ಪ್ರಾಚೀನ ಗ್ರಂಥಗಳು ಪ್ರಜ್ಞೆಯ ನಾಲ್ಕು ಮೂಲಭೂತ ಸ್ಥಿತಿಗಳನ್ನು ವಿವರಿಸಿ, ಮನಸ್ಸಿನ ನಿಗಾಢತೆಯನ್ನು ಅರ್ಥ ಮಾಡಿಕೊಳ್ಳುವ ವಿಧಾನವನ್ನು ನಮಗೆ ಕಲಿಸುತ್ತವೆ.

ಸದ್ಗುರುಬೋಧಿನಾಥವೇಲನ್‍ಸ್ವಾಮಿ

ಪ್ರಾಚೀನ ವೇದಗಳು ಮತ್ತು ಅಗಮಗಳಿಂದ ಆಯ್ದ, ವಿವಿಧ ದೇವತೆಗಳನ್ನು ಆಹ್ವಾನಿಸಿ, ಆಮೂಲಕ ಭಗವಂತನನ್ನು ಪೂಜಿಸುವ ವ್ರತಾಚರಣೆಗಳ ಸುತ್ತಲೂ ಕೇಂದ್ರೀಕೃತವಾದ ಧರ್ಮವನ್ನು ಹಿಂದೂಧರ್ಮದ ಜನಪ್ರಿಯ ದೃಷ್ಟಿಕೋನ ಬಿಂಬಿಸುತ್ತದೆ. ಆದರೆ ಆ ವಿವರಣೆ ಹಿಂದೂ ಧರ್ಮದ ಆಳವಾದ ಬೋಧನೆಗಳನ್ನು, ಉದಾಹರಣೆಗೆ ಪ್ರಾಚೀನ ಒಳನೋಟ ಬೀರುವ ಮನಸ್ಸಿನ ನಾಲ್ಕು ಪ್ರಜ್ಞೆಯ ಸ್ವರೂಪಗಳನ್ನು  ಕಡೆಗಣಿಸುತ್ತದೆ.  ಅತ್ಯಂತ ಪ್ರಾಚೀನವಾದ (ಕ್ರಿ.ಪೂ. 8 ರಿಂದ 6 ನೇ ಶತಮಾನದ ಕಾಲಕ್ಕೆ ಸೇರಿದೆ ಎಂದು ಪರಿಗಣಿಸಲಾದ) ಛಾಂದೋಗ್ಯಉಪನಿಷತ್ತಿನಲ್ಲಿ ಮನಸ್ಸಿನ ಸ್ವರೂಪಗಳನ್ನು ಚಿತ್ರಿಸಲಾಗಿದೆ. ಮಾನವರು ಅನುಭವಿಸಿದ ಪ್ರಜ್ಞೆಯ ಸ್ವರೂಪಗಳ ಒಳನೋಟಗಳನ್ನು 2,500 ವರ್ಷಗಳ ಹಿಂದೆ, ಭಾರತದ ಋಷಿಗಳು ಚಿತ್ರಿಸಿದ್ದಾರೆಂದು ಅರಿತು ಹಲವಾರು ಜನರು ಆಶ್ಚರ್ಯಚಕಿತರಾಗಿದ್ದಾರೆ. ಏಳು ಶತಮಾನಗಳ ಅನಂತರ ಬಂದ ಮಾಂಡೂಕ್ಯಉಪನಿಷತ್ತಿನ 12 ಚರಣಗಳಲ್ಲಿ ಈ ವಿಚಾರಗಳನ್ನೇ ವಿಸ್ತರಿಸಿ ಹೇಳಲಾಗಿದೆ.

