ಭಾರತೀಯ ಧರ್ಮಶಾಸ್ತ್ರದಲ್ಲಿ ದೇವರನ್ನು ಪ್ರೀತಿಸುವುದರಿಂದ (ಪ್ರತ್ಯೇಕವೆಂದು ಭಾವಿಸಿ) ದೇವರೊಡನೆ ಸ್ವಯಂ ತಾದಾತ್ಮ್ಯದ ಅನುಭವದವರೆಗೆ ಉತ್ತಮವಾಗಿ ನಿರೂಪಿಸಲಾಗಿದೆ. 

ಸದ್ಗುರು ಬೋಧಿನಾಥ ವೇಲನ್ ಸ್ವಾಮಿ  

ಪಾಶ್ಚಿಮಾತ್ಯ ದೂರದರ್ಶನ ಕಾರ್ಯಕ್ರಮಗಳಲ್ಲಿ ದೇವರ ಉಲ್ಲೇಖಗಳು ಅಪರೂಪ. ಆದರೂ ದೇವರನ್ನು ಕುರಿತು ಮಾತನಾಡುವಾಗ ಸಾಮಾನ್ಯವಾಗಿ “ದೇವರು ನಿನ್ನನ್ನು ಪ್ರೀತಿಸುತ್ತಾನೆ” ಎಂಬ ಪ್ರತಿಪಾದನೆಯನ್ನು ಮಾಡಲಾಗುತ್ತದೆ. ಇದು ದೇವರ ಬಗೆಗಿನ ಸಮಕಾಲೀನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ವಾಸ್ತವವಾಗಿ, ಬದುಕಿನ ಸವಾಲುಗಳ ನಡುವೆ, ದೇವರು ನಿಮ್ಮ ಜವಾಬ್ದಾರಿ ಹೊರುತ್ತಾನೆ ಎಂಬ ನೆಮ್ಮದಿ ಉಂಟುಮಾಡುವ ನೈತಿಕ ದೃಷ್ಠಿಯ ಮೂಲತತ್ವವನ್ನು ನೆನಪಿಸಿಕೊಳ್ಳುವುದು ಭರವಸೆಯನ್ನು ಮೂಡಿಸುತ್ತದೆ.        

ಹಿಂದೂ ತತ್ತ್ವಶಾಸ್ತ್ರದಲ್ಲಿ, “ದೇವರು ನಿನ್ನನ್ನು ಪ್ರೀತಿಸುತ್ತಾನೆ” ಎಂಬ ಕಲ್ಪನೆ ಸೂಚಿತವಾಗಿದ್ದರೂ, ಆಳವಾದ ಸೂಕ್ಷ್ಮ ತರ್ಕದಿಂದ ಕೂಡಿದೆ. “ನೀವು ದೇವರನ್ನು ಪ್ರೀತಿಸುತ್ತೀರಿ” ಮತ್ತು “ಪ್ರೀತಿಯೇ ದೇವರು ” ಎಂಬುದಕ್ಕೆ ಬಲವಾದ ಒತ್ತು ಇದೆ. ಈ ಕಿಂಚಿತ್ ವಿಭಿನ್ನ ರೀತಿಯ ಗಮನದ ಕೇಂದ್ರೀಕರಣ ದೇವರ ಬಗೆಗಿನ ಪ್ರೀತಿಯನ್ನು ಬೆಳೆಸಲು ಮತ್ತು ಉತ್ಕಟಗೊಳಿಸಲು ಭಕ್ತನ ಪ್ರಾಮಾಣಿಕ ಪ್ರಯತ್ನವನ್ನು ಪ್ರಚೋದಿಸುತ್ತದೆ.   

ದೇವರ ಮೇಲಿನ ಪ್ರೀತಿಯನ್ನು ಗಾಢವಾಗಿಸುವುದನ್ನು ಹೆಚ್ಚು ವಿವರವಾಗಿ ನೋಡುವ ಮೊದಲು, ಎರಡನೆಯ ಹಿಂದೂ ಪರಿಕಲ್ಪನೆಯಾದ ನಂಬಿಕೆಯತ್ತ ನಾವೀಗ ಮೊದಲು ಗಮನ ಕೊಡೋಣ. ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಾವು ದೇವರನ್ನು ನಂಬುವುದಿಲ್ಲ ಮತ್ತು ಧರ್ಮದೊಂದಿಗೆ ಸಂಬಂಧ ಹೊಂದುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಹದಿಹರೆಯದ ಹುಡುಗಿಯೊಬ್ಬಳು “ನಾನು ಕಟ್ಟು ಕಥೆಗಳನ್ನು ನಂಬುವ ವಯಸ್ಸನ್ನು ದಾಟಿದ್ದೇನೆ” ಎಂದು ಧೈರ್ಯದಿಂದ ಘೋಷಿಸುವುದನ್ನು ಚಿತ್ರಿಸುವ ವೆಬ್‌(web)ನಲ್ಲಿನ ಜನಪ್ರಿಯ ಪೋಸ್ಟರ್ ಈ ಭಾವನೆಯನ್ನು ವ್ಯಕ್ತಪಡಿಸುತ್ತದೆ.

