ಸದ್ಗುರು ಬೋಧಿನಾಥ ವೇಲನ್‍ಸ್ವಾಮಿ

English |
Tamil |
Kannada |
Hindi |
Spanish |
Portuguese |
Marathi |

ಸಹಸ್ರಾರು ವರ್ಷಗಳಿಂದ, ಧಾರ್ಮಿಕ ತಾಯ್ತಂದೆಯರು ತಮ್ಮ ಮಕ್ಕಳಿಗೆ ಸಂಪ್ರದಾಯವನ್ನು ಹೇಳಿಕೊಡುತ್ತಾ ಬಂದಿದ್ದಾರೆ. ಇದೊಂದು ಅನುಕರಣೀಯವಾದ ಅಭ್ಯಾಸವಾಗಿ ನಡೆದುಬಂದಿದೆ. ಮಕ್ಕಳು ಕುಟುಂಬದ ಧರ್ಮಶ್ರದ್ಧೆಯನ್ನು ಅನುಸರಿಸಿ ನಡೆಯಬೇಕೆಂದು ತಾಯ್ತಂದೆಯರು ಬಯಸುವುದು ಸಾಮಾನ್ಯವಾಗಿದೆ. ಈಗ ಸಮಯ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಸಂಖ್ಯೆಯ ತಾಯ್ತಂದೆಯರು ತಾವು ಆಧ್ಯಾತ್ಮಿಕರೆಂದು ಕರೆದುಕೊಳ್ಳುತ್ತಾರೆ, ಆದರೆ ಅವರು ಯಾವುದೇ ಧಾರ್ಮಿಕ ಸಂಬಂಧವನ್ನೂ ಪಡೆದಿರುವುದಿಲ್ಲ. ಅನೇಕರು ಜಾತ್ಯತೀತ ಮಾನವತಾವಾದವನ್ನು ಅನುಸರಿಸುತ್ತಾರೆ. ಇತರರು ತಮ್ಮ ಮಕ್ಕಳ ಜಾತ್ಯತೀತ ಶಿಕ್ಷಣದ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ, ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಅಥವಾ ತರಗತಿಗಳಲ್ಲಿ ಭಾಗವಹಿಸುವುದನ್ನು ಇಚ್ಛಿಸುವುದಿಲ್ಲ, ಏಕೆಂದರೆ ಅವರಿಗೆ ಧರ್ಮದಲ್ಲಿ ಯಾವುದೇ ವೃತ್ತಿ ಮೌಲ್ಯವೂ ಕಂಡುಬರುವುದಿಲ್ಲ. ಕೆಲವರು ಧರ್ಮಕ್ಕೆ ತೀರಾ ವಿರುದ್ಧವಾಗಿದ್ದಾರೆ. ವಿಭಿನ್ನ ಧರ್ಮಗಳ ಸಂಗಾತಿಗಳ ವಿವಾಹ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಈಗ ಸರ್ವೇಸಾಮಾನ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಆಧ್ಯಾತ್ಮಿಕ ಮಾರ್ಗವನ್ನು ತಾವೇ ಕಂಡುಕೊಳ್ಳಬೇಕು ಎಂದು ವಾದ ಮಾಡುವ ಕೆಲವು ತಾಯ್ತಂದೆಯರು ಇತ್ತೀಚೆಗೆ ಮಕ್ಕಳು ತಮ್ಮ ಧಾರ್ಮಿಕ ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ಅಂಗೀಕರಿಸಬೇಕೆಂದು ಕೇಳುವ ನೈತಿಕ ಹಕ್ಕನ್ನು ಹೊಂದಿದ್ದೇವೆಯೇ ಎಂದು ಪ್ರಶ್ನಿಸುವುದನ್ನು ಕೇಳಿದ್ದೇನೆ.

ಕಾರ್ಯದಲ್ಲಿ ಅತ್ಯಂತ ನಿರತರಾಗಿರುವುದರಿಂದ ಮನೆಯಲ್ಲಿ ಮಕ್ಕಳಿಗೆ ಧರ್ಮವನ್ನು ಹೇಳಿಕೊಡಲು ಸಾಧ್ಯವಾಗದ, ಧರ್ಮದ ಬಗ್ಗೆ ಸಾಕಷ್ಟು ಗೊತ್ತಿಲ್ಲದ, ನಿಯಮಿತವಾಗಿ ಧಾರ್ಮಿಕ ಚಟುವಟಿಕೆಗಳಿಗೆ ಹಾಜರಾಗದ, ತಮ್ಮ ಧರ್ಮದ ಬಗ್ಗೆ ಅಭಿಮಾನ ಹೊಂದಿರದ ಮತ್ತು ತಮ್ಮ ಮಕ್ಕಳು ಅಂತರರಾಷ್ಟ್ರೀಯ ಶಾಲೆಯ ಪರಿಸರದಲ್ಲಿ ಚೆನ್ನಾಗಿ ಬೆರೆಯಬೇಕೆಂದು ಬಯಸುವ ಕೆಲವು ಪ್ರಾಯೋಗಿಕ ವಿವೇಚನಾಶೀಲರಿದ್ದಾರೆ.
