ಮನೆಯಲ್ಲಿ ಮಾಡುವ ಪೂಜೆ ಕುಟುಂಬಕ್ಕೆ ರಕ್ಷಣೆ, ಉತ್ತಮ ಬದುಕು ಮತ್ತು ಆಧ್ಯಾತ್ಮಿಕ ಹಂಚಿಕೆಯನ್ನು ಒದಗಿಸಿ, ಭಗವಂತನ ಸಂಪರ್ಕವನ್ನು ಉಂಟುಮಾಡುತ್ತದೆ.   

ಸದ್ಗುರುಬೋಧಿನಾಥವೇಲನ್ಸ್ವಾಮಿ

ಪ್ರಪಂಚದ ಹೆಚ್ಚಿನ ಧರ್ಮಗಳಲ್ಲಿ ದೀಕ್ಷೆ ಪಡೆದ ಪುರೋಹಿತ ಅಥವಾ ಪಾದ್ರಿ ದೈವಾರಾಧನೆ ನಡೆಸುವ ಸ್ಥಳಕ್ಕೆ  ಸಾಮಾನ್ಯ ಜನರು ಹಾಜರಾಗುವ ಪರಿಪಾಠವನ್ನು ಕಾಣಬಹುದು. ಪಾಶ್ಚಾತ್ಯ (ಅಬ್ರಹಾಮಿಕ್) ಧರ್ಮಗಳಲ್ಲಿ, ಇದು ಶುಕ್ರವಾರ, ಶನಿವಾರ ಅಥವಾ ಭಾನುವಾರದಂದು ನಡೆಯುತ್ತದೆ. ಅನುಯಾಯಿಗಳು ಭಗವಂತನನ್ನು ಪೂಜಿಸಲು ವಾರದ ಯಾವುದೇ ಒಂದು ದಿನವನ್ನು ಪೌರಸ್ತ್ಯ ಧರ್ಮಗಳು ಸಾರ್ವತ್ರಿಕವಾಗಿ ಅಂಗೀಕರಿಸಿಲ್ಲ. 

ಹಿಂದೂ ಧರ್ಮದಲ್ಲಿ, ಅರ್ಚಕರಿಗೆ ದೀಕ್ಷೆಯನ್ನು ನೀಡಿ ಪೂಜೆಯನ್ನು ಮಾಡಲು ನೇಮಿಸಲಾಗುತ್ತದೆ. ಅವರು ಪ್ರತಿದಿನವೂ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳಿಗೆ ಅನುಗುಣವಾಗಿ ಪೂಜೆ ಮಾಡುತ್ತಾರೆ, ಕೆಲವೊಮ್ಮೆ ದಿನಕ್ಕೆ ಹಲವಾರು ಬಾರಿಯೂ ಇದನ್ನು ಮಾಡಲಾಗುತ್ತದೆ. ನಮ್ಮ ಹಿಂದೂ ಕೋಶದಲ್ಲಿ ವಿವರಿಸಿರುವಂತೆ, “ದೇವಾಲಯಗಳಲ್ಲಿ ನೀರು, ದೀಪ ಮತ್ತು ಪುಷ್ಪಗಳ ಮೂಲಕ ಮಾಡಲಾಗುವ ಮೂರ್ತಿಪೂಜೆ ಆಗಮಶಾಸ್ತ್ರ ಪವಿತ್ರ ಹೋಮಾಗ್ನಿಯ ಮೂಲಕ ಅರ್ಪಣೆ ಸಲ್ಲಿಸುವುದರ ವೈದಿಕ ಯಜ್ಞದ ಪ್ರತಿರೂಪವಾಗಿದೆ”. ಆರಾಧನೆ ಮತ್ತು ಸಂಸ್ಕಾರಗಳೆಂಬ ಈ ಎರಡು ಮಹಾಧಾರೆಗಳು ಹಿಂದೂ ಧರ್ಮದ ವೇದಗಳು ಮತ್ತು ಆಗಮಗಳ ಸಾರಸಂಗ್ರಹಗಳಾಗಿವೆ. 