ಪಾಶ್ಚಾತ್ಯ ಚಿಂತನೆ ಯಾವಾಗಲೂ ಅಲ್ಲದಿದ್ದರೂ, ಧಾರ್ಮಿಕ ನಂಬಿಕೆಯನ್ನು ದೇವರು ಮತ್ತು ಧಾರ್ಮಿಕ ಸಿದ್ಧಾಂತಗಳಲ್ಲಿ ಪ್ರಶ್ನಾತೀತ ಶ್ರದ್ಧೆ ಎಂದು ವ್ಯಾಖ್ಯಾನಿಸುತ್ತದೆ, ಇದು ವೆಬ್‌ಸ್ಟರ್ ನಿಘಂಟಿನ ದೃಷ್ಟಿಕೋನಕ್ಕೆ ಸರಿಹೊಂದುತ್ತದೆ. ಇದಕ್ಕೆ ವಿರುದ್ಧವಾಗಿ, ನಂಬಿಕೆಯ ಹಿಂದೂ ಅಭಿವ್ಯಕ್ತಿ ಸೈದ್ಧಾಂತಿಕ ನಿಷ್ಠೆಗೆ ಅತೀತವಾಗಿದೆ. ಹಿಂದೂ ಧರ್ಮದಲ್ಲಿ ನಂಬಿಕೆ ಹಾಗೂ ಶ್ರದ್ಧೆಗಳೆರಡೂ ಒಂದೇ ಅಲ್ಲ; ಇದು ಸ್ಥಿರವಾದ ಪರಿಸ್ಥಿತಿಯೂ ಅಲ್ಲ. ಬದಲಿಗೆ, ಇದು ವೈಯಕ್ತಿಕ ಅನುಭವ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮೂಲಕ ನಿರಂತರವಾಗಿ ತೀವ್ರವಾಗುತ್ತದೆ. ಆರಂಭದಲ್ಲಿ ಸ್ಪಷ್ಟವಾದ ಪುರಾವೆಗಳಿಲ್ಲದೆ ಸ್ವೀಕರಿಸಲ್ಪಟ್ಟ ಸನಾತನ ಧರ್ಮದ ಆಧ್ಯಾತ್ಮಿಕ ಸತ್ಯಗಳು ವೈಯಕ್ತಿಕ ಅನುಭವಗಳ ಮೂಲಕ ಅಂತಿಮ ಮೌಲ್ಯೀಕರಣವನ್ನು ಕಂಡುಕೊಳ್ಳುತ್ತವೆ. ಚಿನ್ಮಯ ಮಿಷನ್‌ನ ಸ್ಥಾಪಕರಾದ ಸ್ವಾಮಿ ಚಿನ್ಮಯಾನಂದರು ಈ ಕಲ್ಪನೆಯನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಿದ್ದಾರೆ – “ನಂಬಿಕೆ ಎಂದರೆ ನೀವು ನೋಡದದನ್ನು ನಂಬುವುದು. ನೀವು ನಂಬಿದ್ದನ್ನು ನೋಡುವುದೇ ನಂಬಿಕೆಯ ಪ್ರತಿಫಲ.” 

