Read this article in:
Kannada |

English |
Gujarati |
Hindi |
Marathi |
Russian |
Spanish |
Tamil

ಹಿಂದೂಧರ್ಮದ ವೈಶಿಷ್ಟ್ಯವೆಂದರೆ, ಪ್ರತಿಯೊಬ್ಬರೂ ಪೂಜಾರಿಯಾಗಿ ತಮ್ಮದೇ ಆದ ದೇವಾಲಯದ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳಬಹುದು. ಆ ದೇವಾಲಯ ನಿಮ್ಮ ದೇವರಮನೆ, ನೀವು ಅಲ್ಲಿ ಪ್ರತಿನಿತ್ಯ ಪೂಜೆ ನಡೆಸಿ, ಅದನ್ನು ಪುಟ್ಟ ಮಂದಿರವನ್ನಾಗಿಸಬಹುದು ಇಲ್ಲವೇ ಆಧ್ಯಾತ್ಮೀಕರಿಸಬಹುದು. ದೇವರಮನೆ ಪ್ರತ್ಯೇಕ ಕೊಠಡಿಯಾಗಿದ್ದು, ಪೂಜೆ ಮತ್ತು ಧ್ಯಾನಗಳಿಗೇ ಮೀಸಲಾಗಿದ್ದರೆ, ಪ್ರಾಪಂಚಿಕ ಮಾತುಕತೆ ಹಾಗೂ ಇತರ ಚಟುವಟಿಕೆಗಳಿಂದ ಅದರ ಪರಿಶುದ್ಧತೆಗೆ ಭಂಗ ಬಾರದಿದ್ದರೆ, ಈ ಪ್ರಕ್ರಿಯೆ ಅತ್ಯುತ್ತಮವಾಗಿ ಸಾಗುತ್ತದೆ. ಹೀಗಿರುವುದು ಆದರ್ಶಪ್ರಾಯ. ಅದು ಸಾಧ್ಯವಿಲ್ಲವಾದರೆ, ಮಾಡ ಅಥವಾ ಕಪಾಟಿನ ಬದಲಿಗೆ ಕೊಠಡಿಯೊಂದರ ಪ್ರಶಾಂತವಾದ ಮೂಲೆಯನ್ನು ನಿಮ್ಮ ದೇವರಮನೆಯನ್ನಾಗಿ ಮಾಡಿಕೊಳ್ಳಿ. ದೇವರಮನೆಯನ್ನು ಕುಟುಂಬದ ಎಲ್ಲ ಸದಸ್ಯರ ಆಶ್ರಯತಾಣವನ್ನಾಗಿಸಿ. ಅದು ಪ್ರಶಾಂತಿ ಹಾಗೂ ನೆಮ್ಮದಿಯಿಂದ ಕೂಡಿದ್ದು, ಕುಟುಂಬದ ಎಲ್ಲ ಸದಸ್ಯರು ಭಗವಂತನೊಡನೆ ಸಂಬಂಧ ಬೆಳೆಸಿ, ಪ್ರಾರ್ಥನೆ ಸಲ್ಲಿಸಿ, ಅವನ ಗುಣಗಾನ ಮಾಡಿ ತಮ್ಮ ವ್ಯಾವಹಾರಿಕ ಅಗತ್ಯಗಳನ್ನು ಸಮರ್ಪಿಸಬಹುದಾದ, ತಾಣವಾಗಲಿ.

ಕಾಂಚೀ ಕಾಮಕೋಟಿ ಪೀಠದ ದಿವಂಗತ ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸ್ವಾಮಿಗಳು ಮನೆಯಲ್ಲಿ ಪೂಜೆ ಮಾಡಬೇಕಾದುದರ ಅಗತ್ಯದ ಬಗ್ಗೆ ಹೀಗೆಂದು ಹೇಳಿಕೆ ನೀಡಿದ್ದಾರೆ: “ಪ್ರತಿಯೊಂದು ಕುಟುಂಬದವರೂ ಈಶ್ವರನಿಗೆ ಪೂಜೆ ಸಲ್ಲಿಸಬೇಕು. ಅನುಕೂಲ ಉಳ್ಳವರು ಸೂಕ್ತ ದೀಕ್ಷೆ ಪಡೆದನಂತರವೇ
ವಿಸ್ತೃತ ಆರಾಧನೆಯನ್ನು ನಡೆಸಬಹುದು. ಉಳಿದವರು ಹತ್ತು ನಿಮಿಷಗಳಿಗಿಂತ ಹೆಚ್ಚಿಲ್ಲದ ಸಂಕ್ಷಿಪ್ತ ಪೂಜೆ ಸಲ್ಲಿಸಬೇಕು. ಕಚೇರಿಗೆ ಹೋಗುವವರು ಈ ಸಂಕ್ಷಿಪ್ತ ಪೂಜೆಯನ್ನಾದರೂ ಮಾಡಲೇಬೇಕು. ಪ್ರತಿಯೊಂದು ಮನೆಯಲ್ಲೂ ಪವಿತ್ರ ಗಂಟೆ ಮೊಳಗಲೇಬೇಕು.”

