಿದೆ. ಸಂಸ್ಕೃತದಲ್ಲಿ ಸಾಕ್ಷಿ ಎಂದರೆ ದೇಹ, ಮನಸ್ಸು ಮತ್ತು ಅನುಭವದ ಎಲ್ಲಾ ಸ್ಥಿತಿಗಳಿಗೆ ಸಾಕ್ಷಿಯಾಗುವ ಬದಲಾವಣೆಯಿಲ್ಲದ, ಸ್ವಯಂ-ಪ್ರಕಾಶಮಾನವಾದ ಅರಿವು.

ಸ್ವಾಮಿ ಹರ್ಷಾನಂದರು ತಮ್ಮ ಕನ್ಸೈಸ್ ಎನ್ಸೈಕ್ಲೋಪೀಡಿಯಾ ಆಫ್ ಹಿಂದೂಯಿಸಂ ಎಂಬ ಪುಸ್ತಕದಲ್ಲಿ ಸಾಕ್ಷಿಯನ್ನು ಹೀಗೆ ವಿವರಿಸುತ್ತಾರೆ: “ವೇದಾಂತದಲ್ಲಿ ಜೀವಾತ್ಮನನ್ನು ಸಾಕ್ಷಿ ಅಥವಾ ಸಾಕ್ಷಿ ಚೈತನ್ಯ ಎನ್ನುತ್ತಾರೆ. ಏಕೆಂದರೆ ಜಾಗ್ರತ (ಎಚ್ಚರ), ಸ್ವಪ್ನ (ಕನಸು) ಹಾಗೂ ಸುಶುಪ್ತಿ (ಗಾಢ ನಿದ್ರೆ) ಈ ಎಲ್ಲಾ ಮೂರು ಪ್ರಜ್ಞೆಯ ಅವಸ್ಥೆಗಳನ್ನು ಗಮನಿಸುತ್ತಿರುವ ಸಾಕ್ಷಿ ಅವನು. 

ನನ್ನ ಗುರು ಸಾಕ್ಷಿಯನ್ನು ಮನಸ್ಸು ಮತ್ತು ಅದರ ಅದರ ಚಟುವಟಿಕೆಗಳಿಂದ ಹೊರತಾಗಿರುವ ಪ್ರಜ್ಞೆ ಎಂದು ವಿವರಿಸುತ್ತಾರೆ. “ಅದರಿಂದಲೇ ನೀವು ನಿಮಗೆ ಬೇಕಾದ ಕಡೆ, ನಿಮಗೆ ಬೇಕಾದಾಗ, ಬೇಕಾದಷ್ಟು ಕಾಲ-ಏಕಾಗ್ರತೆಯ ಸಾಧನೆಯನ್ನು,  ನಿಮ್ಮ ಪ್ರಜ್ಞೆಯನ್ನು ಹಿಡಿದಿಡುವ ಶಕ್ತಿ ಹಾಗೂ ಆನಂದಾನುಭವದ ಶುದ್ಧ ಪ್ರಜ್ಞೆಯ ತನ್ನನ್ನು ತಾನೇ ಗಮನಿಸುವ ಅರಿವು, ಹೊರಗಿನ ಎಲ್ಲಾ ಸಂದರ್ಭಗಳನ್ನು ಹೊರೆತುಪಡಿಸಿದ್ದ ಕೇವಲ ಪ್ರಜ್ಞೆಯ ಅರಿವು ಇದನ್ನು ಅನುಭವಿಸುವ ಪರಿಜಾತಿಗಳನ್ನು ಸಿದ್ಧಿಸಿಕೊಳ್ಳಲು ಪ್ರಯತ್ನಿಸುತ್ತೀರಿ.” ಹೀಗೆ ಆನಂದವನ್ನು ಪಡೆಯುವುದು ಮತ್ತು ಉಳಿಸಿಕೊಳ್ಳುವುದು ಒಂದು ಸರಳ ಅಭ್ಯಾಸ. ನಿಮ್ಮ ಆಲೋಚನಾ ಪ್ರಕ್ರಿಯೆಗಳಿಂದ ಪ್ರಜ್ಞೆಯನ್ನು ಹೊರ ತೆಗೆಯಿರಿ. ನಿಮ್ಮ ಭಾವನೆಯ ಪ್ರಕ್ರಿಯೆಗಳಿಂದ ಅರಿವನ್ನು ಹೊರತೆಗೆಯಿರಿ. ನಿಮ್ಮೆಲ್ಲ ದೈಹಿಕ ಪ್ರಕ್ರಿಯೆಗಳಿಂದ ಪ್ರಜ್ಞೆಯನ್ನು ಹೊರ ತೆಗೆಯಿರಿ. ಹಾಗೂ ಪ್ರಜ್ಞೆಯ ಅರಿವಿನ ಬಗ್ಗೆ ಮಾತ್ರ ಅರಿವಿರುವ ಆ ಅತ್ಯುನ್ನತ ಪರಾಕಾಷ್ಠೆಯನ್ನು ತಲುಪುವಿರಿ.”