ದೇವರ ಮೇಲಿನ ಪ್ರೀತಿಯನ್ನು ತೀವ್ರಗೊಳಿಸುವ ಹಿಂದೂ ಗುರಿಯು ಭಕ್ತಿ ಯೋಗದ ಸಂಪ್ರದಾಯದಲ್ಲಿ ಸ್ಪಷ್ಟ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಇದು ವಿಭಿನ್ನ ಸಂಬಂಧಗಳ ಮೂಲಕ ದೇವರ ಮೇಲಿನ ಪ್ರೀತಿಯ ವಿಕಾಸದ ಹಂತಗಳನ್ನು ಚಿತ್ರಿಸುತ್ತದೆ. ಈ ಹಂತಗಳು ಅನೇಕ ಸಂಪ್ರದಾಯಗಳಲ್ಲಿ ಸ್ವಲ್ಪಮಟ್ಟಿನ  ಬದಲಾವಣೆಗಳೊಡನೆ ಕಂಡುಬರುತ್ತವೆ. ಉದಾಹರಣೆಗೆ, ವೈಷ್ಣವ ಸಂಪ್ರದಾಯವು ಭಕ್ತಿಯ ಐದು ಪ್ರಾಥಮಿಕ ದೃಷ್ಟಿಗಳನ್ನು ಅಥವಾ ಭಾವಗಳನ್ನು ಗುರುತಿಸುತ್ತದೆ:

ಶಾಂತಿ (ಶಾಂತ ಭಾವ): ಆತ್ಮವು ದೇವರ ಸನ್ನಿಧಿಯಲ್ಲಿ ತೃಪ್ತಿಯನ್ನು ಅನುಭವಿಸುತ್ತದೆ. 

ಸೇವೆ (ದಾಸ್ಯ ಭಾವ): ಆತ್ಮವು ಭಗವಂತನೊಡನೆ ಒಡೆಯನಿಗೆ ಸೇವೆ ಸಲ್ಲಿಸುವ ಸೇವಕನ ಪಾತ್ರದಲ್ಲಿ ತೊಡಗುತ್ತದೆ. ಸ್ನೇಹ (ಸಖ್ಯ ಭಾವ): ಆತ್ಮವು ಸ್ನೇಹಿತನಂತೆ ದೇವರೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತದೆ. 

ಪೋಷಕ (ವಾತ್ಸಲ್ಯ ಭಾವ): ಆತ್ಮವು ಭಗವಂತನೊಡನೆ ಪೋಷಕರಿಗೆ ಮಗುವಿನ ಮೇಲಿರುವ ಪ್ರೀತಿಯ ಸಂಬಂಧವನ್ನು ತಾಳುತ್ತದೆ. 

ಪ್ರೀತಿ (ಮಾಧುರ್ಯ ಭಾವ): ಆತ್ಮವು ಭಗವಂತನನ್ನು ಪ್ರಿಯತಮನೆಂದು ಭಾವಿಸಿ ದೇವರೊಡನೆ ಮಧುರವಾದ ತಾದಾತ್ಮ್ಯವನ್ನು ಅನುಭವಿಸುತ್ತದೆ.

ನಿರ್ಣಾಯಕವಾದ ವಿಚಾರಣೆ ಶಾಂತ ಭಾವದಿಂದ ಮಾಧುರ್ಯ ಭಾವಕ್ಕೆ ಕ್ರಮೇಣ ಪರಿವರ್ತನೆಗೊಳ್ಳುವ ಮೂಲಕ ದೇವರ ಮೇಲಿನ ಭಕ್ತಿಯನ್ನು  ಹೆಚ್ಚಿಸುವುದು ಹೇಗೆ ಎಂಬುದನ್ನು ಕೇಂದ್ರವಾಗಿ ಇರಿಸಿಕೊಳ್ಳುತ್ತದೆ. ಭಕ್ತಿ, ಕರ್ಮ, ರಾಜ ಮತ್ತು ಜ್ಞಾನದ ಯೋಗಗಳು ಅದರ ನಾಲ್ಕು ಪ್ರಾಥಮಿಕ ಹಂತಗಳು ಅಥವಾ ವಿಧಾನಗಳಾಗಿವೆ. ಅಪೇಕ್ಷಿತ ಭಾವ ಪ್ರಗತಿ ಹೊಂದಲು ಅವುಗಳ ಪ್ರಸ್ತುತತೆಯನ್ನು ಗಮನದಲ್ಲಿಟ್ಟುಕೊಂಡು ಒಂದೊಂದನ್ನಾಗಿ ಪರಿಶೀಲಿಸೋಣ. 