ದೇವಾಲಯಗಳಲ್ಲಿ ಮಾಡಲಾಗುವ ಸಾಮಾನ್ಯವಾಗಿ ಸಂಕೀರ್ಣವಾದ ಪೂಜೆಯನ್ನು ಪರಾರ್ಥ ಪೂಜೆ ಎಂದು  ಕರೆಯಲಾಗುತ್ತದೆ. ಇತರರ ಪ್ರಯೋಜನಕ್ಕಾಗಿ, ಆಲಯಕ್ಕೆ ಆಗಮಿಸಿರುವವರಿಗಾಗಿ ಮಾತ್ರವಲ್ಲ, ವಿಶಾಲ ಅರ್ಥದಲ್ಲಿ ಪ್ರಪಂಚಕ್ಕಾಗಿ, ಮಾನವೀಯತೆಗಾಗಿ ಮಾಡಲಾಗುವ ಪೂಜೆ ಎಂಬುದು ಇದರ ಅರ್ಥ. ಹಿಂದೂ ಧರ್ಮದಲ್ಲಿ ಈ ದೇವಾಲಯದ ಪೂಜೆಗಳಲ್ಲಿ ಭಕ್ತರು ಪಾಲ್ಗೊಳ್ಳಲು ಸೋಮವಾರ ಮತ್ತು ಶುಕ್ರವಾರಗಳನ್ನು ಎರಡು ಜನಪ್ರಿಯ ದಿನಗಳೆಂದು ಪರಿಗಣಿಸಲಾಗಿದೆ. ಆದರೆ ನಗರಗಳಲ್ಲಿ ಅನೇಕ ಹಿಂದೂಗಳು ವಾರದ ರಜೆ ಇರುವುದರಿಂದಾಗಿ, ಹೆಚ್ಚು ಅನುಕೂಲಕರವಾದ ಭಾನುವಾರದಂದು ದೇವಸ್ಥಾನಕ್ಕೆ ಬರುತ್ತಾರೆ.

ಹಿಂದೂ ಧರ್ಮದಲ್ಲಿನ ವಿಭಿನ್ನವಾದ ಸಂಗತಿಯೆಂದರೆ, ಗಮನಾರ್ಹವಾಗಿ ಪೂಜೆಯನ್ನು ಪ್ರತಿನಿತ್ಯವೂ ಮನೆಯಲ್ಲಿಯೂ ನಡೆಸಲಾಗುತ್ತದೆ. ಆತ್ಮಾರ್ಥ ಪೂಜೆ ಎಂದು ಕರೆಯಲಾಗುವ, ಅಂದರೆ ತನಗಾಗಿ ಮಾಡುವ ಈ ಪೂಜೆಯನ್ನು ಸಾಮಾನ್ಯವಾಗಿ ಗೃಹಸ್ಥ ಮಾಡಿದರೆ, ಕೆಲವೊಮ್ಮೆ ಅವನ ಹಿರಿಯ ಮಗ ಈ ಪೂಜೆಯನ್ನು ಮಾಡುತ್ತಾನೆ.  ಪುರೋಹಿತರು ಕೂಡ ತಮ್ಮ ಮನೆಗಳಲ್ಲಿ ಪ್ರತಿನಿತ್ಯ ಅತ್ಮಾರ್ಥ ಪೂಜೆಯನ್ನು ಮಾಡುತ್ತಾರೆ. “ಒಬ್ಬ ಅರ್ಹ ಪುರೋಹಿತ ಮಾತ್ರ ಆತ್ಮಾರ್ಥ ಪೂಜೆ ಮತ್ತು ಪರಾರ್ಥ ಪೂಜೆ ಎರಡನ್ನೂ ಮಾಡಬಹುದು” ಎಂದು ಕಾರಣ ಆಗಮವು ಹೇಳುತ್ತದೆ. “ದೈವಿಕ ರಕ್ಷಣೆಗಾಗಿ ಯಾರಾದರೂ ಮನೆಯಲ್ಲಿಯೇ ಆತ್ಮಲಿಂಗವನ್ನು ಪೂಜಿಸುವುದನ್ನು ಆತ್ಮಾರ್ಥ ಪೂಜೆ ಎಂದು ಕರೆಯಲಾಗುತ್ತದೆ.” ಬೇರೆ ರೀತಿಯಲ್ಲಿ ಹೇಳುವುದಾದರೆ, ಹಿಂದೂ ಧರ್ಮದಲ್ಲಿ ಕುಟುಂಬದ ಪುರುಷ ತನ್ನ ಸ್ವಂತ ಮನೆಯಲ್ಲಿ ಸಾಮಾನ್ಯ ಪುರೋಹಿತನಾಗಿ ಕಾರ್ಯನಿರ್ವಹಿಸುವುದು ಸಾಂಪ್ರದಾಯಿಕವಾಗಿದೆ.  