ಸಂಸ್ಕೃತದಲ್ಲಿ ಅವಸ್ತಾ ಎಂದು ಕರೆಯಲಾಗುವ ಮನಸ್ಸಿನ ಈ ನಾಲ್ಕು ಸ್ವರೂಪಗಳು: ಜಾಗ್ರತ್ (ಅಥವಾ ವೈಶ್ವಾವನರ)- ಎಚ್ಚರ; ಸ್ವಪ್ನ (ಅಥವಾ ತೈಜಸ)-ಕನಸು; ಸುಷುಪ್ತಿ (ಅಥವಾ ಪ್ರಜ್ಞಾ)- ಗಾಢ ನಿದ್ರೆ; ಮತ್ತು ನಾಲ್ಕನೆಯದಾದ ತುರೀಯ,  ಮಾನವಾತೀತ ಪ್ರಜ್ಞೆ ಅಥವಾ ಸಮಾಧಿ. ವಿಕಿಪೀಡಿಯಾದ ಲೇಖಕರೊಬ್ಬರು ಉಪನಿಷತ್ತುಗಳ ಈ ಬೋಧನೆಗಳ ಬಗ್ಗೆ ಹೀಗೆ ಹೇಳಿದ್ದಾರೆ: “ಹಿಂದೂಧರ್ಮದಿಂದ ಪ್ರಭಾವಿತವಾದ ಭಾರತದ ಪ್ರಾಚೀನ ಚಿಂತನೆಯಲ್ಲಿ ಪ್ರಜ್ಞೆಯ ಪ್ರಕಾರಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ವ್ಯಕ್ತಿಯ ಕ್ಷಣಭಂಗುರವಾದ, ಐಹಿಕ ಸ್ವರೂಪ ಮತ್ತು ಅವುಗಳ ಶಾಶ್ವತ, ಬದಲಾಗದ ಆತ್ಮದ ನಡುವಿನ ಭಿನ್ನತೆಯೇ ಉಪನಿಷತ್ತುಗಳ ಕೇಂದ್ರ ಕಲ್ಪನೆ. ವಿಭಿನ್ನ ಹಿಂದೂ ಸಿದ್ಧಾಂತಗಳು ಮತ್ತು ಬೌದ್ಧಧರ್ಮ ಈ ವರ್ಗ ಶ್ರೇಣಿಯ ಸ್ವರೂಪಗಳನ್ನು ಆಕ್ಷೇಪಿಸಿವೆ. ಆದರೆ ಎಲ್ಲವೂ ಉನ್ನತ ಪ್ರಜ್ಞೆಯನ್ನು ತಲುಪುವ ಮಹತ್ವವನ್ನು ಒತ್ತಿ ಹೇಳಿವೆ. ಈ ಗುರಿಯ ಅನ್ವೇಷಣೆಯಲ್ಲಿ ಬಳಸುವ ತಂತ್ರಗಳ ವ್ಯಾಪ್ತಿಗೆ ಯೋಗ ಸೇರುತ್ತದೆ.”

ಈ ನಾಲ್ಕು ಮೂಲಭೂತ ಸ್ಥಿತಿಗಳನ್ನು ವಿವರವಾಗಿ ನೋಡೋಣ. ಎಚ್ಚರದ ಸ್ಥಿತಿಯಲ್ಲಿ ಆತ್ಮ ಸೀಮಿತವಾದ ಇಂದ್ರಿಯ ಶಕ್ತಿಯನ್ನು ಪಡೆದಿರುತ್ತದೆ ಹಾಗೂ  ಬಾಹ್ಯ ವಸ್ತುಗಳ ಬಗೆಗಿನ ಅರಿವು ಮತ್ತು ಅನುಭವವನ್ನು ಹೊಂದಿರುತ್ತದೆ. ಕನಸು ಕಾಣುವ ಸ್ಥಿತಿಯಲ್ಲಿ, ಆತ್ಮವು ಅದೇ ಸೀಮಿತವಾದ ಇಂದ್ರಿಯ ಶಕ್ತಿಯನ್ನು ಪಡೆದಿರುತ್ತದೆ ಮತ್ತು ತನ್ನ ಮಾನಸಿಕ ದೃಶ್ಯ ಮತ್ತು ಸೂಕ್ಷ್ಮಶರೀರಗಳ ಬಗ್ಗೆ ಅರಿವು ಮತ್ತು ಅನುಭವವನ್ನು ಹೊಂದಿರುತ್ತದೆ. ಗಾಢ ನಿದ್ರೆಯ ಸ್ಥಿತಿಯಲ್ಲಿ ವಸ್ತುಗಳ ಅರಿವು ಮರೆಯಾಗುತ್ತದೆ. ಸೀಮಿತ ಇಂದ್ರಿಯ ಶಕ್ತಿಯನ್ನು ಜಯಿಸಿ, ಆತ್ಮವು ಅಗಾಧ ಶಾಂತಿಯಲ್ಲಿ ಮುಳುಗುತ್ತದೆ. ನಾಲ್ಕನೆಯ ಸ್ಥಿತಿಯಲ್ಲಿ, ಆತ್ಮವು ತನ್ನ ಸಂಪೂರ್ಣ ಆಧ್ಯಾತ್ಮಿಕ ಸ್ವರೂಪದಲ್ಲಿ ನೆಲಸುತ್ತದೆ. ಆಗ ಆತ್ಮ ತನ್ನ ಹೊರತಾಗಿ ಬೇರೆ ಅಸ್ತಿತ್ವವಿದೆ ಎಂಬುದರ ಅರಿವನ್ನೇ ಹೊಂದದೆ, ಸರ್ವವ್ಯಾಪಿಯಾಗಿರುತ್ತದೆ. ನಾವು ಇದನ್ನು ಮೂರು ಕೋಣೆಗಳಿರುವ ಮನೆಯಲ್ಲಿ ಇದ್ದೇವೆ ಎಂದು ಭಾವಿಸಬಹುದು. ಒಂದು ಕೋಣೆ ಎಚ್ಚರದ ಸ್ಥಿತಿಯಲ್ಲಿರಲು, ಮತ್ತೊಂದು ಕನಸು ಕಾಣುವ ಸ್ಥಿತಿಯಲ್ಲಿರಲು ಮತ್ತು ಮೂರನೆಯದು ಗಾಢ ನಿದ್ರೆಯ ಸ್ಥಿತಿಯಲ್ಲಿ ಇರಲು ಎಂದು ತಿಳಿಯಬಹುದು. ನಾವು ಮನೆಯಲ್ಲಿ ಇರುವವರೆಗೂ ನಮ್ಮ ಪ್ರಜ್ಞೆ ಸೀಮಿತ ಇಂದ್ರಿಯ ಶಕ್ತಿಯನ್ನು ಪಡೆದಿರುತ್ತದೆ. ಆದರೆ, ಮನೆಯಿಂದ ಹೊರಗೆ ಬಂದೊಡನೆ, ಈ ಮಿತಿಯನ್ನು ತೊಡೆದುಹಾಕಿ ನಾವು ಸರ್ವವ್ಯಾಪಿ ಆಗಿರುವುದರ ಅನುಭವ ಹೊಂದಬಹುದು.