ದೇವರ ಮೇಲಿನ ಪ್ರೀತಿಯನ್ನು ಆಳವಾಗಿಸಲು ಪ್ರಯತ್ನಿಸುವಾಗ, ಮೊದಲು ಭಕ್ತಿ ಯೋಗದ ಬಗ್ಗೆ ಯೋಚಿಸುವುದು ಸಹಜ. ಇದು ದೇವಾಲಯದಲ್ಲಿ ಪ್ರಾತಿನಿಧಿಕವಾಗಿ ಮಾಡಲಾಗುವ ಆದರೆ ಪ್ರತ್ಯೇಕವಾಗಿ ಅಲ್ಲದ ಹಲವಾರು ಭಕ್ತಿ ಆಚರಣೆಗಳನ್ನು ಒಳಗೊಂಡಿದೆ. ದೇವಾಲಯವು ದೇವರು ತನ್ನ ಸೂಕ್ಷ್ಮ ಶರೀರದಲ್ಲಿ ದೇವರ ಮೂರ್ತಿಯ ಸುತ್ತ ಮುತ್ತ ಸುಳಿದಾಡುವ ವಿಶೇಷವಾದ ಪವಿತ್ರ ಸ್ಥಳವಾಗಿದೆ. ಈ ಕಲ್ಪನೆಯ ಬಗ್ಗೆ ಸ್ವಾಮಿ ಭಾಸ್ಕರಾನಂದರು ಹೀಗೆ ಹೇಳುತ್ತಾರೆ: “ಮೂರ್ತಿಯು ವಿಗ್ರಹವಲ್ಲ ಆದರೆ ದೇವರ ಆಯ್ಕೆಯ ಅಂಶದ ಪವಿತ್ರೀಕರಿಸಲ್ಪಟ್ಟ ಪ್ರತೀಕ. ಆರಾಧಕ ವಾಸ್ತವವಾಗಿಯೂ ವಿಗ್ರಹದಲ್ಲಿ ದೇವರು ಇದ್ದಾನೆ ಎಂದು ನಂಬುತ್ತಾನೆ. ಹೀಗಾಗಿ ವಿಗ್ರಹ ಪರಮಾತ್ಮನೊಂದಿಗೆ ಸಂವಹನ ಮಾಡುವ ಮಾರ್ಗವಾಗುತ್ತದೆ.”(The Essentials of Hinduism).   

ಭಕ್ತಿ ಯೋಗ ಅಭ್ಯಾಸದಲ್ಲಿ ಈ ಕೆಳಗಿನ ಏಳು ವಿಧಾನಗಳು ಸೇರಿವೆ-

ಶ್ರವಣ: ದೇವರ ಕಥೆಗಳನ್ನು ಕೇಳುವುದು; 

ಕೀರ್ತನೆ: ಭಕ್ತಿಗೀತೆಗಳು ಮತ್ತು ಹಾಡುಗಳನ್ನು ಹಾಡುವುದು; 

ಸ್ಮರಣೆ: ಪರಮಾತ್ಮನ ಉಪಸ್ಥಿತಿ ಮತ್ತು ದೇವರನಾಮವನ್ನು ನೆನಪಿಸಿಕೊಳ್ಳುವುದು; 

ಪಾದ-ಸೇವನೆ: ಮಾನವೀಯತೆಯ ಸೇವೆಯನ್ನು ಒಳಗೊಂಡಂತೆ ಭಗವಂತನ ಪವಿತ್ರ ಪಾದಗಳಿಗೆ ಸೇವೆ ಸಲ್ಲಿಸುವುದು;  

ಅರ್ಚನೆ: ದೇವಸ್ಥಾನದಲ್ಲಿ ಧಾರ್ಮಿಕ ಪೂಜೆಗೆ ಹಾಜರಾಗುವುದು, ಮನೆಯ ಪೂಜಾಗೃಹದಲ್ಲಿ ಪೂಜೆ                      ನಡೆಸುವುದು ಅಥವಾ ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಾಗಿರುವುದು; 

ವಂದನೆ: ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು; 

ಆತ್ಮ ನಿವೇದನೆ: ಸಂಪೂರ್ಣ ಶರಣಾಗತಿ ಮಾಡುವುದು.  

ಭಕ್ತಿ ಯೋಗದ ಮೂಲಕ ನಾವು ದೇವರಲ್ಲಿ  ಪ್ರೀತಿಯನ್ನು ಮತ್ತು ಸ್ವಾರ್ಥರಹಿತ ಪ್ರವೃತ್ತಿ ಮತ್ತು ನಿಷ್ಕಳಂಕತೆಯನ್ನು ಬೆಳೆಸಿಕೊಳ್ಳುತ್ತೇವೆ, ಇದು ಕ್ರಮೇಣ ಆತ್ಮಾಪವರಣಕ್ಕೆ ಮತ್ತು ದೇವರಲ್ಲಿ ಸಂಪೂರ್ಣ ಶರಣಾಗತಿಗೆ ದಾರಿಮಾಡಿಕೊಡುತ್ತದೆ.