ಮನೆಯಲ್ಲಿ ಧರ್ಮವನ್ನು ಕಲಿಸಲು ಯೋಜಿಸದ ಹಿಂದೂ ತಾಯ್ತಂದೆಯರು ಮುಂದಿನ ತಲೆಮಾರಿನವರು ಕುಟುಂಬ ಮತ್ತು ಸಮಾಜದ ಪರವಾಗಿ ಉತ್ತಮ ನಡವಳಿಕೆ ಮತ್ತು ಕರ್ತವ್ಯಗಳ ಮೂಲಭೂತ ಅಂಶಗಳನ್ನು ಹೇಗೆ ಕಲಿಯುತ್ತಾರೆ ಎಂಬುದರ ಬಗ್ಗೆ ಗಂಭೀರವಾದ ಚಿಂತನೆ ನಡೆಸಬೇಕಾಗಿದೆ. ಸಾಂಪ್ರದಾಯಿಕವಾಗಿ ಧರ್ಮಗಳು ಈ ಜ್ಞಾನವನ್ನು ಹರಡುತ್ತ ಬಂದಿವೆ. ನಡವಳಿಕೆ ಮತ್ತು ಕರ್ತವ್ಯದ ಬಗ್ಗೆ ಮಕ್ಕಳು ಸಕಾಲದಲ್ಲಿ ತಾವಾಗಿಯೇ ಹೇಗೆ ಕಂಡುಕೊಳ್ಳುತ್ತಾರೆ ಎಂಬ ಹೇಳಿಕೆಗಳನ್ನು ಇಂಟರ್ನೆಟ್ ನಲ್ಲಿ ಕಾಣಬಹುದು. ಆದರೆ ವೈಯಕ್ತಿಕವಾಗಿ ಸಾಕಷ್ಟು ಅನುಭವ ಪಡೆದಿರುವ, ಇದನ್ನು ಕಿಂಚಿತ್ತೂ ಅನುಮೋದಿಸದ ಶಿಕ್ಷಣತಜ್ಞರುಗಳ ಪರಿಚಯ ನನಗೆ ಇದೆ. ತಮ್ಮ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳು ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ನಿಯಮಿತವಾಗಿ ಮೋಸ ಮಾಡುತ್ತಾರೆ ಎಂಬ ಖೇದದ ಸಂಗತಿಯನ್ನು ಅವರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಆ ವಿದ್ಯಾರ್ಥಿಗಳ ಪಾಲಿಗೆ ಹೆಚ್ಚಿನ ಅಂಕಗಳನ್ನು ಪಡೆಯುವುದೇ ಪ್ರಮುಖ ವಿಷಯ, ಪ್ರಾಮಾಣಿಕತೆ ಎನ್ನುವ ಸದ್ಗುಣಕ್ಕೆ ಅವರು ಕುರುಡು ಕಾಸಿನ ಬೆಲೆಯನ್ನೂ ಕೊಡುವುದಿಲ್ಲ. 
ನೈತಿಕ ನಡವಳಿಕೆಯನ್ನು ಕಲಿಸಲು ಧಾರ್ಮಿಕವಲ್ಲದ ಇತರ ಮಾರ್ಗಗಳಿವೆಯೇ? ಇವೆ. “ಗುಣಾತ್ಮಕ ಮನಶ್ಶಾಸ್ತ್ರ” ಅದಕ್ಕೆ ಒಂದು ಉದಾಹರಣೆ. ಉತ್ತಮ ನಡವಳಿಕೆ ಮತ್ತು ಕರ್ತವ್ಯಗಳನ್ನು ಹೇಳಿಕೊಡುವ, ತನ್ನ ಸಮಗ್ರ ವಿಧಾನಕ್ಕಾಗಿ ಹೆಸರಾಗಿರುವ ಈ ಮನಶ್ಶಾಸ್ತ್ರ ಚಾರಿತ್ರ್ಯವನ್ನು ಬಲಪಡಿಸಿಕೊಳ್ಳಲು ಇಪ್ಪತ್ನಾಲ್ಕು ಅಂಶಗಳನ್ನು ಅಭಿವೃದ್ಧಿ ಪಡಿಸಿದೆ. “…ಇವು ಮಾನವನ ಒಳ್ಳೆಯತನವನ್ನು ಪ್ರದರ್ಶಿಸುವ ಮಾನಸಿಕ ಅಂಶಗಳು, ಮತ್ತು ಸರ್ವಾಂಗೀಣ ಜೀವನವನ್ನು ಅಭಿವೃದ್ಧಿಗೊಳಿಸುವ ಮಾರ್ಗಗಳಾಗಿ ಕಾರ್ಯನಿರ್ವಹಿಸುತ್ತವೆ” ಎನ್ನಲಾಗಿದೆ.
