|
English
|

ಇಂದಿನ ದಿನಗಳಲ್ಲಿ ಬಹುಮಟ್ಟಿಗೆ ಪ್ರತಿಯೊಬ್ಬರೂ ಹೆಚ್ಚುತ್ತಿರುವ ಬದುಕಿನ ತೀವ್ರತೆಯ ಸೆಳೆತಕ್ಕೆ ಒಳಗಾಗಿದ್ದಾರೆ. ಬದುಕಿನಲ್ಲಿ ಸಮತೋಲನವನ್ನು ಸಾಧಿಸಲು ಬೇಕಾದ ಕೆಲವು ಸಾಧನಗಳು ಇಲ್ಲಿವೆ.

ವಿಶ್ವದಲ್ಲಿನ ಬಹುಪಾಲು ಜನರಂತೆ ತಮ್ಮ ಪ್ರತಿನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಸತತ ಒತ್ತಡದಿಂದಾಗಿ ಭಾವೋದ್ವೇಗಕ್ಕೊಳಗಾಗಿ ತಳಮಳಗೊಂಡಿರುವ, ಹಾಗೂ ಮಾನಸಿಕವಾಗಿ ಉದ್ರೇಕಗೊಂಡಿರುವ ಹಿಂದೂಗಳನ್ನು ನಾನು ನಿಯಮಿತವಾಗಿ ಕಾಣುತ್ತಿರುತ್ತೇನೆ. ವಿಶೇಷವಾಗಿ ಪತಿ ಪತ್ನಿಯರಿಬ್ಬರೂ ವಿಶೇಷ ಕೌಶಲದ ವೃತ್ತಿಯನ್ನು ಅವಲಂಬಿಸಿರುವಾಗ, ಕಾರ್ಯಕ್ಷೇತ್ರದಲ್ಲಿ ಅವರು ಸುದೀರ್ಘ ಕಾಲದವರೆಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂಬ ನಿರೀಕ್ಷೆ ಅವರ ಧಣಿಗೆ ಇದ್ದಾಗ, ಇದು ಸಾಮಾನ್ಯ. ಇದೇ ಸಂದರ್ಭದಲ್ಲಿ ಅವರು ಇಬ್ಬರು ಮೂವರು ಮಕ್ಕಳನ್ನೂ ಬೆಳೆಸುತ್ತಿರುವುದು ಅಪರೂಪವಲ್ಲ. ನೌಕರಿ ಹಾಗೂ ಕುಟುಂಬದ ಪ್ರತಿನಿತ್ಯದ ಒತ್ತಡವನ್ನುಇಪ್ಪತ್ನಾಲ್ಕು ಗಂಟೆಗಳ ಒಂದು ದಿನದಲ್ಲಿ ಹೊಂದುವುದು ವಾಸ್ತವಿಕವಾಗಿ ಕಷ್ಟವಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಹಲವಾರು ವರ್ಷಗಳ ಕಾಲ ಪ್ರತಿನಿತ್ಯವೂ ಬಹಳ ಕೆಲಸ ಮಾಡಬೇಕಾಗಿ ಬಂದಾಗ, ಪ್ರಬಲ ಮಾನಸಿಕ ಒತ್ತಡ ಉಂಟಾಗುತ್ತದೆ.