ಕರ್ಮ ಯೋಗ ಅಥವಾ ಸೇವೆ ಎಂದರೆ ಸ್ವಾರ್ಥರಹಿತವಾದ ಸೇವೆ. ಸೇವೆಯನ್ನು ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮೊದಲು ಆರಂಭಿಸಲಾಗುತ್ತದೆ. ಅಲ್ಲಿ ಭಕ್ತ ನೆಲವನ್ನು ಸ್ವಚ್ಛಗೊಳಿಸುವುದು, ದೀಪಗಳನ್ನು ಒರೆಸುವುದು, ಹೂಮಾಲೆಗಳನ್ನು ಕಟ್ಟುವುದು ಮತ್ತು ಇತರ ಭಕ್ತರಿಗೆ ಅಡುಗೆ ಮಾಡುವುದು ಮತ್ತು ಆಹಾರವನ್ನು ಬಡಿಸುವುದು ಮುಂತಾದ ಸರಳ ಕಾರ್ಯಗಳನ್ನು ಮಾಡುತ್ತಾನೆ. ಅಂತಹ ಎಲ್ಲಾ ಕ್ರಿಯೆಗಳನ್ನು ಮನ್ನಣೆ ದೊರೆಯುವ ಉದ್ದೇಶದಿಂದ ಅಥವಾ ಪ್ರತಿಫಲದ ಬಗ್ಗೆ ಯೋಚಿಸದೆ ಮಾಡಬೇಕು. ಕೆಲಸದ ಪರಿಸರದಲ್ಲಿ ಅಥವಾ ಶಾಲೆಯಲ್ಲಿ ಸೇವೆ ಸಲ್ಲಿಸುವುದನ್ನು ವಿಸ್ತರಿಸಬಹುದು. ಅಲ್ಲಿ ನಾವು ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಬೇಕು ಮತ್ತು ಪರಿಸ್ಥಿತಿ ನಮ್ಮಿಂದ ನಿರೀಕ್ಷಿಸುವುದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಬಹುದು. ಎಲ್ಲಾ ಜೀವಿಗಳನ್ನು ಭಗವಂತನ ಜೀವಂತ ಅಭಿವ್ಯಕ್ತಿಗಳೆಂದು ಭಾವಿಸಿ ಸೇವೆ ಸಲ್ಲಿಸುವುದರ ಮೂಲಕ ದೇವರನ್ನು ಪೂಜಿಸುವುದು ಎಂದು ಇದನ್ನು ಪರಿಗಣಿಸಬಹುದು. 2001ರ ಗುಜರಾತ್ ಭೂಕಂಪದ ನಂತರ BAPS ನ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ತಮ್ಮ ಅನುಯಾಯಿಗಳಿಗೆ ಹೀಗೆಂದು ಸಲಹೆ ನೀಡಿದರು: “ಕಷ್ಟ ಮತ್ತು ದುಃಖಗಳನ್ನು ಎದುರಿಸುತ್ತಿರುವ ಜನರನ್ನು ಸಂತೈಸುವುದು ನಮ್ಮ ಭಾರತೀಯ ಸಂಪ್ರದಾಯವಾಗಿದೆ. ದೀನದಲಿತರಿಗೆ ಸೇವೆ ಸಲ್ಲಿಸುವ ಮೂಲಕ ಭಗವಂತನ ಸೇವೆ ಮಾಡುತ್ತೇವೆ ಎಂದು ನಾವು ಭಾವಿಸುತ್ತೇವೆ.       