ಮನೆಯ ದೇವರಮನೆಯಲ್ಲಿ ಪೂಜೆ ನಡೆಸುವ ನಮ್ಮ ಪ್ರಯತ್ನ ಹೇಗೆ ಸರಳವಾಗಿ ಆರಂಭವಾಗಿ, ಕ್ರಮೇಣ ಹೆಚ್ಚು ವಿಸ್ತಾರವಾಗಿ ಬೆಳೆಯಬಹುದೆಂಬುದನ್ನು ನಿರೂಪಿಸುವ ಒಂದು ಕಥೆ ಇಲ್ಲಿದೆ. ಶೇಖರನ ಕುಟುಂಬದವರ ಮನೆಯಲ್ಲಿ ಯಾವಾಗಲೂ ಒಂದು ದೇವರಮನೆ ಇರುತ್ತಿತ್ತು. ವರ್ಷಗಳು ಕಳೆದಂತೆ ಶೇಖರ ಕ್ರಮಬದ್ಧವಾಗಿ ಪೂಜೆ ಮಾಡುವುದನ್ನು ಹೆಚ್ಚು ಹೆಚ್ಚಾಗಿ ಕಲಿತುಕೊಂಡ. ಆರಂಭದಲ್ಲಿ ಗಣೇಶನ ಮುಂದೆ ಊದಿನಕಡ್ಡಿಯನ್ನು ಆಡಿಸಿ, ಸರಳವಾದ ಮಂತ್ರವೊಂದನ್ನು ಹೇಳುತ್ತಿದ್ದ. ಅನಂತರ ಕೆಲವೊಂದು ಶ್ಲೋಕಗಳನ್ನು ಕಲಿತುಕೊಂಡು, ಪೂಜೆಯ ಕೊನೆಯಲ್ಲಿ ಆರತಿ ಮಾಡತೊಡಗಿದ. ಕೊನೆಗೆ ಸಂಪೂರ್ಣ ಗಣೇಶ ಆತ್ಮಾರ್ಥ ಪೂಜೆ ಮಾಡುವುದನ್ನು ಕಲಿತು, ಈಗ ಪ್ರತಿದಿನವೂ ಮುಂಜಾನೆ ತಿಂಡಿ ತಿನ್ನುವ ಮೊದಲು ಪೂಜೆಯನ್ನು ಮಾಡುತ್ತಾನೆ. ಸಂಪೂರ್ಣ ಪೂಜೆಯನ್ನು ಮಾಡುವುದರಿಂದ ಅವನಿಗೆ ಬಹಳ ತೃಪ್ತಿಯ ಅನುಭವ ಉಂಟಾಗುತ್ತಿದೆ. ಕುಟುಂಬದವರೆಲ್ಲರನ್ನೂ ಅದು ಆಧ್ಯಾತ್ಮಿಕವಾಗಿ ಉನ್ನತಿಗೆ ಏರಿಸುತ್ತಿದೆ ಎಂಬುದನ್ನೂ ಅವನು ಗಮನಿಸಿದ್ದಾನೆ. (ಗಣೇಶ ಆತ್ಮಾರ್ಥ ಪೂಜೆಯ ಗ್ರಂಥಪಾಠ ಹಾಗೂ ಶ್ರಾವ್ಯ ಫೈಲುಗಳು ಇಲ್ಲಿ ದೊರೆಯುತ್ತವೆ – www.himalayanacademy.com/audio/chants/ganesha_puja/ )

ವೈಯಕ್ತಿಕ ಪೂಜೆಯ ಬಗ್ಗೆ:
ಹಿಂದೂಧರ್ಮದ ಆಚರಣೆ ಸಂಹಿತೆ, ಯಮ-ನಿಯಮಗಳು ಅಥವಾ ಪ್ರತಿಬಂಧನ ಮತ್ತು ಕರ್ಮಾನುಷ್ಠಾನಗಳು ಎಂದು ನಾವು ಕರೆಯುವ ವೈಯಕ್ತಿಕ ಪೂಜೆ ಒಂದು ಆಧಾರತತ್ತ್ವವಾಗಿದೆ. ಆದರೆ ಅನೇಕರಿಗೆ ಇದರ ಅರಿವಿಲ್ಲ. ಅಷ್ಟಾಂಗಯೋಗದ ಮೊದಲನೆಯ ಮತ್ತು ಎರಡನೆಯ ಕ್ರಮಗಳನ್ನು ಒಳಗೊಂಡಿರುವ ಈ ಸಂಹಿತೆ ಧ್ಯಾನದ ತಳಹದಿ ಎಂದು ಹಲವು ಬಾರಿ ಪರಿಗಣಿಸಲ್ಪಟ್ಟಿದೆ. ಹತ್ತು ನಿಯಮಗಳಲ್ಲಿ ಒಂದಾದ ಪೂಜೆ ಈಶ್ವರಪೂಜನ ಎಂದು ಪ್ರಸಿದ್ಧವಾಗಿದೆ. ನಮ್ಮ ಪರವಾಗಿ ಪೂಜಾರಿಯೊಬ್ಬರು ನಡೆಸುವ ಪೂಜಾವಿಧಿಗಳ ಬದಲಾಗಿ ಸ್ವಯಂ ನಾವೇ ನಮಗಾಗಿ ನಡೆಸುವ ಪೂಜೆಗೆ ಇದು ಅನ್ವಯವಾಗುತ್ತದೆ. ಮನೆಯ ದೇವರಮನೆಯಲ್ಲಿ ಕೇವಲ ಒಂದು ಹೂವನ್ನು ಭಗವಂತನಿಗೆ ಅರ್ಪಿಸುವುದರಿಂದ ಹಿಡಿದು ವಿಧಿವತ್ತಾದ ಸಂಪೂರ್ಣ ಪೂಜೆಯವರೆಗೆ ಇದರ ವ್ಯಾಪ್ತಿ ಇರಬಹುದು. ಆತ್ಮಾರ್ಥಪೂಜೆ ಎಂದು ಕರೆಯಲಾಗುವ, ಸಾಮಾನ್ಯ ವ್ಯಕ್ತಿ ನಡೆಸುವ ಈ ಪೂಜೆಯನ್ನು ವೈಯಕ್ತಿಕ ಪೂಜಾವಿಧಿ ಎಂದು ಪರಿಗಣಿಸಲಾಗುತ್ತದೆ. ಮಂದಿರದಲ್ಲಿ ಪೂಜಾರಿಯೊಬ್ಬರು ನಡೆಸುವ ಸಾರ್ವಕನಿಕ ಪೂಜೆಯನ್ನು ಪರಾರ್ಥ ಪೂಜೆ ಎಂದು ಕರೆಯಲಾಗುತ್ತದೆ. ಆತ್ಮಾರ್ಥಪೂಜೆಯನ್ನು ಮಾಡಿದನಂತರ ವಾಡಿಕೆಯಾಗಿ ಕೆಲವು ನಿಮಿಷಗಳ ಕಾಲ ಧ್ಯಾನದಲ್ಲಿ ಕುಳಿತು, ಆ ಕೊಠಡಿಯಲ್ಲಿ ಪೂಜೆಯಿಂದ ಮೂಡಿದ ಪರಿಷ್ಕೃತ ಭಾವನೆಯನ್ನು, ಪ್ರಾಣವನ್ನು ಆತ್ಮದ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಆಂತರಿಕ ಪೂಜೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪೂಜೆಯನ್ನು ಮಾಡುವುದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು.