ಮಾಂಡುಕ್ಯ ಉಪನಿಷತ್ತಿನ ಮೊದಲ ಎರಡು ಚರಣಗಳು (ಸ್ವಾಮಿ ನಿಖಿಲಾನಂದರ ಅನುವಾದ) ಆತ್ಮ, ಬ್ರಹ್ಮ ಮತ್ತು ಓಂಕಾರಗಳಲ್ಲಿ ಏಕತೆ ಇರುವುದನ್ನು ಸೂಚಿಸುತ್ತವೆ.

1. ಓಂಕಾರ ಎನ್ನುವುದು ಇಡೀ ವಿಶ್ವ. ಅದರ ಸ್ಪಷ್ಟ ವಿವರಣೆ ಹೀಗಿದೆ: ಭೂತ, ವರ್ತಮಾನ ಮತ್ತು ಭವಿಷ್ಯದ ಎಲ್ಲವೂ ವಾಸ್ತವವಾಗಿ ಓಂಕಾರವೇ ಆಗಿದೆ. ಮತ್ತು ಕಾಲದ ಈ ಮೂರು ವಿಭಾಗಗಳನ್ನು ಮೀರಿದುದೇನಾದರೂ ಇರುವುದಾದರೆ-ಅದು ಕೂಡ ಓಂಕಾರವೇ ಆಗಿದೆ.

2. ಇದೆಲ್ಲವೂ ವಾಸ್ತವವಾಗಿ ಬ್ರಹ್ಮ ಎನ್ನಬಹುದು. ಈ ಆತ್ಮವೂ ಬ್ರಹ್ಮ. ಈ ಆತ್ಮವನ್ನು ನಾಲ್ಕು ಭಾಗಗಳನ್ನಾಗಿ (ಪಾದಗಳು) ವಿಂಗಡಿಸಬಹುದು.

“ಈ ಆತ್ಮವೂ ಬ್ರಹ್ಮವೇ ಆಗಿದೆ”. ಉಪನಿಷತ್ತುಗಳನಾಲ್ಕು ಮಹಾವಾಕ್ಯಗಳಲ್ಲಿ, ಒಂದಾದ, ಸಂಸ್ಕೃತದಲ್ಲಿ “ಅಯಮ್ ಆತ್ಮಾ ಬ್ರಹ್ಮ” ಎಂಬ ಉಕ್ತಿ ಆತ್ಮ ಮತ್ತು ಬ್ರಹ್ಮನ ಏಕತೆಯನ್ನು ಸಾರುತ್ತದೆ.