ಇನ್ನೂ ಕಷ್ಟಕರವಾದ ವಿಧಾನದಲ್ಲಿ, ಮಹಾನ್ ಬೋಧಕರು ದೇವರನ್ನು ತಲುಪುವ ಗುರಿಯೊಂದಿಗೆ ಎಲ್ಲ ಕೆಲಸಗಳನ್ನು ಮಾಡುವಂತೆ ಹೇಳುತ್ತಾರೆ. ದೇವರನ್ನು ತಲುಪುವ ಗುರಿಯೊಂದಿಗೆ ನಮ್ಮ ಕೆಲಸವನ್ನು ನಿರ್ವಹಿಸುವುದರಿಂದ ಸ್ವಾಭಾವಿಕವಾಗಿ ಪ್ರತಿಯೊಂದು ಕಾರ್ಯವೂ ಭಗವಂತನಿಗೆ ಅರ್ಪಣೆ ಎಂಬ ದೃಷ್ಟಿಕೋನವನ್ನು ಹೊಂದಲು ಕಾರಣವಾಗುತ್ತದೆ. ಶ್ರೇಷ್ಠವಾದುದರಿಂದ ಹಿಡಿದು ಕೆಳಮಟ್ಟದವರೆಗಿನ ಪ್ರತಿಯೊಂದು ಕಾರ್ಯವೂ ಪವಿತ್ರ ವಿಧಿಯಾಗುತ್ತದೆ. “ಕಾಯಕವೇ ಕೈಲಾಸ.” ಸರಳವಾದ, ಮನೆಗೆಲಸಗಳನ್ನು ಸಹ ಈ ಶ್ರದ್ಧೆಯಿಂದ ಮಾಡಬೇಕು. ನನ್ನ ಪರಮಗುರು ಯೋಗಸ್ವಾಮಿಯವರು ಒಮ್ಮೆ ತಮ್ಮ ಗುಡಿಸಲಿನ ಹೊರಗೆ ಶೌಚಾಲಯವನ್ನು ಶುಚಿಗೊಳಿಸುತ್ತಿದ್ದ ಒಬ್ಬ ಕಾರ್ಮಿಕನೊಂದಿಗೆ ಮಾತನಾಡಿದರು: “ಓ ರಾಮಸ್ವಾಮಿ! ಅಲ್ಲಿ ಶಿವಪೂಜೆ (ದೇವರ ಪೂಜೆ) ಮಾಡುತ್ತಿದ್ದೀರಾ?”   

ಈ ರೀತಿ ಇಡೀ ಜೀವನ ಪವಿತ್ರವಾಗುತ್ತದೆ ಮತ್ತು ಲೌಕಿಕ ಮತ್ತು ಆಧ್ಯಾತ್ಮಿಕ ನಡುವಿನ ಸಂಘರ್ಷವು ಮರೆಯಾಗುತ್ತದೆ. ಕರ್ಮ ಯೋಗ ಅಂತಿಮವಾಗಿ ಬ್ರಹ್ಮಾಂಡವೇ ಭಗವಂತನ ಆಟವೆಂಬ ಸಾಕ್ಷಾತ್ಕಾರಕ್ಕೆ  ಕಾರಣವಾಗಬಹುದು. ಈ ಒಳನೋಟ ಕೇವಲ ಕರ್ಮ ಫಲವನ್ನು ತ್ಯಜಿಸುವ ದೃಷ್ಟಿಕೋನವನ್ನು ಮಾತ್ರವಲ್ಲ,  ನಾನೇ ಆ ಕರ್ಮದ ಕರ್ತೃ ಎಂಬ ಭಾವನೆಯನ್ನು ಸಹ ತ್ಯಜಿಸುವಂತೆ ಮಾಡುತ್ತದೆ. ಸೇವೆಯ ಪ್ರತಿಯೊಂದು ಕಾರ್ಯವೂ ಭಗವಂತನಿಗೆ ಅರ್ಪಣೆಯಾಗುತ್ತದೆ ಮತ್ತು ಶ್ರೇಷ್ಠವಾದುದರಿಂದ ಹಿಡಿದು ಕೆಳಮಟ್ಟದವರೆಗಿನ ಪ್ರತಿಯೊಂದು ಕಾರ್ಯವೂ ಪವಿತ್ರ ವಿಧಿಯಾಗುತ್ತದೆ. ಕರ್ಮಯೋಗದ ಅಭ್ಯಾಸಗಳ ಮೂಲಕ  ದೇವರಲ್ಲಿನ ಭಕ್ತನ ಪ್ರೀತಿ ಸ್ವಾಭಾವಿಕವಾಗಿ ಗಾಢವಾಗುತ್ತದೆ.    

ಭಕ್ತಿ ಯೋಗ ಮತ್ತು ಕರ್ಮ ಯೋಗ ಎರಡರಲ್ಲೂ, ಭಕ್ತನು ಸಂಸ್ಕೃತದಲ್ಲಿ ಈಶ್ವರ ಎಂದು ಕರೆಯಲ್ಪಡುವ ದೇವರ ಸಾಕಾರದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ, ಮುಂದಿನ ಎರಡು ಯೋಗಗಳಾದ ರಾಜ ಯೋಗ ಮತ್ತು ಜ್ಞಾನ ಯೋಗಗಳು ಸರ್ವವ್ಯಾಪಿ ಪ್ರಜ್ಞೆ ಮತ್ತು ಅದರ ಅತೀಂದ್ರಿಯ ಮೂಲವಾಗಿರುವ ದೇವರ ನಿರಾಕಾರ ಅಂಶಗಳನ್ನು ಒತ್ತಿಹೇಳುತ್ತವೆ. ಸಂಸ್ಕೃತದಲ್ಲಿ, ಈ ಅಂಶಗಳನ್ನು ಕ್ರಮವಾಗಿ ಸಚ್ಚಿದಾನಂದ ಮತ್ತು ಪರಬ್ರಹ್ಮನ್ ಎಂದು ಉಲ್ಲೇಖಿಸಲಾಗುತ್ತದೆ. 