ಕೆಲವು ಜನರು ಪೂಜೆ ಮಾಡಲು ಹೆದರುತ್ತಾರೆಂಬುದನ್ನು ನನ್ನ ಗುರುದೇವರು ಗಮನಿಸಿದ್ದರು. ಏಕೆ? ಜನರು ತಮಗೆ ಸಾಕಷ್ಟು ತರಬೇತಿ ಇಲ್ಲ, ಅಥವಾ ಮೂಲಭೂತ ಆಧ್ಯಾತ್ಮಿಕ ತತ್ತ್ವಗಳು ತಮಗೆ ಸರಿಯಾಗಿ ಅರ್ಥವಾಗುವುದಿಲ್ಲವೆಂದು ಭಾವಿಸುತ್ತಾರೆ. ಬಹಳ ಹಿಂದೂಗಳು ತಮ್ಮ ಪರವಾಗಿ ಪೂಜೆ ಮಾಡಲು ಹಾಗೂ ಧಾರ್ಮಿಕ ವ್ರತಾಚರಣೆಗಳನ್ನು ನಡೆಸಲು ಪುರೋಹಿತರನ್ನೇ ಅವಲಂಬಿಸುತ್ತಾರೆ. ಆದರೆ ಕಾಂಚೀ ಪೀಠದ ಮಹಾ ಸ್ವಾಮೀಜಿ ತಿಳಿಸಿದಂತೆ ದೇವ ದೇವತೆಯರ, ಭಗವಂತನ ಕೃಪೆಯನ್ನು ಪಡೆಯಲು ಸರಳವಾದ ಪೂಜೆಯನ್ನು ಯಾರು ಬೇಕಾದರೂ ನಡೆಸಬಹುದು ಎಂದು ಗುರುದೇವರು ತಿಳಿಸುತ್ತಾರೆ. ದೋಷರಹಿತ ಧಾರ್ಮಿಕ ವಿಧಿಗಳಿಗಿಂತ ಭಗವಂತನ ಮೇಲೆ ನಿಮಗೆ ಎಷ್ಟು ಪ್ರೀತಿ ಇದೆ ಎನ್ನುವುದೇ ಹೆಚ್ಚು ಮುಖ್ಯ. ಆತ್ಮಾರ್ಥ ಪೂಜೆಗಿಂತ ಹೆಚ್ಚು ಮುಂದುವರೆದ ಪೂಜೆಯನ್ನು ಮಾಡುವ ಆಸೆ ಇರುವವರು ಅರ್ಹ ಪುರೋಹಿತರಿಂದ ದೀಕ್ಷೆ ಎನ್ನುವ ಉಪದೇಶದ ಮೂಲಕ ತರಬೇತಿ ಹಾಗೂ ಅನುಮತಿಯನ್ನು ಪಡೆಯಬೇಕು.

ಆತ್ಮಾರ್ಥ ಪೂಜೆಯನ್ನು ನಡೆಸಲು ಗುರುದೇವರು ಒಂದು ಪ್ರಮುಖ ನಿರ್ಬಂಧವನ್ನು ವಿಧಿಸಿದ್ದಾರೆ. ಕ್ರೋಧಾವೇಶಕ್ಕೇನಾದರೂ ಒಳಗಾದರೆ, ಮೂವತ್ತೊಂದು ದಿನಗಳವರೆಗೆ ಆರಾಧನೆಯನ್ನು ಸಲ್ಲಿಸಬಾರದು. ಊದಿನಕಡ್ಡಿಯನ್ನು ತೋರಿಸಲು ಅನುಮತಿ ಇದೆ, ಆದರೆ ದೀಪಾರಾಧನೆ, ಪವಿತ್ರ ಗಂಟೆಯನ್ನು ಬಾರಿಸುವುದು ಅಥವಾ ಸರಳ ಓಂಕಾರದ ಹೊರತಾಗಿ ಬೇರಾವುದೇ ಮಂತ್ರಪಠನವನ್ನು ಮಾಡುವಂತಿಲ್ಲ.

ಕ್ರೋಧಾವೇಶಕ್ಕೆ ಒಳಗಾದ ವ್ಯಕ್ತಿ ದೇವರ ಅನುಗ್ರಹ ಪಡೆಯುವುದರ ಬದಲಾಗಿ ನಮಗೆ ಕೆಡುಕನ್ನು ಉಂಟುಮಾಡುವ ಬೇರೆ ಜಗತ್ತಿನ ಅಸುರರನ್ನು ಆಹ್ವಾನಿಸಬಹುದೆಂದು ತಿಳಿದೇ ಅವರು ಈ ನಿರ್ಬಂಧವನ್ನು ವಿಧಿಸಿದ್ದಾರೆ. ಮನೆಯನ್ನು ಪರಿಣಾಮಕಾರಿಯಾಗಿ ಆಧ್ಯಾತ್ಮೀಕರಿಸಲು ನಾವು ಕೋಪಗೊಳ್ಳುವುದು, ಬಿರುನುಡಿಗಳನ್ನು ಆಡುವುದನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕಾದ ಅಗತ್ಯವಿದೆ. ಉದಾಹರಣೆಗೆ ಜಟಿಲವಾದ ಚಿಕ್ಕ ತುಣುಕುಗಳನ್ನು ಸರಿಯಾಗಿ ಜೋಡಿಸಬೇಕೆಂದು