ಇದರ ಬಗೆಗೆ ಹೆಚ್ಚಿನ ಮಾಹಿತಿಗಾಗಿ www.viacharacter.org/character-strengths-via ನೋಡಿ.

ಧರ್ಮಗಳು ಮಕ್ಕಳಿಗೆ ಹೇಗೆ ಪಾಠ ಕಲಿಸುತ್ತಿವೆ ಎಂಬುದರ ಅಧ್ಯಯನ

ಧರ್ಮವನ್ನು ಹೇಗೆ ಕಲಿಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಬ್ರಿಡ್ಜೆಟ್ ರಿಟ್ಜ್ ಮತ್ತು ಮೈಕೆಲ್ ರೊಟೊಲೊ ಅವರ ಸಹಭಾಗಿತ್ವದಲ್ಲಿ ಪ್ರೊಫೆಸರ್ ಕ್ರಿಶ್ಚಿಯನ್ ಸ್ಮಿತ್ ಬರೆದ ಮತ್ತು 2019ರಲ್ಲಿ ಪ್ರಕಟವಾದ ರಿಲಿಜಸ್ ಪೇರೆಂಟಿಂಗ್: ಟ್ರಾನ್ಸ್ಮಿಟಿಂಗ್ ಫೇಯ್ತ್ ಅಂಡ್ ವ್ಯಾಲ್ಯೂಸ್ ಇನ್ ಕಾಂಟೆಂಪರರಿ ಅಮೇರಿಕಾ (Religious Parenting: Transmitting Faith and Values in Contemporary America)ಎನ್ನುವ ಪುಸ್ತಕವನ್ನು ನೋಡಬಹುದು. ಈ ಲೇಖಕರು ಹಿಂದೂಗಳು ಮತ್ತು ಬೌದ್ಧರನ್ನು ಒಳಗೊಂಡಂತೆ ವಿವಿಧ ಧಾರ್ಮಿಕ ಹಿನ್ನೆಲೆಗೆ ಸೇರಿದ ನೂರಾರು ತಾಯ್ತಂದೆಯರನ್ನು ಸಂದರ್ಶಿಸಿದ್ದಾರೆ. ವಿವಿಧ ಧಾರ್ಮಿಕ ಹಿನ್ನೆಲೆಗೆ ಸೇರಿದ್ದರೂ ಎಲ್ಲ ತಾಯ್ತಂದೆಯರೂ ತಮ್ಮ ಮಕ್ಕಳು ಸಮಾಜದ ರೀತಿನೀತಿಗಳನ್ನು ಅನುಸರಿಸುವಂತೆ ಮಾಡಲು ಅವರನ್ನು ಧಾರ್ಮಿಕ ಪರಿಸರದಲ್ಲಿ ಬೆಳೆಸುವ ಒಂದೇ ವಿಧಾನವನ್ನು ಅವಲಂಬಿಸುತ್ತಾರೆ ಎಂದು ಅವರು ಕಂಡುಹಿಡಿದರು. ಬದುಕಿನ ಪ್ರಯಾಣದಲ್ಲಿ ಅತ್ಯುತ್ತಮ ವ್ಯಕ್ತಿ ಎನಿಸಲು ಧರ್ಮದ ಅಡಿಪಾಯ ಅತಿ ಪ್ರಮುಖವಾಗಿದೆ.