ಕೆಲವೊಂದು ಬಗೆಯ ಮಾನಸಿಕ ಒತ್ತಡಗಳು ತಮ್ಮಷ್ಟಕ್ಕೆ ತಾವೇ ಸರಿಹೋಗುತ್ತವೆ. ಕೆಲಸದಿಂದ ತೆಗೆದುಹಾಕಲ್ಫಟ್ಟರೆ, ಆ ಪರಿಸ್ಠಿತಿಯಲ್ಲಿ ಕೆಲವೊಂದು ತಿಂಗಳ ಕಾಲ ಇದ್ದನಂತರ ಮಾಸಿಕ ಆದಾಯ ಇಲ್ಲದಿರುವ ಒತ್ತಡ ಉಂಟಾಗುತ್ತದೆ. ಹೊಸದೊಂದು ಕೆಲಸ ದೊರೆತೊಡನೆ ಆ ಒತ್ತಡ ತನಗೆ ತಾನೇ ಮಾಯವಾಗುತ್ತದೆ. ಚಂಡಮಾರುತ ನಮ್ಮ ಮನೆಯನ್ನು ನಿರ್ನಾಮಗೊಳಿಸುತ್ತದೆ. ತಕ್ಷಣವೇ ತೀವ್ರ ಒತ್ತಡ ಉಂಟಾಗುತ್ತದೆ. ಆದರೆ ಹೊಸ ಮನೆಯೊಂದನ್ನು ನಿರ್ಮಿಸಿದೊಡನೆ ಅದು ತಾನಾಗಿ ಕರಗಿಹೋಗುತ್ತದೆ. ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಎಡೆಬಿಡದ ನಿರ್ಬಂಧಗಳು ಬೇರೊಂದು ಬಗೆಯ – ಯಾವುದರಿಂದಲೂ ನಿವಾರಿಸಲಾಗದ ಒತ್ತಡವನ್ನು ಮೂಡಿಸುತ್ತವೆ. ದೀರ್ಘಕಾಲದ ಇಂಥ ಮಾನಸಿಕ ಒತ್ತಡವನ್ನು ಎದುರಿಸುವಾಗ, ಅದನ್ನು ನಿವಾರಿಸಿಕೊಳ್ಳಲು ಮಾರ್ಗ ಹುಡುಕುವುದು ಬುದ್ಧಿವಂತಿಕೆ ಹಾಗೂ ಆರೋಗ್ಯಕರ.

ನನ್ನ ಗುರು, ಶಿವಾಯ ಸುಬ್ರಮುನಿಯಸ್ವಾಮಿ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಹಲವಾರು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಮೊದಲನೆಯದು ಉಸಿರಾಟದ ಮೇಲೆ ಹತೋಟಿ. ಜಾಗೃತಾವಸ್ಠೆಯಲ್ಲಿರುವಾಗ (ಬಾಹ್ಯ ಪ್ರಪಂಚ) ಪ್ರಜ್ಞೆಯ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗಿಯ ಗುರಿ. ಜಾಗೃತಾವಸ್ಠೆಯಲ್ಲಿರುವಾಗ ತಾನು ಪ್ರಜ್ಞಾವಂತನಾಗಿದ್ದೇನೆ ಹಾಗೂ ಪಂಚಭೂತಗಳು ತನ್ನನ್ನು ಆಳುತ್ತಿವೆ ಎಂಬುದನ್ನು ಅರಿತಾಗ, ಮೋಕ್ಷಾಕಾಂಕ್ಷಿ ತನ್ನ ಪ್ರಜ್ಞೆಯನ್ನು ಹಲವು ರೀತಿಗಳಲ್ಲಿ ಜಾಗೃತ ಮನಸ್ಸಿನಲ್ಲಿಯೇ ನಿಯಂತ್ರಿಸುತ್ತಾನೆ. ಉಸಿರಾಟದ ಮೇಲೆ ಹತೋಟಿ ಸಾಧಿಸುವುದು ಒಂದು ರೀತಿ. ಉಸಿರಾಟವೇ ಜೀವನ ಹಾಗೂ ಜೀವನವೇ ಉಸಿರಾಟ. ಉಸಿರಾಟ ಪ್ರಜ್ಞಾವಂತ ಅವಸ್ಥೆಯ ನಿಯಂತ್ರಣ ಶಕ್ತಿಯೂ ಆಗಿದೆ. ಪ್ರಜ್ಞೆ ಉಸಿರಾಟವನ್ನೇ ಅವಲಂಬಿಸಿದೆ. ಉಸಿರಾಟ ನಮ್ಮ ಮನೋಬಲದ ಮೇಲೆಯೂ ನಿಯಂತ್ರಣ ಪಡೆದಿದೆ. ಜ್ಞಾನೋದಯವನ್ನು ಹೊಂದುವ ಮಾರ್ಗದಲ್ಲಿ ಮುಂದುವರೆಯಲು ಸಾಧಕ ತನ್ನ ಸಂಕಲ್ಪಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಮಾರ್ಗ ಅದೆಷ್ಟೇ ಕಷ್ಟಕರವೆಂದು ತೋರಿದರೂ, ಎಡವಿ ಬೀಳದೆ, ಮುಗ್ಗರಿಸದೆ ಮುಂದೆ ಸಾಗಬೇಕು.