ಓಂಕಾರದಿಂದತುರೀಯವನ್ನುತಲುಪುವುದು

ಈ ಏಕತೆಯನ್ನು ಅರಿತುಕೊಳ್ಳುವ ಸಾಧನವನ್ನಾಗಿ ಓಂಕಾರವನ್ನು ಬಳಸಬಹುದು ಎಂದು ಮುಂಡಕಉಪನಿಷತ್ತುಹೇಳುತ್ತದೆ. “ಓಂಕಾರ ಒಂದು ಧನುಸ್ಸು; ಆತ್ಮ ಒಂದು ಬಾಣ; ಬ್ರಹ್ಮ ಒಂದು ಲಕ್ಷ್ಯ. ಬಾಣವನ್ನು ಏಕಾಗ್ರಚಿತ್ತದಿಂದ ಪ್ರಯೋಗಿಸಬೇಕು. ಆಗ ಅದು ಲಕ್ಷ್ಯವನ್ನು ಭೇದಿಸುವಂತೆ ಆತ್ಮ ಬ್ರಹ್ಮನೊಡನೆ ಬೆರೆತು ಒಂದಾಗುತ್ತದೆ.” ಜಪ ಯೋಗದ ಅಭ್ಯಾಸದಿಂದ, ಓಂಕಾರವನ್ನು ಮಂತ್ರದಂತೆ ಪದೇ ಪದೇ ಹೇಳುವುದರ ಮೂಲಕ, ಅದನ್ನು ಧನುಸ್ಸಿನಂತೆ ಬಳಸಿಕೊಳ್ಳಬಹುದು. ನನ್ನ ಗುರುಗಳಾದ, ಶಿವಾಯ ಸುಬ್ರಮುನಿಯಸ್ವಾಮಿ, ಈ ಅಭ್ಯಾಸವನ್ನು ತಮ್ಮ “Merging with Siva” ಎಂಬ ಪುಸ್ತಕದ “Cognizantability” ಎನ್ನುವ ಸಾಧನ ವಿಭಾಗದಲ್ಲಿ ವಿವರಿಸಿದ್ದಾರೆ.

“ಎಪ್ಪತ್ತನೆಯ ಸೂಕ್ತಿ: ಸೃಜನಶೀಲ ಶಕ್ತಿಗಳ ಧ್ರುವೀಕರಣವನ್ನು ತಟಸ್ಥಗೊಳಿಸಲು ಮತ್ತು ರೂಪಾಂತರಕ್ಕೆ ಸಹಾಯ ಮಾಡಲು, ಕೆಲವು ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಮಂತ್ರಗಳು ತಾರ್ಕಿಕವಾಗಿ ಜಾಗೃತ ಮನಸ್ಸನ್ನು ಕೇಂದ್ರೀಕರಿಸುತ್ತವೆ, ಜಾಗೃತ ಮನಸ್ಸಿನ ಉಪಪ್ರಜ್ಞೆಯನ್ನು ಸಮನ್ವಯಗೊಳಿಸುತ್ತವೆ ಮತ್ತು ಮೆದುಳನ್ನು ಆಕರ್ಷಿಸುತ್ತವೆ. ಇದು ಸೃಜನಶೀಲ ಶಕ್ತಿಗಳನ್ನು ಮೂಲಪ್ರವೃತ್ತಿಯಿಂದ ಬೌದ್ಧಿಕ ಮತ್ತು ಅತಿಪ್ರಜ್ಞೆಯ ಪ್ರದೇಶಗಳಿಗೆ ಸೆಳೆಯುತ್ತದೆ.”

“ಎಪ್ಪತ್ತೊಂದನೇ ಸೂಕ್ತಿ: ಸರಿಯಾದ ರೀತಿಯಲ್ಲಿ ಜಪಿಸಿದಾಗ, ಅ-ಉ-ಮ ಅಕ್ಷರಗಳು ಮೂಲಪ್ರವೃತ್ತಿಯನ್ನು ಬೌದ್ಧಿಕತೆಗೆ ಮತ್ತು ಮೂಲಪ್ರವೃತ್ತಿಯ ಬೌದ್ಧಿಕತೆಯನ್ನು ಮಾನವಾತೀತ ಪ್ರಜ್ಞೆಗೆ ಪರಿವರ್ತಿಸುತ್ತವೆ. ಅನಂತರ ಪ್ರತ್ಯಕ್ಷ ಸಂವೇದನೆ ಉಂಟಾಗುತ್ತದೆ.” ನನ್ನ ಗುರುದೇವರು ಈ ಸೂಕ್ತಿಯ ಬಗ್ಗೆ ಹೀಗೆ ವ್ಯಾಖ್ಯಾನ ಮಾಡಿದ್ದಾರೆ: “ಓಂಕಾರ ಸರ್ವವ್ಯಾಪಿಯಾದ ಮಂತ್ರ, ಅದನ್ನು ಮಂತ್ರೋಪದೇಶ ಪಡೆದವರು ಮತ್ತು ಮಂತ್ರೋಪದೇಶ ಪಡೆಯದವರು ಇಬ್ಬರೂ ಯಾವುದೇ ಸಂದರ್ಭದಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ, ಶರೀರ ಪರಿಶುದ್ಧವಾಗಿರುವಾಗ ಅಥವಾ ಕೊಳಕಾಗಿರುವಾಗಲೂ ಜಪಿಸಬಹುದು. ಸರಿಯಾಗಿ ಜಪಿಸಿದಾಗ ಅದು ದೈಹಿಕ  ಮಾನಸಿಕ ಮತ್ತು ಆಧ್ಯಾತ್ಮಿಕ ಹೊಂದಾಣಿಕೆಯನ್ನು ಉಂಟುಮಾಡಿ ಪ್ರಜ್ಞೆಯನ್ನು ತೀಕ್ಷ್ಣಗೊಳಿಸುತ್ತದೆ.”