ನಾವು ಏಷ್ಯಾದ ಹಿಂದೂ ತಾಯ್ತಂದೆಯರೊಡನೆ ಸಣ್ಣ ಪ್ರಮಾಣದಲ್ಲಿ ಕೆಲವು ಅಧ್ಯಯನಗಳನ್ನು ನಡೆಸಿ, ಅವರಲ್ಲಿ ಅನೇಕರು ಇದೇ ದೃಷ್ಟಿಕೋನವನ್ನು ಹೊಂದಿದ್ದಾರೆಂದು ಕಂಡುಕೊಂಡಿದ್ದೇವೆ: ಧರ್ಮಶ್ರದ್ಧೆಯ ತರಬೇತಿ ಚಾರಿತ್ರ್ಯವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಜೀವನದ ಸವಾಲುಗಳನ್ನು ಹೆಚ್ಚು ವಿಶ್ವಾಸದಿಂದ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲು ಮಕ್ಕಳಿಗೆ ಸಹಾಯ ಮಾಡುತ್ತದೆ. ಧರ್ಮವು ಗಾಳಿಪಟದ ಸೂತ್ರದಂತೆ ಜನರನ್ನು ಪ್ರಾಪಂಚಿಕ ಯಥಾರ್ಥತೆಗೆ ಅಂಟಿಕೊಳ್ಳುವಂತೆ ಮಾಡುತ್ತದೆ ಮತ್ತು ಉಪೇಕ್ಷಿತ ಸ್ಥಿತಿಗೆ ಹೋಗದಂತೆ ತಡೆಯುತ್ತದೆ ಎಂದು ತಾಯ್ತಂದೆಯರು ನನಗೆ ತಿಳಿಸಿದ್ದಾರೆ. ಕಳೆದ ಶತಮಾನಗಳಲ್ಲಿ ಹಿಂದೂ ಧರ್ಮವು ಎದುರಿಸಿದ ಅನೇಕ ಸವಾಲುಗಳನ್ನು ಅರಿಯುವುದರಿಂದ ಹಿಂದೂ ಧರ್ಮ ಎಷ್ಟು ಶ್ರೇಷ್ಠವಾದುದು, ಅದನ್ನು ನಾಶಮಾಡಲು ಸಾಧ್ಯವಿಲ್ಲ ಎಂಬುದು ಮಕ್ಕಳಿಗೆ ತಿಳಿಯುತ್ತದೆ ಎಂದು ಒಬ್ಬ ಪೋಷಕರು ವಿವರಿಸಿದರು. ನನ್ನ ಅಭಿಪ್ರಾಯದಲ್ಲಿ, ಹಿಂದೂ ಧರ್ಮದಿಂದ ನಮ್ಮ ಮುಂದಿನ ಪೀಳಿಗೆಗೆ ಉಂಟಾಗುವ ಮಹತ್ವಪೂರ್ಣವಾದ ಪ್ರಯೋಜನಗಳನ್ನು ನಾವು ಕಡೆಗಣಿಸಬಾರದು. ಅವುಗಳಲ್ಲಿ ಮೂರನ್ನು ನಾವು ಅನ್ವೇಷಿಸೋಣ.

ನಿರಂತರ ಸಂತೋಷವನ್ನು ಕಂಡುಕೊಳ್ಳುವುದು

ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವಾಗ, ಅವರು ಯಶೋವಂತರಾಗುವಂತೆ ಮಾಡಲು ಸಹಜವಾಗಿ ಗಮನ ಹರಿಸುತ್ತಾರೆ. ಅನೇಕರ ಪಾಲಿಗೆ, ಯಶಸ್ಸು ಕೇವಲ ಪ್ರಾಪಂಚಿಕ ಸಮೃದ್ಧಿಯೇ ಆಗಿದೆ. ಇದನ್ನು ಹೆಚ್ಚು ಸಂಬಳ ಪಡೆಯುವ, ಹೆಚ್ಚು ಬೇಡಿಕೆಯಿರುವ ವೃತ್ತಿಜೀವನವನ್ನು ಅನುಸರಿಸುವ ಮೂಲಕ ಸಾಧಿಸಬಹುದು ಎಂದು ವಿಶದೀಕರಿಸಲಾಗಿದೆ. ಈ ತಂತ್ರದಲ್ಲಿ ತನಗೆ ಸರಿಸಮಾನವಾಗಿ ವಿದ್ಯಾವಂತಳಾದ ಮತ್ತು ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ಸಂಗಾತಿಯನ್ನು ಮದುವೆಯಾಗುವುದೂ ಸೇರಿದೆ. ಯಶಸ್ಸಿನ ಈ ಅರ್ಥ ನಿರೂಪಣೆ “ಸಂತೋಷವಾಗಿರುವುದು” ಎಂಬ ನಿರ್ಣಾಯಕ ಅಂಶವನ್ನು ನಿರ್ಲಕ್ಷಿಸುತ್ತದೆ. ವೃತ್ತಿಪರ ಸಾಧನೆಗಳು ಮತ್ತು