ಭಕ್ತಿ ಮತ್ತು ಕರ್ಮ ಯೋಗದ ಅಭ್ಯಾಸಗಳು ಪರಿಪೂರ್ಣವಾದಾಗ, ಸ್ವಾಭಾವಿಕವಾಗಿ ಅನ್ವೇಷಕನನ್ನು ಹಿಂದೂ ಧರ್ಮದ ಧ್ಯಾನದ ಅಭ್ಯಾಸಗಳಿಗೆ  ಕರೆದೊಯ್ಯುತ್ತವೆ. ಇವುಗಳು ರಾಜಯೋಗದ ಹಂತಗಳಾದ ಉಸಿರಾಟದ ನಿಯಂತ್ರಣ, ಶಕ್ತಿಯನ್ನು ಹಿಂತೆಗೆದುಕೊಳ್ಳುವುದು ಮತ್ತು ಏಕಾಗ್ರತೆಗಳಿಂದ  ಆರಂಭವಾಗಿ, ಹೆಚ್ಚು ತೀವ್ರವಾಗುತ್ತಾ ಧ್ಯಾನ ಮತ್ತು ಚಿಂತನೆಯನ್ನು ತಲಪುತ್ತದೆ. ಚಿಂತನೆಯ ಅತ್ಯಂತ ತೀವ್ರವಾದ ಅನುಭವವೆಂದರೆ ಶುದ್ಧ ಪ್ರಜ್ಞೆ ಅಥವಾ ಸಚ್ಚಿದಾನಂದದೊಡನೆ ಒಂದಾಗುವುದು. ಅದಕ್ಕಿಂತಲೂ ತೀವ್ರವಾದುದೆಂದರೆ -ಚಿಂತನೆಗೆ ಮೀರಿದ-ಅಲೌಕಿಕವಾದ ವಾಸ್ತವತೆಯ ಅನುಭವ (ಪರಬ್ರಹ್ಮನ್).   

ಜ್ಞಾನ ಯೋಗವು ಸಂಪೂರ್ಣ ಜ್ಞಾನೋದಯವಾದ ವ್ಯಕ್ತಿಯ ಅಥವಾ ಜ್ಞಾನಿಯ ಗೂಢಾರ್ಥದ ಆಧ್ಯಾತ್ಮಿಕ ಅಭ್ಯಾಸಗಳನ್ನು ವಿವರಿಸುತ್ತದೆ. ಸ್ವಾಮಿ ವಿವೇಕಾನಂದರಿಂದ ಜನಪ್ರಿಯಗೊಳಿಸಲ್ಪಟ್ಟ ಜ್ಞಾನ ಯೋಗದ ಪರ್ಯಾಯ ಅರ್ಥವು ಸತ್ಯಕ್ಕೆ ನಾಲ್ಕು ಪರ್ಯಾಯ ಮಾರ್ಗಗಳಲ್ಲಿ ಒಂದಾಗಿರುವ ವೈಚಾರಿಕತೆ ಪ್ರಾಧಾನ್ಯವಾದ ಧಾರ್ಮಿಕ ಅಧ್ಯಯನದ ಮೂಲಕ ಅರಿವಿನ ಅನ್ವೇಷಣೆಯಾಗಿದೆ. ಇತರ ಮೂರು ಮಾರ್ಗಗಳೆಂದರೆ: ಭಕ್ತಿ ಯೋಗ, ಕರ್ಮ ಯೋಗ ಮತ್ತು ರಾಜ ಯೋಗ. 