ಓಂಕಾರದ ಜಪ ಮಂತ್ರದಷ್ಟು ಪರಿಣಾಮಕಾರಿಯಾಗಬೇಕಾದರೆ, ಅದನ್ನು ಸರಿಯಾಗಿ ಉಚ್ಚರಿಸಬೇಕು ಎಂದು ಗುರುದೇವರು  ವಿವರಿಸಿದ್ದಾರೆ. ಮೊದಲ ಅಕ್ಷರ ಅ-ಇದನ್ನು ಆಂಗ್ಲದಲ್ಲಿ “awe” ಎಂದು ಹೇಳುವಂತೆ ದೀರ್ಘವಾಗಿ ಉಚ್ಚರಿಸಬೇಕು. ಎರಡನೆಯ ಅಕ್ಷರ ಉ – ಇದನ್ನು “roof” ಪದವನ್ನು ಉಚ್ಚರಿಸುವಂತೆ “ಊ” ಎಂದು ದೀರ್ಘವಾಗಿ ಉಚ್ಚರಿಸಬೇಕು.  ಮೂರನೆಯ ಅಕ್ಷರ  ಮ, ಮುಂಭಾಗದ ಹಲ್ಲುಗಳನ್ನು ಮೆಲ್ಲನೆ ತಗುಲಿಸುತ್ತ “ಮ್” ಎಂದು ದೀರ್ಘವಾಗಿ ಉಚ್ಚರಿಸಬೇಕು. ಪ್ರತಿಯೊಂದು ಜಪವನ್ನೂ  ’ಅ’ ಅಕ್ಷರವನ್ನು ಮೊದಲ ಎರಡು ಸೆಕೆಂಡುಗಳ ಕಾಲ, ಎರಡನೆಯ ’ಊ’ ಅಕ್ಷರವನ್ನು ಎರಡು ಸೆಕೆಂಡುಗಳ ಕಾಲ ಮತ್ತು ಕೊನೆಯ ’ಮ್’ ಅಕ್ಷರವನ್ನು ಮೂರು ಸೆಕೆಂಡುಗಳ ಕಾಲ ಹೀಗೆ ಸುಮಾರು ಏಳು ಸೆಕೆಂಡುಗಳವರೆಗೆ ಮಾಡಬೇಕು. ಮುಂದಿನ ಜಪವನ್ನು ಎರಡು ಸೆಕೆಂಡುಗಳ ಕಾಲ ಮೌನವಾಗಿದ್ದು, ಅನಂತರ ಮಾಡಬೇಕು. ಮೂರು ಅಕ್ಷರಗಳನ್ನು ಒಟ್ಟಿಗೆ ಸೇರಿಸಿ ಹೇಳಬೇಕು. ಓಂ (ಮೌನ), ಓಂ (ಮೌನ), ಓಂ (ಮೌನ). ಮೊದಲ ’ಅ’ ಅಕ್ಷರವನ್ನು ನಾವು ಜಠರದ ಆಳದಿಂದ ಉಚ್ಛರಿಸಿದಾಗ ನಮ್ಮ ಎದೆ ಕಂಪಿಸುವ ಅನುಭವವಾಗುತ್ತದೆ. ಎರಡನೇ  ’ಉ’ ಅಕ್ಷರವನ್ನು ಉಚ್ಛರಿಸಿದಾಗ ನಮ್ಮ ಗಂಟಲು ಕಂಪಿಸುತ್ತದೆ. ಮೂರನೆಯ  ’ಮ್’ ಅಕ್ಷರವನ್ನುಉಚ್ಛರಿಸಿದಾಗ ನಮ್ಮ ಶಿರಸ್ಸಿನ ಮೇಲ್ಭಾಗ ಕಂಪಿಸುತ್ತದೆ. 