ಆರ್ಥಿಕ ಸಮೃದ್ಧಿಯಿಂದ ಸಂತೋಷ ಉಂಟಾಗುತ್ತದೆ ಎಂದು ಯಾವಾಗಲೂ ಭಾವಿಸಿಕೊಂಡಿದ್ದ, ಆದರೆ ಅದು ಸುಳ್ಳು ಎಂದು ಮನವರಿಕೆ ಮಾಡಿಕೊಂಡ ಡಜನ್ ಗಟ್ಟಲೆ ಪುರುಷರು ಮತ್ತು ಮಹಿಳೆಯರನ್ನು ನಾನು ಭೇಟಿಯಾಗಿದ್ದೇನೆ. ಭೌತಿಕ ಜಗತ್ತಿನಲ್ಲಿ ನಾವು ಏನೇ ಸಾಧಿಸಿದರೂ, ಅದರಿಂದ ಶಾಶ್ವತವಾದ ಸಂತೋಷ ಲಭಿಸುವುದಿಲ್ಲ ಎಂದು ಹಿಂದೂ ಧರ್ಮ ಬೋಧಿಸುತ್ತದೆ. ಅಂಥ ಸಾರ್ಥಕತೆ ಕ್ಷಣಿಕವಾದುದು. ಗಳಿಸಿದ ಏನನ್ನೇ ಆದರೂ ಕಳೆದುಕೊಳ್ಳಬಹುದು. ನಮ್ಮ ಆಂತರಿಕ, ಆಧ್ಯಾತ್ಮಿಕ ಸ್ವರೂಪದಲ್ಲಿ, ಆತ್ಮದ ಸ್ವಭಾವದಲ್ಲಿ ನೆಲೆ ನಿಲ್ಲುವುದರಿಂದ ನಿರಂತರವಾದ ಸಂತೋಷ ಲಭಿಸುತ್ತದೆ. ನನ್ನ ಗುರುಗಳಾದ ಶಿವಾಯ ಸುಬ್ರಮುನಿಯಸ್ವಾಮಿ, “ಇತರರಿಂದಲ್ಲ, ಆತ್ಮದ ಅಂತರಾಳದಿಂದಲೇ ಸಂತೋಷವನ್ನು ಅರಸುವ ಮೂಲಕ ಸಂತೋಷವಾಗಿರಲು ಕಲಿಯಿರಿ” ಎಂದು ಹೇಳಿದ್ದಾರೆ. ಇದನ್ನು ಸಾಧಿಸಲು ಅವರು “ಬೇರೆಯವರ ಮುಖದಲ್ಲಿ ಮಂದಹಾಸ ಮೂಡಿಸಿ. ಇತರರನ್ನು ಸಂತೋಷಪಡಿಸುವುದರ ಮೂಲಕ ನಿಮ್ಮ ಸಂತೋಷ ಮತ್ತು ರಚನಾತ್ಮಕ ಮನೋಸ್ಥಿತಿಯನ್ನು ಸಂಪಾದಿಸಿ” ಎಂದು ಬೋಧಿಸಿದರು. ಕೊಡುವುದರಿಂದ ಬರುವ ತೃಪ್ತಿ, ಪಡೆಯುವುದರಿಂದ ಬರುವುದಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. 

ಕೋಪದ ನಿಯಂತ್ರಣ

ಜೀವನದ ಗುಣಮಟ್ಟವನ್ನು ಹಾಳುಮಾಡುವ ಕೆಲವು ವಿಷಯಗಳ ಪಟ್ಟಿಯಲ್ಲಿ ಕೋಪಕ್ಕೇ ಹೆಚ್ಚಿನ ಆದ್ಯತೆ. ಆದ್ದರಿಂದ, ಈ ಮನೋವಿಕಾರವನ್ನು ತೋರ್ಪಡಿಸುವುದನ್ನು ಕಡಿಮೆ ಮಾಡಲು ಹಾಗೂ ಕ್ರಮೇಣ ಅದನ್ನು ತೊಡೆದುಹಾಕಲು ಮುಖ್ಯವಾಗಿ ಕಲಿಯಬೇಕು. ಕರ್ಮದ ಕಾನೂನನ್ನು ಆಳವಾಗಿ ಅರ್ಥಮಾಡಿಕೊಂಡರೆ, ನಮ್ಮ ಬದುಕಿನಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ‘ನಮಗೆ ಆಗಬೇಕಾಗಿರುವುದೇ ಆಗುತ್ತಿದೆ’ ಎಂದು ಅಂಗೀಕರಿಸಲು ಮತ್ತು ಅದರ ಬಗ್ಗೆ ಕೋಪ ಮಾಡಿಕೊಳ್ಳದಿರಲು ಸಾಧ್ಯವಾಗುತ್ತದೆ. ನಮಗೆ ಆಗುತ್ತಿರುವ ಒಳಿತು ಹಾಗೂ ಕೆಡಕುಗಳೆರಡನ್ನೂ ನಮ್ಮ ಕರ್ಮದ ಫಲವೆಂದು ಅಂಗೀಕರಿಸುತ್ತೇವೆ. ಈಗಿನ ಮತ್ತು ಪೂರ್ವ ಜನ್ಮಗಳ ನಮ್ಮ ಕರ್ಮಗಳು ನಾವು ಅನುಭವಿಸುತ್ತಿರುವುದನ್ನು ತ್ವರಿತಗೊಳಿಸುತ್ತವೆ.