ಇಟ್ಟುಕೊಳ್ಳೋಣ. ಪೂಜೆಯನ್ನು ಮಾಡುವುದು ಸಮಸ್ಯೆಯ ಹತ್ತು ತುಣುಕುಗಳನ್ನು ಸರಿಯಾಗಿ ಜೋಡಿಸುವುದಕ್ಕೆ ಸಮನಾದುದು. ಸ್ವಲ್ಪಮಟ್ಟಿನ ಕೋಪ ಐದು ತುಣುಕುಗಳನ್ನು ತೆಗೆದುಕೊಂಡು ಹೋಗುತ್ತದೆ, ಸಾಧಾರಣ ಬಿರುನುಡಿಗಳ ಬಳಕೆ ಐದು ತುಣುಕುಗಳನ್ನು ತೆಗೆದುಕೊಂಡು ಹೋಗುತ್ತದೆ ಮತ್ತು ಪ್ರಮುಖ ಬಯ್ಗುಳ ಇಪ್ಪತ್ತು ತುಣುಕುಗಳನ್ನು ತೆಗೆದುಕೊಂಡು ಹೋಗುತ್ತದೆ. ನಾವು ಕ್ರೋಧವನ್ನು ಹಾಗೂ ಬಿರುನುಡಿಗಳನ್ನು ಹತ್ತಿಕ್ಕದಿದ್ದರೆ, ಸಮಸ್ಯೆಯನ್ನು ಬಗೆಹರಿಸುವುದು ನಮ್ಮಿಂದ ಸಾಧ್ಯವಾಗುವುದಿಲ್ಲ. ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ನಾವು ಪದೇ ಪದೇ ಕೋಪಗೊಂಡರೆ, ಬಿರುನುಡಿಗಳನ್ನು ಆಡಿದರೆ, ನಮ್ಮ ಪ್ರಯತ್ನಗಳೆಲ್ಲ ಅನೂರ್ಜಿತಗೊಳ್ಳುತ್ತವೆ, ಮನೆಯನ್ನು ಆಧ್ಯಾತ್ಮೀಕರಿಸಲು ನಾವು ನಡೆಸುವ ಅತ್ಯಂತ ಪ್ರಾಮಾಣಿಕ ಪ್ರಯತ್ನಗಳು ಫಲಕಾರಿಯಾಗುವುದಿಲ್ಲ.

ರಕ್ಷಣಾ ದೇವತೆಗಳೊಡನೆ ಸಂಪರ್ಕ
ಎಲ್ಲ ಹಿಂದೂಗಳಿಗೂ ಇರುವ ರಕ್ಷಣಾ ದೇವತೆಗಳು ಅಂತರ್ಲೋಕ ನಿವಾಸಿಗಳಾಗಿ ಮಾರ್ಗದರ್ಶನ ನೀಡುತ್ತ, ಸಂರಕ್ಷಣೆ ಮಾಡುತ್ತಾ ಅವರನ್ನು ಕಾಪಾಡುತ್ತಾರೆ. ಕಣ್ಣುಗಳಿಗೆ ಕಾಣಿಸದ ಇಂಥ ಚಿರಸ್ಥಾಯಿ ಅತಿಥಿಗಳ ತಾಣವೇ ದೇವರಮನೆ – ಇಡೀ ಕುಟುಂಬದವರು ಪ್ರವೇಶಿಸಿ, ನೆಲದ ಮೇಲೆ ಕುಳಿತು, ತಲೆಮಾರುಗಳ ಪರ್ಯಂತ ಕುಟುಂಬದವರನ್ನು ಕಾಪಾಡಲೆಂದೇ ಮೀಸಲಾಗಿರುವ ಈ ಸುಸಂಸ್ಕೃತ ಜೀವಿಗಳೊಡನೆ ಆಂತರಿಕವಾಗಿ ಸಂಪರ್ಕ ಹೊಂದಬಹುದಾದ ಕೊಠಡಿ. “ಮಲಗುವ ಮನೆಯಲ್ಲೋ , ಮಾಡ ಅಥವಾ ಕಪಾಟಿನಲ್ಲೋ ನಾಮಮಾತ್ರಕ್ಕೆ ದೇವರಮನೆಯನ್ನು ಮಾಡಿಕೊಂಡರೆ, ಈ ದೈವಿಕ ಶಕ್ತಿಗಳನ್ನು ಆಹ್ವಾನಿಸಲು ಸಾಧ್ಯವಿಲ್ಲ. ಗೌರವಾನ್ವಿತ ಅತಿಥಿಗಳನ್ನು ಯಾರೂ ಒಂದು ಗೂಡಿನಲ್ಲಿ ಇರಿಸಿ, ಅಥವಾ ಅಡುಗೆಯ ಮನೆಯಲ್ಲಿ ಮಲಗುವಂತೆ ಮಾಡಿ, ಆ ಅತಿಥಿ ತಮಗೆ ಉತ್ತಮ ಸ್ವಾಗತ ದೊರೆಯಿತೆಂದು, ಗೌರವ ಹಾಗೂ ಪ್ರೀತಿ ತೋರಲಾಯಿತೆಂದು ಭಾವಿಸಲಿ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಗುರುದೇವರು ತಿಳಿಸುತ್ತಾರೆ.