ಓಂಕಾರದ ನಾಲ್ಕು ಭಾಗಗಳು ಮತ್ತು ಪ್ರಜ್ಞೆಯ ನಾಲ್ಕು ಸ್ವರೂಪಗಳ ನಡುವೆ ಸ್ಪಷ್ಟವಾದ ಸಂಬಂಧವನ್ನು ಎತ್ತಿ ತೋರಿಸುವ ಮಾಂಡುಕ್ಯಉಪನಿಷತ್ತಿನ9-12 ಚರಣಗಳು, ಓಂಕಾರದ ವಿಭಾಗಗಳನ್ನು ಸೂಕ್ಷ್ಮತರವಾದ ಮಟ್ಟಕ್ಕೆ ಏರಿಸುವ ನನ್ನ ಗುರುದೇವರ ಬೋಧನೆಯನ್ನು ಬೆಂಬಲಿಸುತ್ತವೆ.

9. ಜಾಗ್ರತ್ ಸ್ಥಿತಿಯನ್ನು ತನ್ನ ಕಾರ್ಯಕ್ಷೇತ್ರವಾಗಿ ಪಡೆದಿರುವ ವೈಶ್ವಾವನರ ಆತ್ಮ ತನ್ನ ಸರ್ವ ವ್ಯಾಪಕತೆಯಿಂದಾಗಿ ಅಥವಾ ಮೊದಲನೆಯದಾಗಿರುವುದರಿಂದ ಓಂಕಾರದ ಪ್ರಥಮ ಅಕ್ಷರವಾಗಿದೆ (ಅ). ಇದನ್ನು ಅರ್ಥಮಾಡಿಕೊಂಡವರು ತಮ್ಮ ಎಲ್ಲ ಆಸೆಗಳನ್ನೂ ಈಡೇರಿಸಿಕೊಳ್ಳುತ್ತಾರೆ ಮತ್ತು ಅಗ್ರಗಣ್ಯ [ಮಹಾಪುರುಷರಲ್ಲಿ] ರಾಗುತ್ತಾರೆ.

10.ಕನಸಿನ ಸ್ಥಿತಿಯನ್ನು ತನ್ನ ಕಾರ್ಯಕ್ಷೇತ್ರವಾಗಿ ಪಡೆದಿರುವ ತೈಜಸ ಆತ್ಮ ತನ್ನ ಶ್ರೇಷ್ಠತೆಯಿಂದ ಅಥವಾ ಮಧ್ಯವರ್ತಿ ಆಗಿರುವುದರಿಂದ ಓಂಕಾರದ ಎರಡನೇ ಅಕ್ಷರವಾಗಿದೆ [ಉ]. ಇದನ್ನು ಅರ್ಥಮಾಡಿಕೊಂಡವರು ಉನ್ನತ ಜ್ಞಾನವನ್ನು ಪಡೆಯುತ್ತಾರೆ, ಎಲ್ಲರಿಂದಲೂ ಸಮಾನವಾದ ಗೌರವವನ್ನು ಪಡೆಯುತ್ತಾರೆ ಹಾಗೂ ತಮ್ಮ ವಿಶ್ವ ಕುಟುಂಬದಲ್ಲಿ ಬ್ರಹ್ಮನನ್ನು ಅರಿಯದವರು ಯಾರೂ ಇಲ್ಲವೆಂಬುದನ್ನು ಕಂಡುಕೊಳ್ಳುತ್ತಾರೆ.

11.ಪ್ರಜ್ಞಾ ಆತ್ಮ ಗಾಢನಿದ್ರೆಯ ಸ್ಥಿತಿಯನ್ನು ತನ್ನ ಕಾರ್ಯಕ್ಷೇತ್ರವಾಗಿ ಪಡೆದಿದೆ. ಎರಡೂ ಪ್ರಮಾಣವಾಗಿರುವುದರಿಂದ ಮತ್ತು ಅವುಗಳಲ್ಲಿ ಎಲ್ಲವೂ ಒಂದಾಗುವುದರಿಂದ, ಅದು ಓಂಕಾರದ ಮೂರನೆಯ [ಮ್]  ಅಕ್ಷರವಾಗಿದೆ. ಇದನ್ನು ಅರ್ಥಮಾಡಿಕೊಂಡವರು ಎಲ್ಲವನ್ನೂ ಅಳೆಯಬಲ್ಲವರಾಗುತ್ತಾರೆ ಮತ್ತು ಎಲ್ಲವನ್ನೂ ತಮ್ಮ ಅಂತರಂಗದಲ್ಲಿಯೇ ಗ್ರಹಿಸಬಲ್ಲವರಾಗುತ್ತಾರೆ.