ಮಾನಸಿಕ ಒತ್ತಡದ ನಿವಾರಣೆ

ಹಿಂದೂ ಮಕ್ಕಳು ಶಾಲೆಯಲ್ಲಿ ಪ್ರಮುಖ ಪರೀಕ್ಷೆಗಳ ರೂಪದಲ್ಲಿ ಮಾನಸಿಕ ಒತ್ತಡವನ್ನು ಎದುರಿಸುತ್ತಾರೆ, ಇದು ಏಷ್ಯಾದ ದೇಶಗಳಲ್ಲಿ ಎಂಟನೇ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತದೆ. ಅಂತಹ ಒತ್ತಡದಲ್ಲಿ ಅವರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಲು ಅಥವಾ ಚೆನ್ನಾಗಿ ಕಲಿಯಲು ಸಾಧ್ಯವಿಲ್ಲ. ಹಠ ಯೋಗಗಳನ್ನು ನಿಯಮಿತವಾಗಿ ಪ್ರತಿ ವಾರವೂ ಮಾಡಿದಾಗ, ನರಮಂಡಲದ ಸಂತುಲನ ಸಾಧಿಸುತ್ತದೆ ಮತ್ತು ಅದು ಆತಂಕವನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ನಿಯಮಿತವಾಗಿ ಆಳವಾಗಿ ಉಸಿರಾಡುವುದನ್ನು ಅಭ್ಯಾಸ ಮಾಡುವುದು ಮತ್ತೊಂದು ವಿಧಾನ. ನೀವು ನಿಮ್ಮ ಮಕ್ಕಳೊಡನೆ ಕೇವಲ ಎದೆಯವರೆಗೆ ಅಲ್ಲ, ಆಳವಾಗಿ ಹೊಟ್ಟೆಯವರೆಗೂ ಉಸಿರಾಡುವುದನ್ನು ಅಭ್ಯಾಸ ಮಾಡಿ. ಉಸಿರಾಡಲು ಇದೇ ನೈಸರ್ಗಿಕ ವಿಧಾನ. ಶಿಶುಗಳು ಹೀಗೆಯೇ ಆಳವಾಗಿ ಉಸಿರಾಡುತ್ತವೆ. ನಾವು ಉದ್ವಿಗ್ನರಾದಾಗ, ಎದೆ ಹಾಗೂ ಹೊಟ್ಟೆಯ ನಡುವಿನ ವಪೆ ಬಿಗಿದುಕೊಳ್ಳುತ್ತದೆ ಮತ್ತು ಉಸಿರಾಡುವಾಗ ನಾವು ಎದೆಯನ್ನು ವಿಸ್ತರಿಸುತ್ತೇವೆ. ಡಯಾಫ್ರ್ಯಾಮ್ ಎನ್ನಲಾಗುವ ಆ ವಪೆ ಜಟರದ ಹಿಂಭಾಗದಲ್ಲಿ ಪಕ್ಕೆಲುಬುಗಳ ಅಡಿಯಲ್ಲಿ ಇರುತ್ತದೆ. ಅದನ್ನು ಕಂಡುಹಿಡಿಯಲು, ಕೆಮ್ಮುತ್ತಾ ನಿಮ್ಮ ಬೆರಳ ತುದಿಗಳನ್ನು ನಿಮ್ಮ ಪಕ್ಕೆಲುಬುಗಳ ಅಡಿಯಲ್ಲಿ ಇರಿಸಿ. ನಿಮ್ಮ ಬೆರಳುಗಳು ನೇರವಾಗಿ ಆ ವಪೆಯ ಮೇಲಿದ್ದರೆ, ನೀವು ಕೆಮ್ಮಿದರೆ, ಅವು ಜಿಗಿಯುತ್ತವೆ. ನಿಮಗೆ ವಿಶ್ರಾಂತಿ ಅಗತ್ಯವಾಗಿ ಬೇಕಾದಾಗ – ಒಂದು ಪ್ರಮುಖ ಭೇಟಿ ಅಥವಾ ಪರೀಕ್ಷೆಯ ಮೊದಲು (ಮತ್ತು ಆ ಸಂದರ್ಭದಲ್ಲಿ!) , ಕೇವಲ ಒಂದು ನಿಮಿಷ ಆಳವಾಗಿ ಉಸಿರಾಡಿ. ಇದನ್ನು ಕೆಲವು ಬಾರಿ ಮಾಡುವುದರಿಂದ ನರಮಂಡಲದ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಾಣಾಯಾಮಕ್ಕೆ ಎಷ್ಟು ಶಕ್ತಿ ಇದೆ ಎನ್ನುವುದು ನಿಮಗೆ ಮನವರಿಕೆಯಾಗುತ್ತದೆ. ಇದು ಅನೇಕ ಸಂದರ್ಭಗಳಲ್ಲಿ ನೀವು ಬಳಸಬಹುದಾದ ಸಾಧನವಾಗುತ್ತದೆ.