ಹಿಮಾಲಯನ್ ಅಕಾಡೆಮಿಯ ಪ್ರಕಟಣೆಯಾದ ’ಲಿವಿಂಗ್ ವಿತ್ ಶಿವ’ ಎಂಬ ಪುಸ್ತಕದ ಮುನ್ನುಡಿಯಲ್ಲಿ ಮನೆಯಲ್ಲಿ ಮಾಡುವ ಪೂಜೆಯ ಬಗ್ಗೆ ಒಂದು ಅತ್ಯುತ್ತಮ ಹೇಳಿಕೆ ಇದೆ. “ನಮ್ಮ ಹಳ್ಳಿಯ ಪ್ರತಿಯೊಂದು ಹಿಂದೂ ಕುಟುಂಬದಲ್ಲಿ  ದೇವರಮನೆ ಇರುತ್ತಿತ್ತು. ಅಲ್ಲಿ ಕುಟುಂಬದ ಸದಸ್ಯರು ತಮ್ಮ ದೇವರನ್ನು ಪೂಜಿಸುತ್ತಿದ್ದರು. ಬಡವರೂ ಕೂಡ ದೇವರಮನೆಗಾಗಿ ಸ್ಥಳವನ್ನು ಮೀಸಲಿಡುತ್ತಿದ್ದರು. ಅನುಷ್ಠಾನಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ವರೂಪದ ಆವರ್ತಕ ಆಚರಣೆಗಳಾಗಿವೆ, ಅವು ಬಾಹ್ಯ ಭಾವನೆಗಳ ಬದಲಾಗಿ ಆಂತರಿಕ ಭಾವನೆಗಳನ್ನು ತಿಳಿಸುತ್ತವೆ. ಇಂಥ ಪೂಜೆಗಳು ಮತ್ತು ಅನುಷ್ಠಾನಗಳು ಒಬ್ಬ ವ್ಯಕ್ತಿಯೊಬ್ಬ ತಡೆದು ನಿಂತು ಒಳಮುಖವಾಗಿ ನೋಡಲು ಮತ್ತು ಕೇವಲ ಭೌತಿಕತೆ ಮತ್ತು ದೈನಂದಿನ ಜೀವನದ ಬಿಡುವಿಲ್ಲದ ದುಡಿಮೆಗಿಂತ ಹೆಚ್ಚು ಅರ್ಥಪೂರ್ಣವಾದ, ಹೆಚ್ಚು ಆಳವಾದ ಬೇರೊಂದು ವಿಷಯದ ಬಗ್ಗೆ ಕೇಂದ್ರೀಕರಿಸಲು ಅವಕಾಶವನ್ನು ನೀಡುತ್ತದೆ. ದೇವರ ಪೂಜೆ ಮತ್ತು ಉತ್ಸವಗಳು, ಉಪವಾಸ ಮತ್ತು ಹಬ್ಬ ಹರಿದಿನಗಳ ಆಚರಣೆಗಳು ಜನರು ದೈನಂದಿನ ಜೀವನವನ್ನು ಮೀರಿದ ದೊಡ್ಡ ಯೋಜನೆಗಳನ್ನು ನೋಡಲು ಅನುವು ಮಾಡಿಕೊಡುತ್ತದೆ. ನನಗೆ ಪರಿಚಯವಿರುವ ಅತ್ಯುತ್ತಮ ಮನೆಗಳಲ್ಲಿ, ತಂದೆ ದೈನಂದಿನ ವಿಧಿಗಳನ್ನು ಆಚರಿಸಿದರೆ, ಕುಟುಂಬದವರೆಲ್ಲರೂ ಸೇರಿಕೊಂಡು ಅದಕ್ಕೆ ಒತ್ತಾಸೆ ನೀಡುತ್ತಾರೆ. ಇದು ‘ಒಟ್ಟಿಗೆ ಪ್ರಾರ್ಥಿಸುವ ಕುಟುಂಬವು ಒಟ್ಟಿಗೆ ಇರುತ್ತದೆ’ ಎನ್ನುವ ಹಳೆಯ ಗಾದೆಯಂತೆ ಇದೆ ಎಂದು ನಾನು ಭಾವಿಸುತ್ತೇನೆ.  