ಉಸಿರಾಟ ನಡೆಸುವಾಗ ಹೊಟ್ಟೆಯವರೆಗೂ ಆಳವಾಗಿ ಉಸಿರಾಡಬೇಕು, ಕೇವಲ ಎದೆಯವರೆಗೂ ಅಲ್ಲ ಎನ್ನುವುದು ಮೂಲ ನಿಯಮ. ಇದು ಉಸಿರಾಟದ ನೈಸರ್ಗಿಕ ವಿಧಾನ. ಎಳೆಯ ಮಕ್ಕಳು ಉಸಿರಾಡುವುದೂ ಹೀಗೆಯೇ. ನಾವು ಬದುಕಿನ ಸೆಳೆತಕ್ಕೆ ಸಿಲುಕಿದಾಗ, ನಮ್ಮ ವಪೆ ಬಿಗಿದುಕೊಳ್ಳುತ್ತದೆ ಹಾಗೂ ನಾವು ಉಸಿರಾಡುವಾಗ ನಮ್ಮ ಎದೆಯನ್ನು ಹಿಗ್ಗಿಸುತ್ತೇವೆ.

ಸೌರ ನರಮಂಡಲದ ಅಡಿಯಲ್ಲಿ ಪಕ್ಕೆಲುಬುಗಳು ಬೇರ್ಪಡುವ ಸ್ಥಳದಲ್ಲಿ ವಪೆಯನ್ನು ಮುಟ್ಟಿ ನೋಡಬಹುದು. ಅದನ್ನು ಗುರುತಿಸಲು ವಪೆಯ ಮೇಲೆ ನಿಮ್ಮ ಬೆರಳ ತುದಿಗಳನ್ನು ಇರಿಸಿ, ಕೆಮ್ಮಿ. ನಿಮ್ಮ ಬೆರಳು ವಪೆಯ ಮೇಲೆಯೇ ಇದ್ದರೆ, ಕೆಮ್ಮುವಾಗ ನಿಮ್ಮ ಬೆರಳುಗಳು ನೆಗೆಯುತ್ತವೆ. ಆಳವಾಗಿ ಉಸಿರಾಡುವುದನ್ನು ಸುಲಭವಾಗಿ ಕಲಿಯಲು ನೆಲದ ಮೇಲೆ ಮಲಗಿ ಹೊಟ್ಟೆಯ ಮೇಲೆ ಒಂದು ಪುಸ್ತಕವನ್ನು ಇರಿಸಿಕೊಳ್ಳಿ. ಆರಾಮವಾಗಿ ನೀವು ಉಸಿರನ್ನು ಎಳೆದುಕೊಂಡರೆ, ವಪೆ ಕೆಳಗೆ ಹೊಟ್ಟೆಯ ಕಡೆಗೆ ವಿಸ್ತಾರಗೊಂಡು, ಪುಸ್ತಕ ಮೇಲೇರುತ್ತದೆ. ನೀವು ಉಸಿರನ್ನು ಬಿಟ್ಟಾಗ, ವಪೆ ಸಂಪೂರ್ಣ ಸಡಿಲಗೊಂಡು ಪುಸ್ತಕ ತನ್ನ ಆರಂಭದ ಸ್ಥಾನಕ್ಕೆ ಮರಳಿಬರುತ್ತದೆ. ಈ