ದೇವರಮನೆ ಅತ್ಯಂತ ಸುಸಂಸ್ಕೃತ ಹಿಂದೂ ಮನೆಗಳ ಅವಿಭಾಜ್ಯ ಅಂಗವಾಗಿರುತ್ತದೆ. ಅದಕ್ಕಾಗಿಯೇ ವಿಶೇಷವಾಗಿ ಮೀಸಲಾದ ಕೊಠಡಿಯಲ್ಲಿ ದೇವರಮನೆಯನ್ನು ಸ್ಥಾಪಿಸಿ, ನಾವು ಪೂಜೆ ಮಾಡಲು, ಧರ್ಮಗ್ರಂಥಗಳನ್ನು ಓದಲು, ಸಾಧನೆ ಮಾಡಲು, ಭಜನೆಗಳನ್ನು ಹಾಡಲು ಹಾಗೂ ಜಪ ಮಾಡಲು ಮಂದಿರದಂಥ ವಾತಾವರಣವನ್ನು ಕಲ್ಪಿಸಿ, ಪಾಲಿಸಿಕೊಂಡು ಬರುತ್ತೇವೆ. ಈ ಪವಿತ್ರ ತಾಣ ಕುಟುಂಬದ ಸದಸ್ಯರ ಅನನ್ಯವಾದ ಆಶ್ರಯ ತಾಣ ಹಾಗೂ ಧ್ಯಾನ ಮಂದಿರವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ನಾವು ಪ್ರಪಂಚದಿಂದ ಹಿಂದಕ್ಕೆ ಸರಿದು, ಮಾನವಾತೀತ ಪ್ರಜ್ಞೆಯ ಸಾಕ್ಷಾತ್ಕಾರ ಮಾಡಿಕೊಳ್ಳಲು ನಮ್ಮ ಅಂತರಾಳವನ್ನು ಪ್ರವೇಶಿಸಲು ಸುರಕ್ಷಿತವಾದ ಕೊಠಡಿಯಾಗಿದೆ. ನಮ್ಮನ್ನು ನಾವೇ ಎದುರಿಸುವ, ನಾವು ಎಸಗಿದ ತಪ್ಪುಗಳನ್ನು ಬರೆದು, ಸುಟ್ಟುಹಾಕಿ, ಹೊಸ ತೀರ್ಮಾನಗಳನ್ನು ಕೈಗೊಳ್ಳುವ ಸ್ಥಳವಾಗಿದೆ. ನಮ್ಮ ಆಂತರಿಕ ಜ್ಞಾನದ ಬೆಳಕಿನಲ್ಲಿ, ನಮ್ಮ ರಕ್ಷಣಾ ದೇವತೆಗಳ ನೆರವಿನಿಂದ ತೊಂದರೆಗಳನ್ನು ಕೊನೆಗಾಣಿಸುವ ಸ್ಥಳವಾಗಿದೆ.

ನಿಯತವಾಗಿ – ವಾರಕ್ಕೆ ಒಂದು ಬಾರಿಯಾದರೂ, ಹಾಗೂ ವಿಶೇಷ ಹಬ್ಬ ಹರಿದಿನಗಳಲ್ಲಿ ದೇವಾಲಯಕ್ಕೆ ಹೋಗುವುದರಿಂದ, ನಿಮ್ಮ ಮನೆಯ ದೇವರಮನೆಯಲ್ಲಿನ ಅಲೌಕಿಕ ಪ್ರಭಾವವನ್ನು ಬಲಪಡಿಸಬಹುದು. ದೇವಾಲಯದಿಂದ ಮನೆಗೆ ಹಿಂದಿರುಗಿದನಂತರ ದೇವರಮನೆಯಲ್ಲಿ ತೈಲ ದೀಪವನ್ನು ಬೆಳಗುವುದರಿಂದ ದೇವಾಲಯದ ಧಾರ್ಮಿಕ ವಾತಾವರಣ ನಿಮ್ಮ ಮನೆಯನ್ನು ಪ್ರವೇಶಿಸುತ್ತದೆ. ಆಧ್ಯಾತ್ಮಿಕವಾಗಿ ಈ ಸರಳವಾದ ಕಾರ್ಯ ದೇವಾಲಯದಲ್ಲಿರುವ ದೇವರನ್ನು ನಿಮ್ಮ ದೇವರಮನೆಗೆ ಕರೆತರುತ್ತದೆ. ಅವರು ತಮ್ಮ ಆಂತರಿಕ ವಿಶ್ವದಿಂದ ಕುಟುಂಬದ ಸದಸ್ಯರನ್ನು ಆಶೀರ್ವದಿಸಿ, ಮನೆಯ ಧಾರ್ಮಿಕ ಸತ್ತ್ವಕ್ಷೇತ್ರವನ್ನು ಬಲಪಡಿಸಬಹುದು.