ಮುಂಬಯಿ ಅಥವಾ ಲಾಸ್ ಏಂಜಲೀಸ್‌ನಂತಹ ಅಂತರರಾಷ್ಟೀಯ ನಗರಗಳಲ್ಲೂ ಬಿಡುವೇ ಇಲ್ಲದ ಬದುಕಿನ ಓಟದಲ್ಲಿಯೂ, ಪ್ರತಿದಿನ ಕನಿಷ್ಠ ಒಂದು ಕಿರು ಪೂಜೆಯನ್ನಾದರೂ ಮಾಡುವ ಅನೇಕ ಹಿಂದೂಗಳಿದ್ದಾರೆ. ಪ್ರತಿದಿನ ಮಾಡುವ ಕೆಲವೇ ನಿಮಿಷಗಳ ಕಿರು ಪೂಜೆಯೂ ತಮಗೆ ಏಕಾಗ್ರತೆಯನ್ನು ಉಂಟುಮಾಡುತ್ತದೆ, ಆಧ್ಯಾತ್ಮಿಕ ಉನ್ನತಿಯನ್ನು ಮೂಡಿಸುತ್ತದೆ, ಮನಸ್ಸನ್ನು ಸಮಸ್ಥಿತಿಯಲ್ಲಿ ಇರಿಸಿಕೊಳ್ಳುವಂತೆ ಮಾಡುತ್ತದೆ, ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳುತ್ತಾರೆ.  

ಈ ಪೂಜೆ ನಡೆಯುವ ಕೋಣೆಯನ್ನು ದೇವರಮನೆ ಎಂದು ಕರೆಯಲಾಗುತ್ತದೆ. ಇದು ಮನೆಯ ಪ್ರತ್ಯೇಕವಾದ ಕೋಣೆಯಾಗಿದ್ದರೆ ಬಹಳ ಒಳ್ಳೆಯದು. ಅದು ಸಾಧ್ಯವಾಗದಿದ್ದಾಗ, ಮನೆಯ ಇತರ ಪ್ರದೇಶಗಳಿಗಿಂತ ಜನರ ಓಡಾಟ ಕಡಿಮೆ ಇರುವ ಕೋಣೆಯ ಭಾಗವನ್ನು ಅದಕ್ಕಾಗಿ ಬಳಸಬಹುದು. ನನ್ನ ಗುರುಗಳಾದ ಶಿವಾಯ ಸುಬ್ರಮುನಿಯಸ್ವಾಮಿ ಈ ಆದರ್ಶ ಪೂಜಾಗೃಹ ಹೇಗಿರಬೇಕೆಂದು ತಿಳಿಸಿದ್ದಾರೆ: “ಪ್ರತಿಯೊಬ್ಬ ಶೈವನ ಮನೆಯಲ್ಲಿಯೂ ಒಂದು ಪೂಜಾಗೃಹ ಇರುತ್ತದೆ. ಇದು ಮನೆಯ ಅತ್ಯಂತ ಸುಂದರವಾದ ಕೋಣೆ. ದೇವಾಲಯದ ವಿಸ್ತರಣೆಯಾದ ಈ ದೇವರಮನೆ ದೇವರ ಮತ್ತು ದೇವತೆಗಳ ವಾಸಸ್ಥಾನವಾಗಿದೆ ಮತ್ತು ದೈನಂದಿನ ಪೂಜೆಯ ಮತ್ತು ಧ್ಯಾನದ ಪವಿತ್ರ ಆಶ್ರಯತಾಣವಾಗಿದೆ. ಎಲ್ಲ ಹಿಂದೂಗಳಿಗೂ ಇರುವ ರಕ್ಷಣಾ ದೇವತೆಗಳು ಅಂತರ್ಲೋಕ ನಿವಾಸಿಗಳಾಗಿ ಮಾರ್ಗದರ್ಶನ ನೀಡುತ್ತ, ಸಂರಕ್ಷಣೆ ಮಾಡುತ್ತಾ ಅವರನ್ನು ಕಾಪಾಡುತ್ತಾರೆ. 