ಮಾನವ ಸಂತೋಷಕರವಾದ, ಹೆಚ್ಚು ಸೃಜನಶೀಲ ಮತ್ತು ಹೆಚ್ಚು ಯಶಸ್ವಿ ಜೀವನವನ್ನು ನಡೆಸಲು ಸಹಾಯ ಮಾಡಲು ಹಿಂದೂ ಧರ್ಮಶ್ರದ್ಧೆ ಮತ್ತು ವಿಧಿಗಳು ವಿನ್ಯಾಸಗೊಳಿಸಲ್ಪಟ್ಟಿವೆ ಎಂದು ಈ ಮೂರು ಉದಾಹರಣೆಗಳು ಸ್ಪಷ್ಟವಾಗಿ ಎತ್ತಿ ತೋರುತ್ತವೆ. 

ಏಷ್ಯಾದಲ್ಲಿ ನಮ್ಮ ಅನೌಪಚಾರಿಕ ಸಮೀಕ್ಷೆಯಲ್ಲಿ ಭಾಗವಹಿಸಿದವರೊಬ್ಬರು ಹೀಗೆಂದು ಉಲ್ಲೇಖಿಸಿದ್ದಾರೆ: “ಈ ದಿನಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮಕ್ಕಳು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಕಾಲದಲ್ಲಿ ಧರ್ಮದ ಕಲಿಕೆ ಸರ್ವೋತ್ಕೃಷ್ಟವಾದುದು. ಬಹುಮಟ್ಟಿಗೆ ಮತಾಚಾರಣೆಯ ದೃಷ್ಟಿಕೋನದಿಂದ ಹಿಂದೂ ಧರ್ಮವನ್ನು ಸಂಕುಚಿತವಾಗಿ ನೋಡಲಾಗುತ್ತದೆ. ಮೆಟಾಫಿಸಿಕ್ಸ್, ಯೋಗ, ಆಯುರ್ವೇದ, ಮಾನವ ಮೌಲ್ಯಗಳು, ಮತಾಚರಣೆಗಳು, ವಾಸ್ತು, ಜ್ಯೋತಿಷ್ಯ ಮತ್ತು ಸಂಸ್ಕೃತಿ ಈ ರೀತಿ ಎಲ್ಲ ಅಂಶಗಳಲ್ಲೂ ಧರ್ಮದ ಸಮಗ್ರತೆಯನ್ನು ಮತ್ತು ಅದು ಮಾನವ ಜೀವನವನ್ನು ಒಟ್ಟಾರೆಯಾಗಿ ಹೇಗೆ ಆವರಿಸಿಕೊಂಡಿದೆ ಎಂಬುದನ್ನು ಕಾಣಲು ಅನೇಕರು ವಿಫಲರಾಗಿದ್ದಾರೆ. ಧರ್ಮವು ನಿಜವಾಗಿಯೂ ಎಷ್ಟು ಪ್ರಯೋಜನಕಾರಿ ಎಂಬುದನ್ನು ಹಿಂದೂಗಳು ಅರಿತುಕೊಂಡರೆ, ಅದನ್ನು ತಮ್ಮ ಮಕ್ಕಳಿಗೆ ಹೇಳಿಕೊಡಲು ಅಥವಾ ಧರ್ಮವನ್ನು ಕಲಿಸುವ ತರಗತಿಗಳಿಗೆ ಅವರನ್ನು ಕಳುಹಿಸಲು ತಾವಾಗಿಯೇ ಮುಂದಾಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. “