12. ನಾಲ್ಕನೆಯದಾದ ತುರೀಯ ಸಮಗ್ರವಾದುದು ಮತ್ತು ಯಾವ ಸಂಬಂಧವನ್ನೂ ಹೊಂದದೆ ಇರುವುದು. ಅನುಭವ ವೇದ್ಯವಾದುದು ಇಲ್ಲಿ ಕೊನೆಗೊಳ್ಳುತ್ತದೆ.; ಇದು ಉತ್ಕೃಷ್ಟವಾದುದು ಮತ್ತು ಅದ್ವೈತವಾದುದು. ಈ ಓಂಕಾರ ದಿಟವಾಗಿ ಆತ್ಮವೇ ಆಗಿದೆ. ಇದನ್ನು ಅರ್ಥಮಾಡಿಕೊಂಡವರು ತಮ್ಮನ್ನು ಆತ್ಮದೊಡನೆ ವಿಲೀನಗೊಳಿಸಿಕೊಳ್ಳುತ್ತಾರೆ. (ಸಮಗ್ರವಾದುದು ಎಂದರೆ ಶಬ್ದವಿಲ್ಲದಿರುವುದು ಎಂದು ಅರ್ಥ. ತುರೀಯ ಶಬ್ದವಿಲ್ಲದ ಓಂಕಾರ.)

Cognizantability” ಎನ್ನುವ ಸಾಧನ ವಿಭಾಗದಲ್ಲಿ, ಮೂಲ ಪ್ರವೃತ್ತಿಯಿಂದ ಮೇಧಾವಿ ಮನಸ್ಸಿನ ಕಡೆ ನಡೆಯುವುದರ ಬಗ್ಗೆ ಹೇಳುವಾಗ, ನನ್ನ ಗುರುದೇವರು ನಮ್ಮ ಪ್ರಜ್ಞೆಯ ಸ್ಥಿತಿಯನ್ನು ಜಾಗೃತಗೊಳಿಸುವ ಬಗ್ಗೆಯೇ ಹೇಳುತ್ತಿದ್ದಾರೆ. ಉದಾಹರಣೆಗೆ, ನಕಾರಾತ್ಮಕ ಭಾವನೆಯಾದ ಭೀತಿಯನ್ನು ನಾವು  ಕೆಲವು ನಿಮಿಷಗಳ ಕಾಲ ಓಂಕಾರವನ್ನು ಜಪಿಸುವ ಮೂಲಕ ಗೆಲ್ಲಬಹುದು. ತಳಮಳಗೊಂಡ ಮನಃಸ್ಥಿತಿಯಿಂದ ಶಾಂತಿಯುತ ಸ್ಥಿತಿಗೆ ನಾವು ಅದೇ ರೀತಿಯಲ್ಲಿ ಚಲಿಸಬಹುದು. ಕೇವಲ ಓಂಕಾರದ ಶಕ್ತಿಯ ಮೂಲಕ ಕ್ರೋಧವನ್ನೂ ಕ್ಷಮೆಗೆ ಪರಿವರ್ತಿಸಬಹುದು. ಪ್ರಜ್ಞೆಯ ನಕಾರಾತ್ಮಕ ಸ್ಥಿತಿಯಲ್ಲಿರುವ ವ್ಯಕ್ತಿ ಸಕಾರಾತ್ಮಕ ಸ್ಥಿತಿಗೆ ಹೋಗಬಹುದು. ಇದನ್ನು ಸಾಧಿಸಲು ಹಿಂದೂಧರ್ಮವು ನಮಗೆ ನೀಡಿರುವ ಹಲವಾರು ಸಾಧನಗಳಲ್ಲಿ ಓಂಕಾರ ಮಂತ್ರವನ್ನು ಜಪಿಸುವುದು  ಒಂದಾಗಿದೆ.