“ದೇವಾಲಯದಲ್ಲಿರುವ ದೇವರು ಭಕ್ತರೊಂದಿಗೆ ವಾಸಿಸಲು ತನ್ನ ದೇವ ರಾಯಭಾರಿಗಳನ್ನು ಭಕ್ತರ ಮನೆಗಳಿಗೆ ಕಳುಹಿಸುತ್ತಾರೆ. ಕಣ್ಣುಗಳಿಗೆ ಕಾಣಿಸದ ಇಂಥ ಚಿರಸ್ಥಾಯಿ ಅತಿಥಿಗಳ ತಾಣವೇ ದೇವರಮನೆ – ಇಡೀ ಕುಟುಂಬದವರು ಪ್ರವೇಶಿಸಿ, ನೆಲದ ಮೇಲೆ ಕುಳಿತು, ತಲೆಮಾರುಗಳ ಪರ್ಯಂತ ಕುಟುಂಬದವರನ್ನು ಕಾಪಾಡಲೆಂದೇ ಮೀಸಲಾಗಿರುವ ಈ ಸುಸಂಸ್ಕೃತ ಜೀವಿಗಳೊಡನೆ ಆಂತರಿಕವಾಗಿ ಸಂಪರ್ಕ ಹೊಂದಬಹುದಾದ ಕೊಠಡಿ. “ಮಲಗುವ ಮನೆಯಲ್ಲೋ , ಮಾಡ ಅಥವಾ ಕಪಾಟಿನಲ್ಲೋ ನಾಮಮಾತ್ರಕ್ಕೆ ದೇವರಮನೆಯನ್ನು ಮಾಡಿಕೊಂಡರೆ, ಈ ದೈವಿಕ ಶಕ್ತಿಗಳನ್ನು ಆಹ್ವಾನಿಸಲು ಸಾಧ್ಯವಿಲ್ಲ. ಗೌರವಾನ್ವಿತ ಅತಿಥಿಗಳನ್ನು ಯಾರೂ ಒಂದು ಗೂಡಿನಲ್ಲಿ ಇರಿಸಿ, ಅಥವಾ ಅಡುಗೆಯ ಮನೆಯಲ್ಲಿ ಮಲಗುವಂತೆ ಮಾಡಿ, ಆ ಅತಿಥಿ ತಮಗೆ ಉತ್ತಮ ಸ್ವಾಗತ ದೊರೆಯಿತೆಂದು, ಗೌರವ ಹಾಗೂ ಪ್ರೀತಿ ತೋರಲಾಯಿತೆಂದು ಭಾವಿಸಲಿ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಗುರುದೇವರು ತಿಳಿಸುತ್ತಾರೆ. ಎಲ್ಲ ಹಿಂದೂಗಳಿಗೂ  ಬಾಲ್ಯದಿಂದಲೂ ಅತಿಥಿ ದೇವರ ಸಮಾನ ಎಂದು ಕಲಿಸಲಾಗುತ್ತದೆ. ಅವರು ಭೇಟಿ ನೀಡಲು ಬಂದ ಅತಿಥಿಗಳನ್ನು ರಾಜೋಚಿತ ಸತ್ಕಾರ ನೀಡುತ್ತಾರೆ. ಹಿಂದೂಗಳು ತಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲಸಲೆಂದು ಬಂದ ದೇವ ದೇವತೆಯರನ್ನು ಭಗವಂತನೆಂದೇ ಪರಿಗಣಿಸುತ್ತಾರೆ. . . . ದೇವರಮನೆಯನ್ನು ಬಹಳ ಎಚ್ಚರಿಕೆಯಿಂದ ಶುಚಿಗೊಳಿಸುತ್ತಾರೆ ಮತ್ತು ಪೂಜೆ, ಪ್ರಾರ್ಥನೆ, ಧರ್ಮಗ್ರಂಥಗಳ ಅಧ್ಯಯನ ಮತ್ತು ಧ್ಯಾನವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿಯೂ ಆ ಕೊಠಡಿಯನ್ನು ಬಳಸುವುದಿಲ್ಲ. . . . ಇಂಥ ಪವಿತ್ರ ವಿಧಿಗಳ ಮೂಲಕ ಹಾಗೂ ದೈವೀ ಶಕ್ತಿಗಳನ್ನು ಆಹ್ವಾನಿಸುವುದರ ಮೂಲಕ, ಪ್ರತಿ ಕುಟುಂಬವೂ ತಮ್ಮ ಮನೆಯನ್ನು ಪ್ರಾಪಂಚಿಕ ಕಾಳಜಿ ಮತ್ತು ಚಿಂತೆಗಳಿಂದ ದೂರವಾದ ಪವಿತ್ರ ಆಶ್ರಯತಾಣವನ್ನಾಗಿ ಮಾಡುತ್ತದೆ. ದೀಪವನ್ನು ಬೆಳಗಿಸುವ ಮತ್ತು ಭಗವಂತನ ಪವಿತ್ರ ಪಾದಗಳಲ್ಲಿ ಹೂವನ್ನು ಅರ್ಪಿಸುವ ಸರಳವಾದ ಪೂಜೆಯೇ ಆಗಿರಬಹುದು; ಅಥವಾ ಅನೇಕ ಸ್ತೋತ್ರಗಳು ಮತ್ತು ನಿವೇದನಗಳೊಂದಿಗೆ ಕೂಡಿದ ವಿಧ್ಯುಕ್ತವಾದ  ಸುದೀರ್ಘ ಪೂಜೆಯೇ ಆಗಿರಬಹುದು. ಯಾವುದೇ ಪೂಜೆಯ ಅತ್ಯವಶ್ಯಕವಾದ ಭಾಗವೆಂದರೆ ದೇವರಲ್ಲಿನ ಭಕ್ತಿ.

ನನ್ನ ಗುರುಗಳು ಮನೆಯ ದೇವರಮನೆ ದೇವಾಲಯದ ವಿಸ್ತರಣೆಯಾಗಿದೆ ಎಂದು ಆಗಾಗ್ಗೆ ಒತ್ತಿ ಹೇಳುತ್ತಾರೆ. ಕುಟುಂಬದವರು ಕ್ರಮವಾಗಿ, ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಹೋದರೆ ಹೀಗೆ ಆಗಬಹುದು. ಈ ಕ್ರಮಬದ್ಧತೆ ದೇವಾಲಯ ಮತ್ತು ಮನೆಯ ದೇವರಮನೆಗಳನ್ನು ಆಂತರಿಕ ಪ್ರಪಂಚಗಳಲ್ಲಿ ಒಟ್ಟಿಗೆ ಜೋಡಿಸುತ್ತದೆ. ಈ ಸಂಪರ್ಕವನ್ನು ಸಾಧಿಸಲು ನನ್ನ ಗುರುಗಳು ಒಂದು ನಿರ್ದಿಷ್ಟ ಅಭ್ಯಾಸವನ್ನು ತಿಳಿಸಿದ್ದಾರೆ.  ದೇವಸ್ಥಾನದಿಂದ ಹಿಂತಿರುಗಿದೊಡನೆ ನೀವು ಮೊದಲು ನಿಮ್ಮ ದೇವರಮನೆಯಲ್ಲಿ ಎಣ್ಣೆಯ ದೀಪವನ್ನು ಬೆಳಗಿಸಿ. ಇದರಿಂದ ದೇವಸ್ಥಾನದಲ್ಲಿನ ದೇವತೆಗಳು ನಿಮ್ಮ ವೈಯಕ್ತಿಕ ಆಶ್ರಯತಾಣಕ್ಕೆ ಆಗಮಿಸಿ, ಕುಟುಂಬದ ಸದಸ್ಯರನ್ನು ಆಶೀರ್ವದಿಸುತ್ತಾರೆ ಮತ್ತು ಮನೆಯ ಧಾರ್ಮಿಕ ಶಕ್ತಿ ಕ್ಷೇತ್ರವನ್ನು ಬಲಪಡಿಸುತ್ತಾರೆ. 