ಈ ಅಭ್ಯಾಸವು ಆಳವಾದಂತೆಲ್ಲ ಪ್ರಜ್ಞೆ ಹೆಚ್ಚು ಹೆಚ್ಚು ಪರಿಷ್ಕರಿಸಲ್ಪಡುತ್ತದೆ. ಕಾಲಕ್ರಮೇಣ ಸಾಧಕ ಪ್ರಾಥಮಿಕ ಹಂತದ ತಾನೇ ಆತ್ಮವೆಂಬ ಭಾವನೆಯಿಂದ, ಸರ್ವಾಂತರ್ಯಾಮಿ ಸಚ್ಚಿದಾನಂದ ದೈವಪ್ರಜ್ಞೆಯ ಆಳವಾದ ಅನುಭದ ಕಡೆಗೆ ಚಲಿಸುತ್ತಾನೆ. ಯಾವ ವ್ಯಕ್ತಿ ಸಚ್ಚಿದಾನಂದವನ್ನು ಅನುಭವಿಸುತ್ತಾನೋ ಅಂತಹವನಿಗೆ ಎಲ್ಲ ಜೀವಿಗಳ ಬಗ್ಗೆ ಸಾರ್ವತ್ರಿಕ ಪ್ರೀತಿ ಇರುತ್ತದೆ. ಅಂತಹವರಿಗೆ ಜೀವನ ಸಂತೋಷದಾಯಕವಾದ, ಆನಂದದಾಯಕವಾದ ಅನುಭವವಾಗಿದೆ. ಘಟನೆಗಳು ಸರಿಯಾದ ಕಾಲಕ್ಕೆ, ಸರಿಯಾಗಿ ಘಟಿಸುವ ಅನುಭವವಾಗುತ್ತದೆ. ಅವರಿಗೆ ಪ್ರಪಂಚದಲ್ಲಿ ನಡೆಯುವುದೆಲ್ಲವೂ ಇರಬೇಕಾದ ಹಾಗೆಯೇ ಇದೆ, ಮಾನವ ಜನಾಂಗ ತಾವೇ ಸೃಷ್ಟಿ ಮಾಡಿಕೊಂಡ ಕರ್ಮದ ಮೂಲಕ ನಡೆಯುತ್ತಿದೆ ಎಂಬ ಭಾವನೆ ಇರುತ್ತದೆ. ಇದೆಲ್ಲ ನಡೆದಂತೆ ಸಾಕ್ಷಾತ್ಕಾರದ ಮೂರನೇ ಹಂತ – ಪರಿಪೂರ್ಣ ಪರಶಿವನ ಹಂತವು ಮಾತ್ರ ಭವಿಷ್ಯದ ಜೀವನದಲ್ಲಿ ಹೆಚ್ಚಿನವರಿಗೆ ಇನ್ನೂ ಅನುಭವಕ್ಕೆ ಬರಬೇಕಿದೆ.

Leave a Comment

Your name, email and comment may be published in Hinduism Today's "Letters" page in print and online. Required fields are marked *

This site uses Akismet to reduce spam. Learn how your comment data is processed.

Scroll to Top