ಭಗವಂತ ಹಾಗೂ ದೇವತೆಗಳು ನೆಲಸಬಹುದಾದ ಪ್ರತ್ಯೇಕ ದೇವರಮನೆಯನ್ನು ಹೊಂದುವ ವಿಚಾರವನ್ನು ಗುರುದೇವರು ಮತ್ತೊಂದು ಹೆಜ್ಜೆ ಮುಂದಕ್ಕೆ ಒಯ್ಯುತ್ತಾರೆ. ಸುಸಂಸ್ಕೃತ ಹಾಗೂ ಶ್ರದ್ಧಾವಂತ ಹಿಂದೂಗಳು ತಮ್ಮ ಇಡಿಯ ಮನೆಯನ್ನೇ ದೇವರಿಗೆ ಸಮರ್ಪಿಸುತ್ತಾರೆ. “ನಿಮ್ಮ ಮನೆಯೂ ಆಗಿರುವ ದೇವರಮನೆಯಲ್ಲಿ ದೇವರೊಡನೆ ಬಾಳುವುದು ಮತ್ತು ನಿಯತವಾಗಿ ದೇವರ ಮಂದಿರಕ್ಕೆ ಹೋಗುವುದೇ ಈಶ್ವರಪೂಜನೆ, ಆರಾಧನೆಯ ಧ್ಯೇಯವಾಗಿದೆ. ಇದರಿಂದ ದೇವರನ್ನು ನಿಮ್ಮೊಳಗೇ ಕಂಡುಕೊಳ್ಳಲು ಬುನಾದಿ ಹಾಕಿದಂತಾಗುತ್ತದೆ. ದೈನಂದಿನ ಜೀವನದಲ್ಲಿ ದೇವರ ಮನೆಯಲ್ಲಿ ಭಗವಂತನೊಡನೆ ಅವನ ಸಂಗಾತಿಯಾಗಿ ಬಾಳದಿದ್ದರೆ, ದೇವರನ್ನು ಕಂಡುಕೊಳ್ಳುವುದು ಹೇಗೆ ಸಾಧ್ಯ? ಉತ್ತರ ಸ್ಪಷ್ಟವಾಗಿದೆ. ಅದು ಪ್ರಮುಖವಾಗಿ ಅಹಂಭಾವದ ಮೇಲೆ ಆಧಾರಿತವಾದ ಸೈದ್ಧಾಂತಿಕ ಪ್ರದರ್ಶನವಾಗುತ್ತದೆ.”

ಭಗವಂತ ತಮ್ಮ ಮನೆಯಲ್ಲಿ ನೆಲಸಿದ್ದಾನೆಂದು ನಂಬುವ ಹಿಂದೂಗಳು ಸಹಜವಾಗಿಯೇ ಅವನಿಗೆ ಗೌರವ ಸಲ್ಲಿಸಲು, ಅವನಿಗೆ ಆಹಾರವನ್ನು ಸಮರ್ಪಿಸಲು ಇಚ್ಛಿಸುತ್ತಾರೆ. ಅವರು ಪ್ರೀತಿಯಿಂದ ಭಗವಂತನ ಪಟದ ಮುಂದೆ ಆಹಾರವನ್ನಿರಿಸಿ, ದೇವರು ತಮ್ಮ ದೇವತಾಗಣದೊಡನೆ ತೃಪ್ತಿಯಾಗಿ ಊಟ ಮಾಡಲೆಂದು, ಬಾಗಿಲನ್ನು ಮುಂದೆ ಮಾಡಿಕೊಂಡು, ಅಲ್ಲಿಂದ ಹೊರಟುಬರುತ್ತಾರೆ. “ದೇವರು ಹಾಗೂ ದೇವತಾಗಣದವರು ಆಹಾರದಲ್ಲಿನ ಪ್ರಾಣ ಹಾಗೂ ಶಕ್ತಿಯನ್ನು ಹೀರಿಕೊಂಡು, ತೃಪ್ತಿಯಾಗಿ ಭೋಜನ ಮಾಡುತ್ತಾರೆ. ಅವರ ಭೋಜನ ಮುಗಿದನಂತರ, ದೇವರ ಎದುರು ಇರಿಸಲಾದ ತಟ್ಟೆಯನ್ನು ತೆಗೆಯಲಾಗುತ್ತದೆ. ಅದರಲ್ಲಿ ಉಳಿದಿರುವ ನೈವೇದ್ಯವನ್ನು ಭಗವಂತ ಆಶೀರ್ವದಿಸಿ ನೀಡಿದ ಪ್ರಸಾದವೆಂದು ಎಲ್ಲರೂ ಸ್ವೀಕರಿಸುತ್ತಾರೆ” ಎಂದು ಗುರುದೇವರು ಹೇಳುತ್ತಾರೆ. ಭಗವಂತನಿಗೆ ಸಾಂಕೇತಿಕವಾಗಿ ಬಡಿಸದೆ, ಅತ್ಯಂತ ಹಸಿದಿರುವ ಮನೆಯ ಸದಸ್ಯರಿಗೆ ಬಡಿಸಿದಷ್ಟೇ ಬಡಿಸುತ್ತಾರೆ. ದೇವರು, ದೇವ ದೇವತೆಯರು ಯಾವಾಗಲೂ ದೇವರಮನೆಯಲ್ಲಿಯೇ ಇರುವುದಿಲ್ಲ ಎನ್ನುವುದು ನಿಜ. ಅವರು ಮನೆಯ ಎಲ್ಲೆಡೆ ಮುಕ್ತವಾಗಿ ಸಂಚರಿಸುತ್ತಾರೆ. ಮನೆಯ ಎಲ್ಲರನ್ನೂ, ಅತಿಥಿಗಳು ಹಾಗೂ ಮಿತ್ರರನ್ನು ಗಮನಿಸುತ್ತಾ, ಅವರ ಮಾತುಗಳನ್ನು ಆಲಿಸುತ್ತಿರುತ್ತಾರೆ. ಕುಟುಂಬದವರೇ ದೇವರ ಮನೆಯಲ್ಲಿ ವಾಸಿಸುತ್ತಿದ್ದಾರೆ, ದೇವರು ಕುಟುಂಬದವರ ಮನೆಯಲ್ಲಿ ವಾಸಿಸುತ್ತಿಲ್ಲ ಎಂಬ ಕಾರಣದಿಂದಾಗಿ ಭಗವಂತನ ದನಿ ಅವರ ಅಂತರ್ವಾಣಿಯಾಗಿ ಸುಲಭವಾಗಿ ಕೇಳಿಬರುತ್ತದೆ.”

ಗುರುದೇವರು ನಮ್ಮೆಲ್ಲರಿಗೂ ಸವಾಲು ಹಾಕಿದ್ದಾರೆ: “ನಿಜವಾಗಿ ನಮ್ಮ ಮನೋವಿಜ್ಞಾನ ಮತ್ತು ನಿರ್ಧಾರ ಮತ್ತು ಧರ್ಮ ಯಾವುದು? ‘ನಾವು ದೇವರೊಂದಿಗೆ ಜೀವಿಸುತ್ತೇವೆಯೋ, ಅಥವಾ ದೇವರು ಕೆಲವೊಮ್ಮೆ ನಮ್ಮನ್ನು ಭೇಟಿಯಾಗಲು ಬರುತ್ತಾನೆಯೇ?’ ಮನೆಯ ಅಧಿಕಾರ ಯಾರ ಬಳಿಯಲ್ಲಿದೆ? ಧಾರ್ಮಿಕನಲ್ಲದ, ಅಜ್ಞಾನಿ, ಸರ್ವಾಧಿಕಾರಿಯಾದ ಕುಟುಂಬದ ಹಿರಿಯರೊಬ್ಬರ ಬಳಿಯೇ? ಅಥವಾ ಮನೆಯ ಹಿರಿಯರನ್ನೂ ಒಳಗೊಂಡಂತೆ ಕುಟುಂಬದ ಎಲ್ಲ ಸದಸ್ಯರೂ ತಾವು ಭಗವಂತನ ಆಶ್ರಮದಲ್ಲಿ ಬಾಳುತ್ತಾ, ಅವನಿಗೆ ಆತ್ಮಸಮರ್ಪಣ ಮಾಡಿಕೊಂಡಿದ್ದೇವೆಂದು ತಿಳಿದು, ತಲೆಬಾಗಿ ನಮಿಸುವ ಆ ಭಗವಂತನ ಬಳಿಯಲ್ಲಿದೆಯೇ? ಇದುವೇ ಧರ್ಮ; ಇದುವೇ ಈಶ್ವರಪೂಜನ.”