“ಎಲ್ಲಾ ಹಿಂದೂಗಳು ತಮ್ಮ ಮನೆಯಲ್ಲಿ ಪೂಜೆಯನ್ನು ಮಾಡಲು ಅರ್ಹರೇ?” ಎನ್ನುವ ಈ ಪ್ರಮುಖ ಪ್ರಶ್ನೆಗೆ   ಉತ್ತರ ನೀಡಬೇಕಾಗಿದೆ. ಕಂಚಿ ಪೀಠದ ಪೂಜ್ಯ ಸ್ವಾಮಿಗಳ ಕೆಳಗಿನ ಉಲ್ಲೇಖವನ್ನುನೋಡಿದರೆ, ಇದು ಪೂಜೆ ಎಂಥಹುದು ಎಂಬುದನ್ನು ಅವಲಂಬಿಸಿರುತ್ತದೆ. “ಪ್ರತಿ ಕುಟುಂಬವೂ ಭಗವಂತನನ್ನು ಪೂಜಿಸಬೇಕು. ಹಾಗೆ ಮಾಡಲು ಅನುಕೂಲಕರವೆಂದು ಭಾವಿಸುವವರು ಸೂಕ್ತ ದೀಕ್ಷೆಯನ್ನು ಪಡೆದ ನಂತರ ವಿಸ್ತೃತ ಪೂಜೆಗಳನ್ನು ನಡೆಸಬಹುದು. ಉಳಿದವರು ಹತ್ತು ನಿಮಿಷಗಳಿಗಿಂತ ಕಡಿಮೆ ಸಮಯದ ಸಂಕ್ಷಿಪ್ತ ಪೂಜೆಯನ್ನು ಮಾಡಬೇಕು. ಕಚೇರಿಗೆ ಹೋಗುವವರು ಕನಿಷ್ಠ ಈ ಸಂಕ್ಷಿಪ್ತ ಪೂಜೆಯನ್ನಾದರೂ ಮಾಡಬೇಕು. ಪ್ರತಿ ಮನೆಯಲ್ಲೂ ಪವಿತ್ರ ಗಂಟೆ ಮೊಳಗಬೇಕು” (ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮೀಜಿ, 1894-1994). ವಿಸ್ತೃತ ಪೂಜೆಗಳನ್ನು ಮಾಡಲು ದೀಕ್ಷೆಯ ಅಗತ್ಯವಿದೆ ಎಂದು ಶಂಕರಾಚಾರ್ಯರು ಸೂಚಿಸಿದ್ದಾರೆ. ಕೆಲವು ಸರಳ  ಪೂಜೆಗಳಿಗೆ, ದೀಕ್ಷೆ ಪಡೆಯುವುದು ಕಡ್ಡಾಯವಲ್ಲ. 

ಕವಾಯಿ ಮಠದಲ್ಲಿ ನಾವು ದೀಕ್ಷೆಯ ಅಗತ್ಯವಿಲ್ಲದೆ ವಿನಾಯಕನಿಗೆ ಮನೆಯಲ್ಲಿ ಮಾಡಬಹುದಾದ ಸರಳ  ಪೂಜಾವಿಧಿಯನ್ನು ಆರಂಭಿಸಿದ್ದೇವೆ. ಅದನ್ನು http://www.himalayanacademy.com/looklisten/chanting –  ಇಲ್ಲಿ ಡೌನ್‌ಲೋಡ್ ಮಾಡಬಹುದು. ಈ ಜಾಲತಾಣವು (ವೆಬ್‌ ಪೇಜ್) ಪೂಜೆಯನ್ನು ಕಲಿಯುವುದರ ಬಗ್ಗೆ ಈ ಕೆಳಕಂಡಂತೆ ವಿವರಣೆಯನ್ನು ಮತ್ತು ಸಲಹೆಗಳನ್ನು ನೀಡುತ್ತದೆ: “ಇಲ್ಲಿ ನೀಡಲಾದ ಸರಳ ಗಣೇಶ ಪೂಜೆಯ ಸ್ತೋತ್ರಪಠಣ ಹಿಂದೂ  