ರೀತಿ ಉದ್ವಿಗ್ನತೆ ದೂರವಾಗಿ, ಒತ್ತಡ ಕಡಿಮೆಯಾಗುತ್ತದೆ. ಗುರುದೇವರು ಈ ಬಗ್ಗೆ ಹೀಗೆಂದು ಹೇಳಿದ್ದಾರೆ: “ಆಳವಾದ ಉಸಿರಾಟದಿಂದ ನರಗಳ ಸೆಳೆತ ಶಾಂತಗೊಂಡ ಅನುಭವ ನಿಮಗೆ ಉಂಟಾಗುತ್ತದೆ. ನಿರಾಶೆಗೊಳ್ಳಲು ಸಾಧ್ಯವಿಲ್ಲ. ಮನೋವಿಶ್ಲೇಷಣ ಮಾಡದೆ ನಿಮ್ಮೆಲ್ಲ ಸಮಸ್ಯೆ, ತೊಂದರೆ ಹಾಗೂ ಭೀತಿಗಳನ್ನೆಲ್ಲ, ಆಂತರಿಕ ಜ್ಞಾನದ ಮಹಾ ಭವನದಲ್ಲಿ, ನಿಮ್ಮೊಳಗಿನ ಮಹಾ ಶೂನ್ಯದಲ್ಲಿ ಅಂತರ್ಗತ ಮಾಡಿಕೊಳ್ಳಲು ಸಾಧ್ಯವಿದೆ.”

ವಪೆಯವರೆಗೂ ಆಳವಾಗಿ ಉಸಿರಾಡುವ ವಿದ್ಯೆಯನ್ನು ಕರಗತ ಮಾಡಿಕೊಂಡೊಡನೆ, ನೀವು ಅದನ್ನು ನೆಟ್ಟಗೆ ಕುಳಿತಿರುವಾಗ, ಕುರ್ಚಿಯಲ್ಲಿ ಕುಳಿತಿರುವಾಗ, ಅಥವಾ ನಡೆಯುತ್ತಿರುವಾಗಲೂ ಅಭ್ಯಾಸ ಮಾಡಬಹುದು. ವಿರಮಿಸಬೇಕಾದಾಗ, ಪ್ರಮುಖವಾದ ಸಭೆ ನಡೆಸುವ ಅಥವಾ ಪರೀಕ್ಷೆಗೆ ಮುನ್ನ (ಮತ್ತು ನಡೆಯುತ್ತಿರುವಾಗ), ಒಂದು ನಿಮಿಷ ವಪೆಯವರೆಗೂ ಆಳವಾಗಿ ಉಸಿರಾಡಿ.