“ಹೌದು, ನಾವು ಮಾಡಲೇಬೇಕಾದ ಒಂದು ಕರ್ತವ್ಯವಿದೆ – ನಮ್ಮ ಧರ್ಮವನ್ನು ಮುಂದಿನ, ಅದರ ಮುಂದಿನ, ಅದರ ಮುಂದಿನ ಮತ್ತು ಅದರ ಮುಂದಿನ ಪೀಳಿಗೆಗಳಿಗೆ ತಲುಪಿಸಬೇಕಾಗಿದೆ. ಇದನ್ನು ಹೇಗೆ ಮಾಡಬೇಕು? ಹೆಚ್ಚು ಶಾಲೆಗಳನ್ನು ನಿರ್ಮಿಸಿ, ಮಕ್ಕಳಿಗೆ ಶೈವ ಶಿಕ್ಷಣವನ್ನು ನೀಡುವುದರ ಮೂಲಕ ಮಾಡಬೇಕು. ನಾವು ನಮ್ಮ ಯುವಕರಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಇದಕ್ಕೆ ಪರ್ಯಾಯವೆಂದರೆ ನಾಸ್ತಿಕತೆ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಮತಗಳು ಶೈವ ಧರ್ಮವನ್ನು ಜಯಿಸಲು, ಅಸ್ತಿತ್ವವಾದ ಮತ್ತು ಪಾಶ್ಚಿಮಾತ್ಯ ವೈಚಾರಿಕತೆ, ಭೌತವಾದ ಮತ್ತು ಜಾತ್ಯತೀತ ಮಾನವತಾವಾದಗಳು ಅದರ ಮೇಲೆ ವಿಜಯ ಸಾಧಿಸಲು ಹಾಗೂ ಸಂಪ್ರದಾಯದ ಬೇರುಗಳನ್ನು ಕತ್ತರಿಸಿ ಹಾಕಲು ಪ್ರಯತ್ನಿಸುವ ಉದಾರ ನವ-ಭಾರತೀಯರ ಬಿನ್ನಹಗಳಿಗೆ ಮೂಲಭೂತ ನಿಯಮಗಳನ್ನು ಜಯಿಸಲು ಅವಕಾಶ ನೀಡುವುದು. ಇದನ್ನು ತಡೆಗಟ್ಟಬೇಕಾದರೆ, ಮುಕ್ತವಾಗಿ ಕಲಿಯಲು ಉತ್ಸುಕರಾಗಿದ್ದರೂ, ಯುವ ಮೇಧಾವಿಗಳನ್ನು ಪರಂಪರೆಯಿಂದ ದೂರ ಸೆಳೆಯಲಾಗುತ್ತಿರುವ ಪ್ರಲೋಭನಗಳಿಂದ ರಕ್ಷಿಸಿ, ಅವರಿಗೆ ಉತ್ತಮ ಶಿಕ್ಷಣ ನೀಡುವುದೊಂದೇ ನಮ್ಮ ಪಾಲಿಗೆ ಉಳಿದಿರುವ ಏಕೈಕ ಮಾರ್ಗವಾಗಿದೆ. ಅವರನ್ನು ಎದೆಗೊತ್ತಿಕೊಳ್ಳಿ, ರಕ್ಷಿಸಿ, ಗಾಢವಾಗಿ ಪ್ರೀತಿಸಿ ಹಾಗೂ ಅವರಿಗೆ ಶೈವ ಧರ್ಮದ ಸಂಪತ್ತನ್ನು ದಯಪಾಲಿಸಿ. ಅದೇ ಅವರಿಗೆ ನೀವು ಕೊಡಬಹುದಾದ ಮಹಾನ್ ಕೊಡುಗೆಯಾಗಿದೆ. ಉಳಿದೆಲ್ಲವೂ ನಾಶವಾಗುತ್ತವೆ. ಉಳಿದೆಲ್ಲವೂ ಅವನತಿ ಹೊಂದುತ್ತವೆ.” ಶೈವ ಹಿಂದೂ ಶ್ರೋತೃಗಳಿಗೆ ಹೀಗೆಂದು ದಿಟ್ಟತನದಿಂದ ನುಡಿದ ನನ್ನ ಗುರುದೇವರ ಬುದ್ಧಿವಂತಿಕೆಯ ಮಾತುಗಳಿಗಿಂತ ಈ ಲೇಖನವನ್ನು ಮುಗಿಸಲು ಬೇರೆ ಉತ್ತಮವಾದ ಮಾರ್ಗವಿಲ್ಲ.