ಧರ್ಮದ ಪ್ರಾಚೀನ ಧರ್ಮಗ್ರಂಥದ ಭಾಷೆಯಾದ ಸಂಸ್ಕೃತದಲ್ಲಿದೆ. ಉಚ್ಚಾರಣೆಯನ್ನು ಕರಗತ ಮಾಡಿಕೊಳ್ಳಲು ವೆಚ್ಚ ಮಾಡಿದ ಸಮಯ ವ್ಯರ್ಥವಾಗುವುದಿಲ್ಲ. ಶ್ಲೋಕಗಳನ್ನು ಸರಿಯಾಗಿ ಪಠಿಸುವುದನ್ನು ಕಲಿಯಲು ಪುರೋಹಿತರು, ಪಂಡಿತರು ಅಥವಾ ಸಂಸ್ಕೃತದಲ್ಲಿ ಪ್ರವೀಣರಾಗಿರುವ ವ್ಯಕ್ತಿಯಿಂದ ತರಬೇತಿಯನ್ನು ವೈಯಕ್ತಿಕವಾಗಿ ಪಡೆಯುವುದು ಒಳ್ಳೆಯದು. ಅಂತಹ ಶಿಕ್ಷಕರು ಸಾಮಾನ್ಯವಾಗಿ ವರ್ಣಮಾಲೆಯಿಂದ ಪಾಠವನ್ನು ಕಲಿಸುತ್ತಾರೆ.  ದೇವನಾಗರಿ ಲಿಪಿಯನ್ನು ಓದುವ ಮತ್ತು ಇಂಗ್ಲಿಷ್ ಮಾತನಾಡುವ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಲಿಪ್ಯಂತರಣದ ತರಬೇತಿಯನ್ನು ನೀಡುತ್ತಾರೆ. ಸಂಸ್ಕೃತ ಕಲಿಯುವುದು ಕಡ್ಡಾಯವಲ್ಲ, ಮತ್ತು ಶಿಕ್ಷಕರಿಲ್ಲದವರಿಗೆ ಮಂತ್ರಗಳನ್ನು ಸರಿಯಾಗಿ ಕಲಿಸಲು ಈ ಸಂಪೂರ್ಣ ಪೂಜೆಯ ಧ್ವನಿಮುದ್ರಣವನ್ನು ನಾವು ಒದಗಿಸಿದ್ದೇವೆ.   

ಅಂತಿಮವಾಗಿ, ಹಿಂದೂ ಧರ್ಮದಲ್ಲಿ ವಾರಕ್ಕೊಮ್ಮೆ ನಿಯಮಿತವಾಗಿ ದೇವಾಲಯಕ್ಕೆ ಹಾಜರಾಗುವುದು ಒಂದು ಪ್ರಮುಖ ಅಭ್ಯಾಸವಾಗಿದೆ ಆದರೆ ಅದೇ ಪೂರ್ಣ ಅಭ್ಯಾಸವಲ್ಲ. ಮನೆಯಲ್ಲಿ ದೇವರಮನೆಯನ್ನು ಹೊಂದಿರುವುದು,  ಗೃಹಸ್ಥ ಅಲ್ಲಿ ದೈನಂದಿನ ಆತ್ಮಾರ್ಥ ಪೂಜೆಯನ್ನು ನಡೆಸುವ ಇನ್ನೊಂದು ಭಾಗವೂ ಅಷ್ಟೇ ಮಹತ್ವದ್ದಾಗಿದೆ. ಕಾಲಕ್ರಮೇಣ ಈ ದೈನಂದಿನ ಪೂಜೆ ಮನೆಯೊಳಗೆ ಧಾರ್ಮಿಕ ಸ್ಪಂದನವನ್ನು ಕ್ರಮವಾಗಿ ಹೆಚ್ಚಿಸುತ್ತದೆ. ಇದು ಕುಟುಂಬದ ಎಲ್ಲಾ ಸದಸ್ಯರಿಗೆ ಹೆಚ್ಚು ಶಾಂತಿಯುತ, ಆರೋಗ್ಯಕರ ಮತ್ತು ಯಶಸ್ವಿ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.