ಈ ಧ್ಯಾನ ವಿಧಾನಗಳು ಕರ್ಮ ಮತ್ತು ಭಕ್ತಿ ಯೋಗ ವಿಧಾನಗಳಲ್ಲಿ ಕಂಡುಬರದ ದೇವರ ಮೇಲಿನ ಪ್ರೀತಿಯ ಒಂದು ರೂಪಕ್ಕಾಗಿ ಸ್ಪರ್ಧಿಸುತ್ತಿವೆ. ಅವು ಭಗವಂತನ ಪ್ರೀತಿಯ ಸರ್ವವ್ಯಾಪಿ ಪ್ರಜ್ಞೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ. ಆ ಸ್ಥಿತಿಯನ್ನು ಅನುಭವಿಸುವಾಗ, ಪ್ರೀತಿಯೇ ದೇವರು ಮತ್ತು ನೀವು ಸಹ ಭಗವಂತನ ಪ್ರೀತಿಗೆ ಪಾತ್ರರಾದವರು. ಪರಮಗುರು ಯೋಗಸ್ವಾಮಿ ಅವರು ಯೋಗೇಂದ್ರ ದುರೈಸಾಮಿ ಎಂಬ ಯುವಕನಿಗೆ ಬರೆದ ಪತ್ರದಲ್ಲಿ ಭಗವಂತ ಪರಮಶಿವ, ನೀನು ಮತ್ತು ಪ್ರೀತಿ ಬೇರ್ಪಡಿಸಲಾಗದಂತೆ  ಐಕ್ಯಗೊಂಡಿವೆ ಎಂಬ ಈ ಭಾವನೆಯನ್ನು ಕಲಿಸಿದ್ದಾರೆ. “ನಾನು ನಿನ್ನೊಂದಿಗಿದ್ದೇನೆ ಮತ್ತು ನೀನು ನನ್ನೊಂದಿಗಿರುವೆ. ನಮ್ಮಿಬ್ಬರ ನಡುವೆ ಯಾವುದೇ ಅಂತರವಿಲ್ಲ. ನಾನೇ ನೀನು. ನೀನೇ ನಾನು. ಏಕೆ ಭಯಪಡಬೇಕು? ನೋಡು! ನಾನು ನಿನ್ನಂತೆ ಅಸ್ತಿತ್ವ ಪಡೆದಿದ್ದೇನೆ. ಹಾಗಾದರೆ ನೀನು ಏನು ಮಾಡಬೇಕು? ನೀನು ಪ್ರೀತಿಸಬೇಕು. ಯಾರನ್ನು? ಎಲ್ಲರನ್ನೂ ಪ್ರೀತಿಸಬೇಕು. ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ, ನಿನ್ನ ಸ್ವಭಾವವೇ ಪ್ರೀತಿ. ನೀನು ಮಾತ್ರವಲ್ಲ, ಎಲ್ಲರೂ ಪ್ರೀತಿಯಿಂದ ಆವೃತರಾಗಿದ್ದಾರೆ. ಆದರೆ ‘ಎಲ್ಲರೂ’ ಅಲ್ಲ, ಏಕೆಂದರೆ ನೀನು ಮಾತ್ರ ಅಸ್ತಿತ್ವ ಹೊಂದಿರುವೆ. ನೀನೇ ಎಲ್ಲರೂ ಆಗಿರುವೆ!”   

ಐದನೇ ಪ್ರೀತಿ ಭಾವದಲ್ಲಿ ದೇವರು ನಿಮ್ಮ ಪ್ರೀತಿಪಾತ್ರನಾದ ಪ್ರಿಯತಮ. ಆಧ್ಯಾತ್ಮಿಕವಾಗಿ ಇದು ನಿಮ್ಮ ಮತ್ತು ದೇವರ ನಡುವೆ ಏಕತೆ ಇದೆ ಎಂಬ ಗಹನವಾದ ಅರ್ಥವನ್ನು ಹೊಂದಿದೆ, ನಿಮ್ಮ ಆತ್ಮದ ಬೇರ್ಪಡಿಸಲಾಗದ ಏಕತೆಯ ಸಾರ ಮತ್ತು ಎಲ್ಲೆಡೆಯೂ ಕಾಣುತ್ತಿರುವ ದೇವರ, ರಾಜ ಅಥವಾ ಜ್ಞಾನ ಯೋಗದ ಮೂಲಕ ಅನುಭವಿಸಬಹುದಾದ ಇಂದ್ರಿಯಾತೀತ ಮೂಲವಾಗಿದೆ. ಅತ್ಯುನ್ನತ ಸಾಧನೆಯಲ್ಲಿ, ದೇವರು, “ನಾನು” ಮತ್ತು ಪ್ರೀತಿ ಎಲ್ಲ ಒಂದೇ ಆಗಿದೆ.