ಸತತ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮಾಡುವ ಮತ್ತೊಂದು ವಿಧಾನವಾದ ಯೋಗಾಭ್ಯಾಸದಲ್ಲೂ ಉಸಿರಾಟವೇ ಪ್ರಧಾನ. ನೆಲದ ಮೇಲೆ ಅಥವಾ ಯಾವುದಾದರೂ ಚಪ್ಪಟೆಯಾದ, ಬಲವಾದ ಹಲಗೆಯ ಮೇಲೆ ಮಲಗಿಕೊಳ್ಳಿ. ಕೈಗಳನ್ನು ನಿಮ್ಮ ಬದಿಯಲ್ಲಿ ಚಾಚಿಕೊಂಡು, ಒಮ್ಮೆ ಆಳವಾಗಿ ಉಸಿರಾಡಿ. ಎಲ್ಲ ಯೋಚನೆ ಹಾಗೂ ಉದ್ವಿಗ್ನತೆಗಳನ್ನೂ ದೂರಮಾಡಿ ವಿರಮಿಸಬೇಕೆಂದು ನಿಮ್ಮ ಶರೀರ ಹಾಗೂ ಮನಸ್ಸುಗಳಿಗೆ ಆದೇಶ ನೀಡಿ. ಎಲ್ಲ ಕೋಟಲೆಗಳಿಂದ, ದಿನನಿತ್ಯದ ಜಂಜಾಟಗಳಿಂದ ಮೇಲೇರಿ, ಮೋಡವೊಂದರ ಮೇಲೆ ತೇಲಾಡುತ್ತಿರುವಂತೆ ಕಲ್ಪಿಸಿಕೊಳ್ಳಿ. ಕಣ್ಣುಗಳನ್ನು ಮುಚ್ಚಿಕೊಂಡು ವಪೆಯವರೆಗೂ ಆಳವಾಗಿ ಉಸಿರೆಳೆದುಕೊಂಡು, ನಿಮ್ಮ ಸೌರ ನರಮಂಡಲವನ್ನು ನಿಮ್ಮ ಶರೀರ ಹಾಗೂ ಮನಸ್ಸುಗಳನ್ನು ಚೈತನ್ಯದಿಂದ ತುಂಬುವ ಪ್ರಬಲವಾದ ಬೆಳಕು ಪ್ರವೇಶಿಸುತ್ತಿದೆಯೆಂದು ಚಿತ್ರಿಸಿಕೊಳ್ಳಿ. ಉಸಿರು ಬಿಡುವಾಗ, ಈ ಚೇತನದ ಬೆಳಕು ಸೌರ ನರಮಂಡಲದಿಂದ ಹೊರಬಂದು, ನಿಮ್ಮ ಇಡೀ ಶರೀರದಲ್ಲಿ ಪಸರಿಸುತ್ತಿದೆಯೆಂದೂ, ಅದು ನಿಮ್ಮ ಎಲ್ಲ ಚಿಂತೆ ಹಾಗೂ ಉದ್ವಿಗ್ನತೆಗಳನ್ನೂ ಹೊಡೆದೋಡಿಸುತ್ತಿದೆಯೆಂದೂ ಚಿತ್ರಿಸಿಕೊಳ್ಳಿ. ಇದನ್ನು ಐದು ನಿಮಿಷಗಳ ಕಾಲ ಪುನರಾವರ್ತಿಸಿ. ಶರೀರ ವಿರಮಿಸಿದಂತೆ ಮನಸ್ಸೂ ವಿರಮಿಸುತ್ತದೆ, ಆಗ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಗುರುದೇವರು ಬರೆಯುತ್ತಾರೆ: “ಜನರು ತಮ್ಮ ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಲ್ಲರೋ ಅಷ್ಟರಮಟ್ಟಿಗೆ ಜಗತ್ತಿನ ಉದ್ವಿಗ್ನತೆಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಈ ನಿಯಂತ್ರಣದಲ್ಲಿ ಅವರು ಆ ಕ್ಷಣದ ಅನಂತತೆಯಲ್ಲಿ ಕಂಡುಬಂದ ತಮ್ಮ ಆಂತರಿಕ ಭದ್ರತೆಯ ಬಲವನ್ನು ಆಶ್ರಯಿಸುವ ಸಾಮರ್ಥ್ಯ ಪಡೆದಿರುತ್ತಾರೆ. ಆ ಕ್ಷಣದಲ್ಲಿ ನಿಮ್ಮ ಆಂತರಿಕ ಸಾಮರ್ಥ್ಯ ಗೋಚರವಾಗುತ್ತದೆ. ಆದ್ದರಿಂದ, ದೈಹಿಕವಾಗಿ ಕೊಂಚ ಆಯಾಸಗೊಂಡಿರುವಾಗ, ಧೈರ್ಯಗುಂದಿರುವಾಗ, ತಳಮಳಗೊಂಡಿರುವಾಗ ಯೋಗಾಭ್ಯಾಸ ಮಾಡಿ. ಅದೇ ಅದಕ್ಕೆ ಸೂಕ್ತ ಕಾಲ, ನಿಮಗೆ ಸಮಯ ದೊರೆತಾಗ ಅಲ್ಲ.