ಗುರುದೇವರು ತಮ್ಮ Merging with Sivaಗ್ರಂಥದಲ್ಲಿ ಬೇರೊಂದೆಡೆ ಹೀಗೆ ಸೂಚಿಸಿದ್ದಾರೆ: “ಸಾಮಾನ್ಯವಾಗಿ ಜನರು ಸಮಸ್ಯೆಗಳೊಂದಿಗೆ ಸಂಬಂಧ ಕಲ್ಪಿಸಿಕೊಂಡು, ಅವು ತಮಗೇ ಅನ್ವಯಿಸಿದೆಯೋ ಎಂಬಂತೆ ಭಾವಿಸುತ್ತಾರೆ. ಕೋಪವನ್ನು ಅನುಭವಿಸಿದಾಗ, ಅವರು ಕುಪಿತಗೊಳ್ಳುತ್ತಾರೆ. ಹಾಗೆಯೇ ಆನಂದವನ್ನು ಅನುಭವಿಸಿದಾಗ, ಪರಮಾನಂದಗೊಳ್ಳುತ್ತಾರೆ. ಮೋಕ್ಷಾಕಾಂಕ್ಷಿ ಅನುಭವದ ಬದಲು ಅನುಭವ ಪಡೆದವರೊಡನೆ ಸಂಬಂಧ ಕಲ್ಪಿಸಿಕೊಳ್ಳುತ್ತಾನೆ. ಅವನು ತನ್ನನ್ನು ಮನಸ್ಸಿನಲ್ಲಿ ಪಯಣಿಸುವ ಶುದ್ಧ ಪ್ರಜ್ಞೆಯೆಂದು ಭಾವಿಸುತ್ತಾನೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವಾಗ, ಅವನು ಸ್ಯಾನ್ ಫ್ರಾನ್ಸಿಸ್ಕೋ ಆಗಿರುವುದಿಲ್ಲ. ಅದೇ ರೀತಿ,  ಕೋಪಗೊಂಡಾಗ, ಅವನು ಸ್ವಯಂ ಕೋಪವೇ ಆಗುವುದಿಲ್ಲ. ‘ನಾನು ಶುದ್ಧ ಚೈತನ್ಯ. ಮನಸ್ಸು ಮತ್ತು ದೇಹದಲ್ಲಿ ಪ್ರವಹಿಸುವ ಆಧ್ಯಾತ್ಮಿಕ ಶಕ್ತಿಯೂ ನಾನೇ. ನಾನು ಶರೀರವಲ್ಲ, ಮನಸ್ಸಲ್ಲ ಅಥವಾ ಭಾವನೆಗಳಲ್ಲ. ನನ್ನಲ್ಲಿ ಮೂಡುವ  ಆಲೋಚನೆಗಳು ನಾನಲ್ಲ ಅಥವಾ ನಾನು ಅನುಭವಿಸುವ ಅನುಭವಗಳೂ ನಾನಲ್ಲ’ ಎಂದು ಅವನು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾನೆ. ಹೀಗೆ, ಅವನು ತಾನು ಮನಸ್ಸಿನಲ್ಲಿ ಎಲ್ಲಿಗೆ ಬೇಕಾದರೂ ಪಯಣಿಸಬಲ್ಲ ಸ್ವತಂತ್ರ ಜೀವಿ ಎಂದು ತನಗೆ ಹೊಸ ಸ್ವರೂಪ ಕೊಟ್ಟುಕೊಳ್ಳುತ್ತಾನೆ. ಇಂತಹ ವ್ಯಕ್ತಿ ಯಾವಾಗಲೂ ಪರಾಕಾಷ್ಠೆಯಲ್ಲಿ ಇರುತ್ತಾನೆ. 

“ನಾವು ಯಾರೆಂಬ ಈ ಕಲ್ಪನೆಯನ್ನು ನಾವು ಪರಿಶೀಲಿಸಬೇಕು. ನಮ್ಮ ಬಗ್ಗೆ ನಮಗೆ ಸಂಪೂರ್ಣ ತೃಪ್ತಿ ಉಂಟಾದಾಗ, ‘ನಾನು’ ಪದದ ಅರ್ಥ ಬದಲಾಗುತ್ತದೆ. ಇನ್ನು ಮುಂದೆ ‘ನಾನು’ ಎಂದರೆ ನನ್ನ ಶರೀರ ಎಂಬ ಅರ್ಥವಾಗುವುದಿಲ್ಲ. ‘ನಾನು’ ಎಂದರೆ ಚೈತನ್ಯ, ಪ್ರಜ್ಞೆ ಮತ್ತು ಇಚ್ಛಾಶಕ್ತಿ ಎಂದು ಅರ್ಥವಾಗುತ್ತದೆ. ಬಹುಬೇಗ ನಾವು ಶರೀರದಲ್ಲಿ ನೆಲಸಿದ್ದೇವೆ, ಆದರೆ ನಾವೇ ಆ ಶರೀರವಲ್ಲ ಎಂಬ ಸಂಪೂರ್ಣ ಸತ್ಯವನ್ನು ಅರಿಯುತ್ತೇವೆ. ‘ನಾನು’ ಎಂಬ ಪದವನ್ನು ಪರೀಕ್ಷಿಸಿ, ಅದು ನಿಮಗೆ ಯಾವ ರೀತಿ ಅರ್ಥವಾಗಿದೆ ಎಂಬುದನ್ನು ಪ್ರಾಮಾಣಿಕವಾಗಿ ನಿರ್ಧರಿಸಿಕೊಳ್ಳಿ.”