ಪ್ರತಿದಿನ ಮುಂಜಾನೆ ಕೊಂಚ ಕಾಲ ಆಧ್ಯಾತ್ಮಿಕ/ಧಾರ್ಮಿಕ ಕ್ರಿಯೆಗಳಲ್ಲಿ ತೊಡಗುವುದು ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಇರುವ ಮೂರನೆಯ ವಿಧಾನ. ಗುರುದೇವರು ಇದನ್ನು ಪ್ರತಿನಿತ್ಯದ ವ್ರತವೆಂದು ಕರೆದು, ಅದರ ಬಗ್ಗೆ ಹೀಗೆಂದು ಹೇಳಿದ್ದಾರೆ: “ಶ್ರದ್ಧಾವಂತ ಹಿಂದೂಗಳು ಪ್ರತಿದಿನವೂ ಸಾಮಾನ್ಯವಾಗಿ ಅರುಣೋದಯದ ಸಮಯದಲ್ಲಿ ಸಂಧ್ಯಾವಂದನೆಯನ್ನು ಆಚರಿಸುತ್ತಾರೆ. ಪೂಜೆ, ಜಪ, ಸ್ತೋತ್ರಪಠನ, ಗಾಯನ, ಹಠಯೋಗ, ಧ್ಯಾನ ಹಾಗೂ ಧರ್ಮಗ್ರಂಥ ಪಾರಾಯಣವನ್ನು ನಡೆಸಲಾಗುವ ಈ ಪಾವನವಾದ ಸಮಯ ವೈಯಕ್ತಿಕ ಬದುಕಿನ ಬುನಾದಿಯಾಗಿದೆ.” ಪ್ರತಿದಿನ ಮುಂಜಾನೆ ಸಂಧ್ಯಾವಂದನೆಯನ್ನು ನಡೆಸುವುದರಿಂದ ನಮಗೆ ಏಕಾಗ್ರತೆ ಮೂಡುತ್ತದೆ, ಆ ದಿನವನ್ನು ಎದುರಿಸಲು ಬೇಕಾದ ಧಾರ್ಮಿಕ ಭಾವನೆ ಹೆಚ್ಚುತ್ತದೆ.

ನಾನು ಪ್ರತಿನಿತ್ಯದ ಅಭ್ಯಾಸಕ್ಕಾಗಿ ನನ್ನ ಜನವರಿ/ಫೆಬ್ರುವರಿ/ಮಾರ್ಚ್ ೨೦೧೪ರ್ ಪಬ್ಲಿಷರ್ಸ್ ಡೆಸ್ಕಿನಲ್ಲಿ “೧೦ ನಿಮಿಷಗಳ ಧಾರ್ಮಿಕ ಅಭ್ಯಾಸ” ಎಂಬ ತಲೆಬರಹದಲ್ಲಿ ಸರಳವಾದ ಒಂದು ರೂಪರೇಖೆಯನ್ನು ಸಿದ್ಧಪಡಿಸಿದೆ. ಅದನ್ನು ಇಂದಿನ ಅವಿಶ್ರಾಂತರಾಗಿ ಕಾರ್ಯನಿರತರಾಗಿ, ಆತ್ಮಾವಲೋಕನಕ್ಕೆ ಕಿಂಚಿತ್ ಸಮಯ ಪಡೆದವರು, ಅಥವಾ ಸಮಯವೇ ಇಲ್ಲದವರು ಪ್ರತಿನಿತ್ಯ ಅನುಸರಿಸಲೆಂದು ಸಂಕ್ಷೇಪಗೊಳಿಸಲಾಗಿದೆ. ಈಗ ಅದು ಸಂನ್ಯಾಸಿಗಳು ವಿವಿಧ ಶ್ಲೋಕಗಳು, ಅನುಷ್ಠಾನಗಳೊಡನೆ ರೂಪಿಸಿರುವ, “ಆಧ್ಯಾತ್ಮಿಕ ಅಭ್ಯಾಸ” ಎಂಬ ಹೆಸರಿನ ಉಚಿತ ಮೊಬೈಲ್ ಅಪ್(app) ಆಗಿ ದೊರೆಯುತ್ತದೆ.

ನಿರ್ದಿಷ್ಟ ಶಾರೀರಕ ವಿನ್ಯಾಸಗಳು, ಆಸನಗಳನ್ನು ನಿಶ್ಚಿತ ಸೂತ್ರಕ್ರಮದ ಪ್ರಕಾರ ಹಾಗೂ ಕ್ರಮಬದ್ಧವಾದ ಉಸಿರಾಟದೊಡನೆ ಮಾಡುವ ಯೋಗ ಪದ್ಧತಿಯಾದ ’ಹಠಯೋಗ’ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ನಾಲ್ಕನೆಯ ವಿಧಾನ. ಶಾರೀರಕ ವಿನ್ಯಾಸಗಳ ವ್ಯಾಪ್ತಿ ಸರಳದಿಂದ ಕಷ್ಟಕರದವರೆಗೂ ವ್ಯಾಪಿಸಿರುತ್ತದೆ. ದೀರ್ಘಕಾಲದ ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಸರಳವಾದ